ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸುವ ಕುರಿತಂತೆ ತಮಿಳುನಾಡು ರಾಜಕಾರಣಿಗಳು ನಡೆದುಕೊಳ್ಳುತ್ತಿರುವ ರೀತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಎರಡೂ ರಾಜ್ಯಗಳು ಸೌಹಾರ್ದತೆ ಕಾಪಾಡಿಕೊಳ್ಳುವ ವಿಚಾರದಲ್ಲಿ ತಮಿಳುನಾಡಿನ ಮನೋಭಾವ ಇನ್ನು ಬದಲಾಗಿಲ್ಲ ಎಂದು ಕಿಡಿ ಕಾರಿದ್ದಾರೆ.
ಅಲ್ಲದೆ, ಕಾವೇರಿ ನದಿ ನೀರಿನ ಹಂಚಿಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶದಂತೆ ಮಂಡಳಿ ರಚನೆ ಅಥವಾ ಸ್ಕೀಂ ರೂಪಿಸುವ ಮುನ್ನ ಎರಡೂ ರಾಜ್ಯಗಳ ಅಭಿಪ್ರಾಯಗಳನ್ನು ಆಲಿಸುವ ಮೂಲಕ ನೀರು ಹಂಚಿಕೆ ವಿಚಾರದಲ್ಲಿ ಆಗಿರುವ ಅನ್ಯಾಯಗಳನ್ನು ಸರಿಪಡಿಸುವಂತಹ ನಿರ್ಣಯ ಕೈಗೊಳ್ಳಬೇಕು ಎಂದು ಇದೇ ವೇಳೆ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವೇಗೌಡರು, ಕನ್ನಡಿಗರನ್ನು ಪ್ರಚೋದಿಸಬೇಕು ಎಂದು ನಾನು ಮಾತನಾಡುತ್ತಿಲ್ಲ. ನಮಗಾಗಿರುವ ಅನ್ಯಾಯ ಹೇಳುತ್ತಿದ್ದೇನೆ. ಮಂಡಳಿ ರಚನೆಗೆ ಆಗ್ರಹಿಸಿ ತಮಿಳುನಾಡಿನ ಮುಖಂಡರು ಮಾಡುತ್ತಿರುವುದೇನು? ಮುಖ್ಯಮಂತ್ರಿ, ಮಂತ್ರಿಗಳು ಧರಣಿ ಮಾಡುತ್ತಾರೆ. ಸಂಸದರು ಸಂಸತ್‌ಸಭೆಯಲ್ಲಿ ಪ್ರತಿಭಟನೆ ನಡೆಸಿ ಕಲಾಪ ನಡೆಯದಂತೆ ನೋಡಿಕೊಳ್ಳುತ್ತಾರೆ. ಇವರ ಉದ್ದೇಶವೇನು? ಸಮಸ್ಯೆ ಬಗೆಹರಿಯಬೇಕೆಂಬುದೇ ಅಥವಾ ಕನ್ನಡಿಗರನ್ನು ಪ್ರಚೋದಿಸುವುದೇ ಎಂದು ಪ್ರಶ್ನಿಸಿದರು. ಅಲ್ಲದೆ, 1896ರಿಂದಲೂ ಕಾವೇರಿ ವಿಚಾರದಲ್ಲಿ ಅನ್ಯಾಯಕ್ಕೊಳಗಾದ ನಮಗೂ ಹೋರಾಟ ಮಾಡಲು ಬರುತ್ತದೆ ಎಂದು ತಮಿಳುನಾಡಿಗೆ ಎಚ್ಚರಿಕೆ ನೀಡಿದರು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಂಬಂಧ ಆರು ವಾರಗಳಲ್ಲಿ ನಿರ್ಧಾರ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಈ ಅಲ್ಪಾವಧಿಯಲ್ಲಿ ನಿರ್ಧಾರ ಸಾಧ್ಯವಿಲ್ಲ ಎಂದು ಕೇಂದ್ರ ಜಲ ಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಹೇಳಿದ್ದು, ಅದರಂತೆ ಕಾಲಾವಕಾಶ ಕೇಳಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಮಾಣಪತ್ರ ಸಲ್ಲಿಸಿದೆ. ಇದನ್ನು ಧಿಕ್ಕರಿಸಿ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರದ ವಿರುದ್ಧ ನ್ಯಾಯಾಂಗ ನಿಂದನೆ ಹೂಡಿದೆ. ಇನ್ನೊಂದೆಡೆ ತಮಿಳುನಾಡು ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟ ಸದಸ್ಯರು ಧರಣಿ ಕುಳಿತಿದ್ದಾರೆ.
