Advertisement

ಸಿಎಂ ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ

10:20 AM Dec 14, 2017 | Team Udayavani |

ಬೆಂಗಳೂರು:ರಾಜ್ಯದಲ್ಲಿ ದಲಿತ ಸಮುದಾಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಡೆದು ಚೂರು ಮಾಡಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದಾರೆ. ಈ ಸರ್ಕಾರ ಕೊತ್ತೂಗೆಯಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಗುಡುಗಿದ್ದಾರೆ.

Advertisement

ದಲಿತ ಸಮುದಾಯವನ್ನು ಒಡೆದು ಆಳಲೆಂದೇ ಸಿದ್ದರಾಮಯ್ಯ ಇಬ್ಬರು ಸಚಿವರನ್ನು ಬಿಟ್ಟಿದ್ದಾರೆ. ಲಿಂಗಾಯಿತ ಸಮುದಾಯವನ್ನು ನುಚ್ಚುನೂರು ಮಾಡಿ ದಲಿತ ಸಮುದಾಯಕ್ಕೆ ಕೈ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಅರಮನೆ ಮೈದಾನದಲ್ಲಿ ಬುಧವಾರ ಆಯೋಜಿಸಿದ್ದ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ  ಮೂಲಕ  “ಜೆಡಿಎಸ್‌ ನಿಮ್ಮೊಂದಿಗಿದೆ -ನಿಮ್ಮ ಆರ್ಶೀವಾದ ನಮಗಿರಲಿ’ ಎಂಬ ಮನವಿ ಮಾಡಿದ ಅವರು, ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಮಾಡಲು ದಲಿತ ಸಮುದಾಯ ಒಂದಾಗಿ ಕೈ ಜೋಡಿಸಬೇಕು ಎಂದು ಕೋರಿದರು.

ಚುನಾವಣೆಯಲ್ಲಿ ಮಾತ್ರ ಅಂಬೇಡ್ಕರ್‌ ಹೆಸರನ್ನು ಬಳಕೆ ಮಾಡಲು ಕಾಂಗ್ರೆಸ್‌ ಹೊರಟಿದೆ. ದಲಿತ ವರ್ಗಕ್ಕೆ ಆದ ಅನ್ಯಾಯವೇ ಕಾಂಗ್ರೆಸ್‌ ಇಂದು ದೇಶದಲ್ಲಿ ಕುಸಿತ ಕಂಡಿರುವುದಕ್ಕೆ ಸಾಕ್ಷಿ. ಕಾಂಗ್ರೆಸ್‌ನಿಂದ ಡಾ.ಬಿ.ಆರ್‌. ಅಂಬೇಡ್ಕರ್‌ ವಿಚಾರದಲ್ಲಿ ಏನೇನು ಅನ್ಯಾಯ ಆಯ್ತು ಎಂಬುದು ಹಳೇ ವಿಚಾರ. ಆದರೆ, ದಲಿತರಿಗೆ  ಈಗಿನ ಕಾಂಗ್ರೆಸ್‌ ಸರ್ಕಾರದಲ್ಲಿ ಏನಾಗ್ತಿದೆ ಎಂಬುದು ಹೊಸ ವಿಚಾರ ಎಂದರು.

ಲೇವಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವ ಕರ್ನಾಟಕ ನಿರ್ಮಾಣ ಮಾಡ್ತೀನಿ ಅಂತ ಯಾತ್ರೆ ಹೊರಟಿದ್ದಾರೆ. ಮತ್ತೂಂದೆಡೆ ಕೆಪಿಸಿಸಿ ಅಧ್ಯಕ್ಷರು ಪ್ರತ್ಯೇಕ ಯಾತ್ರೆ ಹೊರಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದು ಒಂದು ರೀತಿಯಲ್ಲಿ  ಮೂಲ ಕಾಂಗ್ರೆಸ್ಸಿಗರು ಹಾಗೂ ನಕಲಿ ಕಾಂಗ್ರೆಸ್ಸಿಗರ ಯಾತ್ರೆ ಎಂಬಂತಾಗಿದೆ. ಮೂಲ ಕಾಂಗ್ರೆಸ್ಸಿಗರ ಸ್ಥಿತಿ ಏನಾಗಿದೆ ಎಂಬುದು ಗೊತ್ತಿದೆ. ಹೊಸ ಕಾಂಗ್ರೆಸ್‌ನ ನಾಯಕತ್ವ ಸಿದ್ದರಾಮಯ್ಯ ವಹಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

