ಕಾರವಾರ: ಇಲ್ಲಿಗೆ ಸನಿಹದ ದೇವಭಾಗ್ ಕಡಲ ತೀರದಲ್ಲಿ ಸಂರಕ್ಷಿಸಲ್ಪಟ್ಟ ಕಡಲಾಮೆ ಮೊಟ್ಟೆಗಳಿಂದ 47 ಆಮೆ ಮರಿಗಳ ಜನನವಾಗಿದ್ದು, ಆಮೆ ಮರಿಗಳನ್ನು ಮಂಗಳವಾರ ಬೆಳಿಗ್ಗೆ ದೇವಭಾಗ ಕಡಲಿಗೆ ಬಿಡಲಾಯಿತು.
ದೇವಭಾಗ ಕಡಲತೀರದಲ್ಲಿ 2024ನೇ ವರ್ಷದಲ್ಲಿ ಮೊದಲ ಕಡಲಾಮೆ ಮರಿಗಳ ತಂಡ ಮೊಟ್ಟೆಯಿಂದ ಜನನವಾಗಿದ್ದು, ಅವುಗಳನ್ನು ಸಮುದ್ರಕ್ಕೆ ಬಿಡಲಾಯಿತು.
ಕಳೆದ ವರ್ಷದ ನವೆಂಬರ್ ಎರಡನೇ ವಾರಾಂತ್ಯಕ್ಕೆ ಆಮೆಗಳು ದೇವಭಾಗದ ದಂಡೆಯ ತವರು ಮನೆಗೆ ಬಂದು ಮೊಟ್ಟೆ ಇಟ್ಟು ಮರಳಿ ಸಮುದ್ರ ಸೇರಿದ್ದವು. ಆಮೆಗಳು ದಂಡೆಗೆ ಬಂದು ಉಸುಕು ಬಗೆದು ಕೊಂಚ ಆಳದ ಗುಂಡಿ ಮಾಡಿಕೊಂಡು ಮೊಟ್ಟೆ ಇಡುವುದು ವಾಡಿಕೆ.
ಮೊಟ್ಟೆಯಿಟ್ಟ 53 ನೇ ದಿನಕ್ಕೆ ಮರಿಗಳು ಮೊಟ್ಟೆಯಿಂದ ಹೊರಬರುತ್ತವೆ. ಈ ಪ್ರಕ್ರಿಯೆಯ ಮೇಲೆ ಕರಾವಳಿ ದಂಡೆ ಅರಣ್ಯ ವಲಯದ ಸಿಬ್ಬಂದಿ ಕಾವಲು ಸತತವಾಗಿ ನವೆಂಬರ್ ನಿಂದ ಮಾರ್ಚ್ ತನಕ ಮುಂದುವರಿದಿರುತ್ತದೆ. ದೇವಭಾಗ ಕಡಲ ತೀರದಲ್ಲಿ 2024 ನೇ ಸಾಲಿನಲ್ಲಿ ಒಟ್ಟು 26 ಕಡೆ ಕಡಲಾಮೆ ಗೂಡುಗಳನ್ನು ಪತ್ತೆ ಮಾಡಲಾಗಿದ್ದು, ಸಂರಕ್ಷಿಸಲಾಗಿದೆ. ಮಂಗಳವಾರ 47 ಆಲಿವ್ ರಿಡ್ಲೆ ಜಾತಿಯ ಕಡಲಾಮೆ ಮರಿಗಳನ್ನು ಸಮುದ್ರಕ್ಕೆ ಬಿಡಲಾಗಿದ್ದು, ಸಂಜೆ ಹೊತ್ತಿಗೆ ಇನ್ನು 48 ಮರಿಗಳು ಮೊಟ್ಟೆಯಿಂದ ಹೊರಬರಲಿವೆ ಎಂದು ಅರಣ್ಯಾಧಿಕಾರಿ ಪ್ರಮೋದ್ ತಿಳಿಸಿದರು.
ದೇವಭಾಗ ಕಡಲತೀರದಲ್ಲಿ ಕಡಲಾಮೆ ಮರಗಳನ್ನು ಮಂಗಳವಾರ ಬೆಳಿಗ್ಗೆ ಕಡಲಿಗೆ ಬಿಡುವಾಗ ಕಾರವಾರ ವಿಭಾಗದ ಡಿಸಿಎಫ್ ರವಿಶಂಕರ್ ಸಿ, ಎಸಿಎಫ್ ಜಯೇಶ್ ಕೆ.ಸಿ. ,ಆರ್ಎಫ್ಓ ಗಜಾನನ ನಾಯ್ಕ, ಭವ್ಯಾ ನಾಯ್ಕ, ಮೀನುಗಾರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್, ಜಂಗಲ್ ಲಾಡ್ಜ್ ರೆಸಾರ್ಟನ ಪಿ.ಆರ್ ನಾಯ್ಕ, ಅರಣ್ಯ ಇಲಾಖೆಯ ಸಿಬ್ಬಂದಿಗಳು, ಸ್ಥಳೀಯ ಮೀನುಗಾರ ಮುಖಂಡರು, ಕಡಲ ಜೀವಶಾಸ್ತ್ರ ವಿಭಾಗದ ಉಪನ್ಯಾಸಕ ಶಿವಕುಮಾರ್ ಹರಗಿ, ವಿದ್ಯಾರ್ಥಿಗಳು , ಕಡಲಾಮೆ ಪ್ರಿಯರು ಉಪಸ್ಥಿತರಿದ್ದರು.