ಕಲಬುರಗಿ: ಇತ್ತೀಚೆಗೆ ನಿಧನರಾದ ಹಿರಿಯ ವಕೀಲ ಸಾದತ್ ಹುಸೇನ್ ಉಸ್ತಾದ್ ಅವರ ನಿವಾಸಕ್ಕೆ ಬುಧವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಭೇಟಿ ಕೊಟ್ಟು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸಾದತ್ ಹುಸೇನ್ ಉಸ್ತಾದ್ ಆತ್ಮೀಯ ಸ್ನೇಹಿತರಾಗಿದ್ದರು. ಹಲವು ವರ್ಷಗಳ ಹಿಂದೆ ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ನಾನು ಮೊದಲ ಬಾರಿಗೆ ಅವರನ್ನು ಭೇಟಿಯಾಗಿದ್ದೆ ಎಂದು ದೇವೇಗೌಡರು ಸ್ಮರಿಸಿದರು.
ಬಡವರಿಗೆ ಅನೇಕ ರೀತಿಯಲ್ಲಿ ಅವರು ಸಹಾಯ ಮಾಡುತ್ತಿದ್ದರು. ಆಸ್ಪತ್ರೆಯಲ್ಲಿ ಎರಡು ತಿಂಗಳ ಕಾಲ ಕುಟುಂಬದವರು ಉತ್ತಮವಾದ ಚಿಕಿತ್ಸೆ ಕೊಡಿಸಿ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನವನ್ನು ಮಾಡಿದ್ದರು. ಆದರೆ, ದೇವರ ಕೃಪೆ ಅಷ್ಟೇ ಇತ್ತು ಅನ್ಸುತ್ತೆ. ಅವರ ನಿಧನವಾದ ನಂತರ ದೂರವಾಣಿ ಮೂಲಕ ನನಗೆ ಮಾಹಿತಿ ನೀಡಿದ್ದರು. ಆದರೆ, ಆವತ್ತು ನಾನು ಬೇರೆ ಕಡೆ ಇದ್ದೆ. ಹೀಗಾಗಿ ಅಂದು ಬರಲು ಆಗಿರಲಿಲ್ಲ ಎಂದರು.
ಈ ಸಂದರ್ಭದಲ್ಲಿ ಸಾದತ್ ಹುಸೇನ್ ಉಸ್ತಾದ್ ಪುತ್ರರಾದ ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ನಾಸೀರ ಹುಸೇನ್ ಉಸ್ತಾದ್, ಜಾಕಿರ್ ಹುಸೇನ್ ಉಸ್ತಾದ್ ಹಾಗೂ ಕುಟುಂಬದ ಸದಸ್ಯರಿಗೆ ದೇವೇಗೌಡರು ಧೈರ್ಯ ತುಂಬಿದರು. ಗೆಳೆಯ ಕಳೆದುಕೊಂಡೆ: ಸಾದತ್ ಹುಸೇನ್ ಉಸ್ತಾದ್ ನಿಧನದ ಬಳಿಕ ಆತ್ಮೀಯ ಗೆಳೆಯನನ್ನು ನಾನು ಕಳೆದುಕೊಂಡಂತೆ ಆಗಿದೆ. ನನ್ನೊಂದಿಗೆ ಉತ್ತಮ ಒಡನಾಟವನ್ನು ಅವರು ಹೊಂದಿದ್ದರು ಎಂದು ಹಿರಿಯ ನಾಯಕ ಖರ್ಗೆ ಹೇಳಿದರು.
ಕಾಂಗ್ರೆಸ್ ಪಕ್ಷದಲ್ಲಿ ಸಾದತ್ ಹುಸೇನ್ ಉಸ್ತಾದ್ ಸಕ್ರಿಯವಾಗಿದ್ದರು. ಜಿಲ್ಲೆಯ ಪ್ರಗತಿ ಬಗ್ಗೆ ಅವರಿಗೆ ಸಾಕಷ್ಟು ಕಾಳಜಿ ಇತ್ತು. ಅನೇಕ ಸಂದರ್ಭದಲ್ಲಿ ಜಿಲ್ಲೆ ಮತ್ತು ಪಕ್ಷದ ನನ್ನೊಂದಿಗೆ ಚರ್ಚೆ ಮಾಡುತ್ತಿದ್ದರು ಎಂದು ನೆನಪು ಮಾಡಿಕೊಂಡರು. ಮಾಜಿ ಸಚಿವ ಡಾ| ಶರಣಪ್ರಕಾಶ ಪಾಟೀಲ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಅಲಮಪ್ರಭು ಪಾಟೀಲ, ತಿಪಣ್ಣಪ್ಪ ಕಮಕನೂರ, ಕಾಂಗ್ರೆಸ್ ಜಿಲ್ಲಾದ್ಯಕ್ಷ ಜಗದೇವ ಗುತ್ತೇದಾರ, ಮುಖಂಡರಾದ ಆಲಂಖಾನ್, ಸೂರ್ಯಕಾಂತ ಕೋರಳ್ಳಿ, ಉಸ್ತಾದ್ ಗುತ್ತೇದಾರ, ಕೃಷ್ಣಾ ರೆಡ್ಡಿ, ಸಾದತ್ ಕಲ್ಯಾಣಿ, ಆಲಂ ಇನಾಮದಾರ, ಮಲಿಕ್ ನಾಗನಳ್ಳಿ, ವಿಜಯಕುಮಾರ ಚಿಂಚನಸೂರ, ಮಜರ್ ಹುಸೇನ್ ಇದ್ದರು.