ಬೆಂಗಳೂರು : ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆ ವಿಚಾರದಲ್ಲಿ ದೇವೇಗೌಡರು ಹಸ್ತಕ್ಷೇಪ ನಡೆಸಿಲ್ಲ. ಅವರ ಯಾವ ಪಾತ್ರವೂ ಇಲ್ಲ, ರೇವಣ್ಣ ಅವರಿಗೆ ಇಂಧನ ಖಾತೆ ನೀಡಲು ಪರ ವಹಿಸಿಯೂ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ ‘ಅದೇನೋ ದೇವೇಗೌಡರು ಪವರ್‌ಸ್ಟ್ರೋಕ್ ನೀಡಿದ್ದಾರೆ ಅಂತ ಮಾಧ್ಯಮಗಳಲ್ಲಿ ಪ್ರಕಟವಾಗಿದೆಯಲ್ಲಾ, ಅದೆಲ್ಲಾ ಕಪೋಲಕಲ್ಪಿತ.ಮಾಧ್ಯಮಗಳು ಸತ್ಯಾಂಶ ತಿಳಿದು ವರದಿ ಮಾಡಬೇಕು’ ಎಂದರು
‘ಈ ಹಿಂದೆ ರೇವಣ್ಣ ಇಂಧನ ಸಚಿವರಾಗಿ ಕೆಲಸ ಮಾಡಿದ್ದರು, ಡಿ.ಕೆ .ಶಿವಕುಮಾರ್ ಅವರು ಆ ಖಾತೆ ನಿರ್ವಹಿಸಿದ್ದರು. ಇಬ್ಬರೂ ಆ ಖಾತೆ ಕೇಳಿದ್ದು ನಿಜ.ಆದರೆ ಯಾವುದೇ ಜಟಾಪಟಿ ನಡೆದಿಲ್ಲ.ಎಲ್ಲವೂ ಉಹಾಪೋಹದ ಸುದ್ದಿ’ ಎಂದರು.
ರಾಜ್ಯದ ಆಡಳಿತ ನಿರ್ವಹಣೆಯ ವಿಚಾರದಲ್ಲಿ ಸಹಕಾರಿಯಾಗಲೆಂದು ನಾನು ಹಣಕಾಸು ಖಾತೆ ಕೇಳಿದ್ದು ನಿಜ . ಆ ಖಾತೆ ನಮಗೆ ದೊರಕಿದ್ದು, ಕೊಡು,ಕೊಳ್ಳುವಿಕೆಯ ನೀತಿಯನ್ವಯ ಖಾತೆಗಳನ್ನು ಹಂಚಿಕೆ ಮಾಡಿಕೊಳ್ಳಲಾಗಿದೆ ಎಂದರು.
ಈ ಹಿಂದಿನ ಸರ್ಕಾರದ ಜನರಿಗೆ ಅನುಕೂಲವಾಗುವ ಎಲ್ಲಾ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದರು.
ಕಾವೇರಿ ಚರ್ಚೆಗೆ ಸಭೆ
ಕಾವೇರಿ ನದಿ ಪ್ರಾಧಿಕಾರದ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ಆ ಕುರಿತು ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ತಜ್ಞರ ಸಮಿತಿಯ ಸಭೆ ಕರೆದಿದ್ದು, ಚರ್ಚೆ ಬಳಿಕ ರಾಜ್ಯ ಸರ್ಕಾರದ ನಿಲುವನ್ನು ತಿಳಿಸುತ್ತೇವೆ ಎಂದರು.