ಇನ್ನೊಂದೆಡೆ ಆ ರಾಜ್ಯದ ಸಂಸದರು ಸಂಸತ್ತಿನಲ್ಲಿ ಪ್ರತಿಭಟನೆ ನಡೆಸಿ ಕಲಾಪ ನಡೆಯದಂತೆ ನೋಡಿಕೊಂಡು ಕೇಂದ್ರದ ಮೇಲೆ ಒತ್ತಡ ಹೇರುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರ ಸರ್ಕಾರ ಈ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.
ಗಡ್ಕರಿ ಬಗ್ಗೆ ಪ್ರಶಂಸೆ
6 ವಾರದಲ್ಲಿ ಕಾವೇರಿ ನದಿ ನೀರು ನಿರ್ವಹಣಾ ಮಂಡಳಿ ರಚಿಸಬೇಕು ಎಂದು ಸುಪ್ರೀ ಕೋರ್ಟ್ ತೀರ್ಪು ನೀಡಿದ ಬಳಿಕ
ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದೆ. ನನ್ನ ಎಲ್ಲಾ ಮಾತುಗಳನ್ನೂ ತಾಳ್ಮೆಯಿಂದ ಆಲಿಸಿದ ಅವರು, ಕಾವೇರಿ
ವಿಚಾರದಲ್ಲಿ ಮೊದಲಿನಿಂದಲೂ ಕರ್ನಾಟಕದ ಬಗ್ಗೆ ತಪ್ಪು ಗ್ರಹಿಕೆ ಇದೆ. ನೀವೇಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಿಲ್ಲ ಎಂದರು. ಅದಕ್ಕೆ ನಾನು, ರಾಜ್ಯ ಆ ನಿಟ್ಟಿನಲ್ಲಿ ಯೋಚಿಸಿಲ್ಲ. ನೀವು ಮರು ಪರಿಶೀಲನಾ ಅರ್ಜಿ ಸಲ್ಲಿಸಿ ನಮಗೆ ನ್ಯಾಯ ಕೊಡಿಸಿ ಎಂದು ಹೇಳಿದೆ. ಅರ್ಜಿ ಸಲ್ಲಿಸುವ ಕುರಿತು ಕ್ರಮಕ್ಕೆ ಕೂಡಲೇ ಜತೆಗಿದ್ದ ಅಧಿಕಾರಿಗಳಿಗೆ ಸೂಚಿಸಿದರು. ಅದರಂತೆ ಕೇಂದ್ರ ಸರ್ಕಾರಸುಪ್ರೀಂ ಕೋರ್ಟ್ ಆದೇಶದಂತೆ ಕ್ರಮ ಕೈಗೊಳ್ಳಲು ಕಾಲಾವಕಾಶ ಕೇಳಿದೆ. ಗಡ್ಕರಿ ಅವರು ನಡೆದುಕೊಂಡ ರೀತಿ ನೋಡಿದರೆ ರಾಜ್ಯಕ್ಕೆ ನ್ಯಾಯ ಸಿಗುತ್ತದೆ ಎಂಬ ವಿಶ್ವಾಸವಿದೆ ಎಂದು ನಿತಿನ್ ಗಡ್ಕರಿ ಬಗ್ಗೆ ದೇವೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು.
ಕಾವೇರಿ ನೀರಿಗಾಗಿ ಸಂಸತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ. ಆದರೆ, ರಾಜ್ಯದ ಕೇಂದ್ರ ಸಚಿವರು ರಾಜೀನಾಮೆ ನೀಡುತ್ತಾರೆಯೇ? ಅಂತಿಮ ತೀರ್ಪು ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲು ಮುಂದಾದಾಗ ಹೋರಾಟಕ್ಕೆ ಕೈಜೋಡಿಸಿ ಎಂದು ಅನಂತಕುಮಾರ್ ಬಳಿ ಕೇಳಿದರೆ ಅವರು ಸಹಕರಿಸಲಿಲ್ಲ.
– ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