Advertisement

ಶ್ರೀಕಂಠನ ಸನ್ನಿಧಿಯಲ್ಲಿ ದೇವೇಗೌಡ ದಂಪತಿ

12:47 PM Mar 03, 2017 | |

ನಂಜನಗೂಡು: ಜೆಡಿಎಸ್‌ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡರು ಪತ್ನಿ ಚೆನ್ನಮ್ಮ ಸಮೇತರಾಗಿ ಗುರುವಾರ ನಂಜನಗೂಡಿಗೆ ಆಗಮಿಸಿ ಶ್ರೀಕಂಠೇಶ್ವರ ಸ್ವಾಮಿ ಹಾಗೂ ಪಾರ್ವತಿ ದೇವಿಯ ದರ್ಶನ ಪಡೆದರು.

Advertisement

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ತಂದೆ-ತಾಯಿಯವರ ಜೊತೆ 3 ವರ್ಷದ ಬಾಲಕನಿದ್ದಾಗಿನಿಂದಲೂ ಶ್ರೀಕಂಠೇಶ್ವರ ಸ್ವಾಮಿ ಹಾಗೂ ಪಾರ್ವತಿ ದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸುತ್ತಿದ್ದೇನೆ. ಹಲವು ಔಷಧಿಗಳಿಂದಲೂ ವಾಸಿಯಾಗದಿದ್ದ ತಮ್ಮ ಕಾಯಿಲೆಯು ಇಲ್ಲಿ ಹರಕೆ ತೀರಿಸಿದ ನಂತರ ಗುಣವಾಯಿತು ಎಂದರು.

ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರಧಾನಿಗಳನ್ನು ದೇವಾಲಯದ ಸಹಾಯಕ ಅಧಿಕಾರಿ ಗಂಗಯ್ಯ, ಆಗಮಿಕ ನಾಗಚಂದ್ರ ದೀಕ್ಷಿತ್‌, ಸ್ಥಳ ಪುರೋಹಿತ ಸಪ್ತರ್ಷಿ ಜೋಯಿಸ್‌ ವಿಶ್ವನಾಥ ದೀಕ್ಷಿತ್‌, ಎನ್‌.ಎ.ಸದಾಶಿವು, ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ತಾಲೂಕು ಅಧ್ಯಕ್ಷ ಆರ್‌.ವಿ. ಮಹದೇವಸ್ವಾಮಿ, ಭಾಸ್ಕರ್‌, ಶಿವಕುಮಾರ್‌, ಸಣ್ಣಪ್ಪಗೌಡ, ಗಿ.ಕಿಟ್ಟಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಬರಮಾಡಿಕೊಂಡರು.

