ಹಾಸನ: ಮುಂದಿನ ಲೋಕಸಭಾ ಚುನಾವಣೆಗೆ ನಾನು ಸ್ಪರ್ಧಿಸಲ್ಲ. ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್ ಮುಖಂಡರೂ ಒಪ್ಪಿದರೆ ಪ್ರಜ್ವಲ್ ರೇವಣ್ಣರನ್ನು ಲೋಕಸಭೆಗೆ ಕಳುಹಿಸಬೇಕೆಂಬುದು ನನ್ನ ಅಭಿಪ್ರಾಯ’ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಮಾತನಾಡಿ, “ವಿಧಾನಸಭಾ ಚುನಾವಣೆಯಲ್ಲಿ ಪ್ರಜ್ವಲ್ ಸ್ಪರ್ಧೆ ಬೇಡ. ಪ್ರಜ್ವಲ್ ರೇವಣ್ಣ ಪದವೀಧರ, ಲೋಕಸಭಾ ಸದಸ್ಯನಾಗುವ ಅರ್ಹತೆಯಿದೆ.
ಆದರೆ, ಆತ ರಾಜ್ಯ ರಾಜಕಾರಣದಲ್ಲಿಯೇ ಇರಬೇಕೆಂದು ಬಯಸಿ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದಾನೆ. ಅದು ಸಹಜ. ಕಳೆದ 7 ವರ್ಷಗಳಿಂದ ಆತ ಪಕ್ಷ ಸಂಘಟನೆಗಾಗಿ ಓಡಾಡಿದ್ದಾನೆ. ಆತ ಜನರ ಮುಂದೆ ಹೋಗಿ ಪರೀಕ್ಷೆಗೆ ಗುರಿಯಾಗಬೇಕು ಎಂಬುದು ನನ್ನ ಬಯಕೆ’ ಎಂದರು.
“ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಿದ್ಧತೆ ಮಾಡಿಕೊಳ್ಳಿ ಎಂದು ಹಾಸನ ಜಿಲ್ಲೆಯ ಎಲ್ಲಾ ಜೆಡಿಎಸ್ ಮುಖಂಡರನ್ನೂ ಕೇಳಿದೆ. ಆದರೆ ಯಾರೂ ಒಪ್ಪುತ್ತಿಲ್ಲ. ಹಾಗಾಗಿ ಪ್ರಜ್ವಲ್ ರೇವಣ್ಣರನ್ನು ಸ್ಪರ್ಧೆಗಿಳಿಸಲು ಚಿಂತನೆ ನಡೆಸಿದ್ದೇನೆ. ನನಗೆ ಈಗ 85 ವರ್ಷ. ಮಾನಸಿಕವಾಗಿ ಹುರುಪಿದ್ದರೂ ಆರೋಗ್ಯದ ದೃಷ್ಠಿಯಿಂದ ಸಾಧ್ಯವಾಗದು. ನಾನು ಲೋಕಸಭೆಗೆ ವೀಲ್ ಚೇರ್‌ನಲ್ಲಿ ಹೋಗಲು ಬಯಸುವುದಿಲ್ಲ. ಹಾಗೆಂದು ಮನೆಯಲ್ಲಿ ಕುಳಿತುಕೊಳ್ಳುವುದಿಲ್ಲ. ಮಾರ್ಗದರ್ಶನ ನೀಡುತ್ತೇನೆ’ ಎಂದರು