ಮಂಡ್ಯ/ಹಾಸನ: ತಮ್ಮ ವಿರುದ್ಧ ಕೇಳಿ ಬರುತ್ತಿರುವ ಕುಟುಂಬ ರಾಜಕಾರಣದ ಬಗೆಗಿನ ಟೀಕೆಗಳಿಗೆ ತಲೆ ಕೆಡಿಸಿಕೊಳ್ಳದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ತಮ್ಮ ಮೊಮ್ಮಕ್ಕಳು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು “ಗ್ರೀನ್ ಸಿಗ್ನಲ್’ ಕೊಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಅವರು ಹೊಳೆನರಸೀಪುರದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯ ಮತ್ತು ಮೂಡಲಹಿಪ್ಪೆ ಗ್ರಾಮದ ಶ್ರೀ ಚನ್ನಕೇಶವ ದೇವಾಲಯಗಳಲ್ಲಿ ಪೂಜೆ ಸಲ್ಲಿಸುವ ಮೂಲಕ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಚಾರಕ್ಕೆ ಚಾಲನೆ ನೀಡಿದರು. ಸ್ವತ: ದೇವೇಗೌಡ ಪ್ರಚಾರಕ್ಕೆ ಸಾಥ್ ನೀಡಿದರು.
ಈ ಮಧ್ಯೆ ಮಂಡ್ಯ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಗುರುವಾರ ನಿಖಿಲ್ ಕುಮಾರಸ್ವಾಮಿ ಹೆಸರನ್ನು ಗೌಡರು ಘೋಷಿಸಲಿದ್ದು, ಬುಧವಾರ ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿಯ ಜುಂಜಪ್ಪ ದೇವಾಲಯದಲ್ಲಿ ನಿಖೀಲ್ ಪೂಜೆ ಸಲ್ಲಿಸುವ ಮೂಲಕ ಪ್ರಚಾರಕ್ಕೆ ನಾಂದಿ ಹಾಡಿದರು.
ಕುಟುಂಬದ ಸಂಪ್ರದಾಯ ದಂತೆ ಹೊಳೆನರಸೀಪುರದ ದೇವಾಲಯಗಳಲ್ಲಿ ಪ್ರಜ್ವಲ್ ರೇವಣ್ಣ ಕುಟುಂಬ ಪೂಜೆ ನೆರವೇರಿಸಿತು. ಪೂಜೆ ಸಲ್ಲಿಸುವ ವೇಳೆ ಬಟ್ಟೆಯಲ್ಲಿ ಸುತ್ತಿದ ಒಂದು ವಸ್ತುವಿದ್ದು, ಅದು ಬಿ’ ಫಾರಂ ಎನ್ನಲಾಗಿದೆ. ಆದರೆ ಅದನ್ನು ಪಕ್ಷದ ಯಾವ ಮುಖಂಡರೂ ದೃಢಪಡಿಸಲಿಲ್ಲ. ಈ ಸಂದರ್ಭದಲ್ಲಿ ದೇವೇಗೌಡರು, ರೇವಣ್ಣ, ಪ್ರಜ್ವಲ್ ರೇವಣ್ಣ ಅವರ ಕಣ್ಣಾಲಿಗಳು ತುಂಬಿ ಬಂದವು.
ನಾನೇ ಮಂಡ್ಯದ ಅಭ್ಯರ್ಥಿ: ನಿಖಿಲ್
ಮದ್ದೂರು: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರ ದಿಂದಲೇ ಸ್ಪರ್ಧಿಸುವುದಾಗಿ ನಿಖಿಲ್ ಕುಮಾರಸ್ವಾಮಿ ಘೋಷಣೆ ಮಾಡಿದ್ದಾರೆ.
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಗೊಲ್ಲರದೊಡ್ಡಿಯ ಜುಂಜಪ್ಪ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಕ್ಷೇತ್ರ ಬದಲಾವಣೆ ಕೇವಲ ಊಹಾಪೋಹ. ಪ್ರಸಿದ್ಧ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ, ಅಧಿಕೃತವಾಗಿ ಪ್ರಚಾರ ಆರಂಭಿಸುತ್ತಿದ್ದೇನೆ. ಜಿಲ್ಲೆಯ ಪ್ರಮುಖ ನಾಯಕರು, ಚುನಾಯಿತ ಸದಸ್ಯರು, ಪಕ್ಷದ ಮುಖಂಡರೊಂದಿಗೆ ಪ್ರಚಾರ ಕೈಗೊಳ್ಳುತ್ತೇನೆ ಎಂದರು.