Advertisement

ಐದು ವರ್ಷದ ಸಾಧನೆಯನ್ನು ಹೇಳುವುದಕ್ಕಾಗಿಯೇ 600 ಕೋಟಿ ರೂ. ಹಣ ಸರ್ಕಾರ ವ್ಯಯ ಮಾಡಿದೆ. ವಿದೇಶಿ ಕಂಪನಿಗೆ ಸರ್ಕಾರದ ಸಾಧನೆ ಪ್ರಚಾರ ಮಾಡುವ ಗುತ್ತಿಗೆ ನೀಡಿದೆ. ಇದು ಮಾರ್ಕೆಟಿಂಗ್‌ ಸರ್ಕಾರ. ನಾನಂತೂ ಇಂತಹ ಮುಖ್ಯಮಂತ್ರಿಯನ್ನು ನೋಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರ ಮೂಲೆಗುಂಪು
ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೀವು ಯಾವ ದಲಿತರನ್ನು ಉದ್ಧಾರ ಮಾಡಿದ್ದೀರಿ. ಕಾಂಗ್ರೆಸ್‌ನಲ್ಲಿ 40 ವರ್ಷಗಳಿಂದ ದುಡಿದ ದಲಿತ ನಾಯಕರನ್ನೇ ಮೂಲೆಗುಂಪು ಮಾಡಿದ್ದೀರಿ ಎಂದು ದೂರಿದರು.

ನೂರಾರು ಕೋಟಿ ರೂ. ಖರ್ಚು ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಾತ್ರೆ ಮಾಡುತ್ತಿದ್ದಾರೆ. ಅದೇ ಹಣ ಬಡವರ ಏಳಿಗೆಗೆ ಬಳಸಬಹುದಿತ್ತು. ಕೋಟ್ಯಂತ ರೂ. ತೆರಿಗೆ ಹಣ ಜಾಹೀರಾತಿಗೆ ಬಳಸುತ್ತಿದ್ದಾರೆ. ಸೀರೆ ಕೊಟ್ಟೆ ಸೀರೆ ಕೊಟ್ಟೆ ಎಂದು ಯಡಿಯೂರಪ್ಪ ಅವರನ್ನು ಡ್ಯಾನ್ಸ್‌ ಮೂಲಕ ಟೀಕೆ ಮಾಡುವ ಸಿದ್ದರಾಮಯ್ಯ ಮಾಡುತ್ತಿರುವುದಾದರೂ ಏನು? ಎಂದು ಪ್ರಶ್ನಿಸಿದರು.

ದಲಿತರಿಗೆ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿ ಸ್ಥಾನವನ್ನೂ ನೀಡಿಲ್ಲ. ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌  ಬೇಡಿಕೊಂಡು ಎಂಎಲ್‌ಸಿ ಯಾದ್ರು, ಡಿಸಿಎಂ ಸ್ಥಾನವಾದರೂ ಕೊಡಿ ಅಂತಾ ಕೇಳಿಕೊಂಡ್ರೆ ಹೆಬ್ಬೆಟ್ಟಿನ ಸಚಿವ ಸ್ಥಾನ ನೀಡಿ ಅವರ ಮೆಲೆ ಕೆಂಪಯ್ಯ ಅವರನ್ನು ಕೂರಿಸಿದ್ರು. ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಉಪ ಮುಖ್ಯಮಂತ್ರಿ ಸ್ಥಾನ ಕೊಡ್ತೇವೆ.
-ಎಚ್‌ ‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next