ಡೈರಿ ರಾಜಕಾರಣದಿಂದ ಅಸಹ್ಯ ವಾತಾವರಣ…
ರಾಜ್ಯ ಹಾಗೂ ರಾಷ್ಟ್ರದ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಮಾಜಿ ಪ್ರಧಾನಿಗಳು, ಪ್ರಸ್ತುತ ಡೈರಿ ವಿಷಯ ರಾಜಕಾರಣದಲ್ಲಿ ಅಸಹ್ಯ ವಾತಾವರಣ ಸೃಷ್ಟಿಸಿದೆ. ಇದರಲ್ಲಿ ಕಾಂಗ್ರೆಸ್‌ ಹೆಚ್ಚು ಬಿಜೆಪಿ ಕಡಿಮೆ ಎಂದೇನಿಲ್ಲ. ಎರಡೂ ಪಕ್ಷಗಳು ಅಸಹ್ಯಕರ ವಾತಾವರಣ ನಿರ್ಮಿಸುವಲ್ಲಿ ನಿರತವಾಗಿವೆ. ಇವುಗಳಿಗೆ ಜನರೇ ಪಾಠ ಕಲಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ರಾಷ್ಟ್ರೀಯ ಪಕ್ಷ ಗಳಿಂದ ಅನ್ಯಾಯ
ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕೆ ಹಿಂದಿನಿಂದಲೂ ಅನ್ಯಾಯ ವಾಗುತ್ತಲೇ ಇದೆ. ಕಾವೇರಿ ವಿಷಯವನ್ನೇ ತೆಗೆದು ಕೊಳ್ಳೋಣ. ನಮಗೆ 19, ತಮಿಳುನಾಡಿಗೆ 30 ಟಿಎಂಸಿ ನೀರು. ಉಳಿದ ನೀರಿಗೆ ಇನ್ನೊಂದು ಜಲಾಶಯ ನಿರ್ಮಿಸಿಕೊಂಡು ಕಷ್ಟ ಕಾಲದಲ್ಲಿ ಇಬ್ಬರೂ ಹಂಚಿಕೊಳ್ಳಬಹುದು. ಆದರೆ ಇದು ಯಾರಿಗೂ ಬೇಕಾಗಿಲ್ಲ ಎಂದ ಮಾಜಿ ಪ್ರಧಾನಿಗಳು, ನಾನಾ ಕಾರಣಗಳಿಂದಾಗಿ ತಪ್ಪು ಮಾಡುವ ನಾವು ಅದನ್ನು ಕ್ಷಮಿಸು ಎಂದು ಕೇಳಲಾದರೂ ದೇವಾಲಯಕ್ಕೆ ಬರಬೇಕಲ್ಲಾ ಎಂದು ಮಾರ್ಮಿಕವಾಗಿ ನುಡಿದರು.

Advertisement

ಸೋತರೂ ಎಂಎಲ್‌ಸಿ ಮಾಡ್ತೀನಿ ಎಂದಿದ್ದೆ…
ನಂಜನಗೂಡು ತಾಲೂಕು ಜಾತ್ಯತೀತ ಜನತಾದಳದ ಮಾಜಿ ಅಧ್ಯಕ್ಷ ಕಳಲೆ ಕೇಶವಮೂರ್ತಿಯವರು ಕಾಂಗ್ರೆಸ್‌ಗೆ ಸೇರಲು ನೀವೇ ಆಶೀರ್ವಾದ ಮಾಡಿದ್ದೀ ರಂತೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಳಲೆ ಕೇಶವಮೂರ್ತಿ ಜಿಲ್ಲಾಧ್ಯಕ್ಷರ ಜೊತೆ ಬಂದಿದ್ದರು. ಎರಡು ಬಾರಿ ಸೋತಿರುವ ನಿಮ್ಮ ಮೇಲೆ ಜನರಿಗೆ ಅನುಕಂಪವಿದೆ. ಮುಂದಿನ ಚುನಾವಣೆಯಲ್ಲಿ ಜನರೇ ನಿಮ್ಮ ಕೈಹಿಡಿಯುತ್ತಾರೆ.

ಮುಂದಿನ ಚುನಾವಣೆ ಸಂದರ್ಭದಲ್ಲಿ ತಾವೇ ಖುದ್ದಾಗಿ ಬಂದು ಒಂದು ವಾರಗಳ ಕಾಲ ನಂಜನಗೂಡಲ್ಲಿ ವಾಸವಿದ್ದು, ಪ್ರಚಾರ ಮಾಡುವುದಾಗಿ ಹೇಳಿದ್ದೆ. ಒಂದು ವೇಳೆ ಸೋತರೆ ವಿಧಾನಪರಿಷತ್‌ಗೆ ಕಳುಹಿಸುವ ಜವಾಬ್ದಾರಿ ನನ್ನದು ಎಂದು ಭರವಸೆ ನೀಡಿದ್ದೆ. ಆದರೆ ಆ ಮಾಹಶಯ ನೇರವಾಗಿ ಹೋಗಿ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ್ದಾನೆ. ಅದಕ್ಕೆ ನಾನೇನು ಮಾಡಲಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next