Advertisement

ಮಹಾನಗರದಲ್ಲಿ ನಡೆಯಿತು ದೇವಸೇನಾ ಪರಿಣಯ

11:40 AM Oct 17, 2019 | mahesh |

ಇತ್ತೀಚೆಗೆ ಬೆಂಗಳೂರಿನಲ್ಲಿ ಯಕ್ಷಸಿಂಚನ ತಂಡದವರಿಂದ ಉಪನ್ಯಾಸಕ ಶಿವಕುಮಾರ ಬಿ.ಎ. ಅಳಗೋಡು ರಚಿಸಿದ ದೇವಸೇನಾ ಪರಿಣಯ(ಸ್ಕಂದ ವಿಜಯ) ಪ್ರಸಂಗದ ಪ್ರಥಮ ರಂಗಪ್ರದರ್ಶನ ಸಂಪನ್ನಗೊಂಡಿತು. ಮಹಾಭಾರತದ ವನಪರ್ವದಲ್ಲಿ ಉಲ್ಲೇಖವಿರುವ ಸ್ಕಂದೋದ್ಭವದ ಕಥೆ ಈ ಪ್ರಸಂಗದ ವಸ್ತು. ಅಗ್ನಿ ಸಪ್ತರ್ಷಿಗಳ ಆಶ್ರಮಕ್ಕೆ ಹವಿಸ್ಸನ್ನು ಒಯ್ಯಲು ಬಂದಾಗ ಅಲ್ಲಿ ಅವರ ಪತ್ನಿಯರನ್ನು ಕಂಡು ಮೋಹಗೊಳ್ಳುತ್ತಾನೆ. ವಿರಹಾಗ್ನಿಯಿಂದ ಆತ ಬಳಲುತ್ತಿರುವಾಗ ದಕ್ಷಸುತೆ ಸ್ವಾಹಾ ಅವನಲ್ಲಿ ಪ್ರೇಮನಿವೇದನೆ ಮಾಡಿ ತಿರಸ್ಕೃತಳಾಗುತ್ತಾಳೆ. ಬಳಿಕ ಅಗ್ನಿಯ ಮನವನ್ನರಿತ ಸ್ವಾಹಾ ಸಪ್ತರ್ಷಿ ಪತ್ನಿಯರಲ್ಲಿ ಅರುಂಧತಿಯನ್ನುಳಿದು ಮಿಕ್ಕುಳಿದ ಸಾದ್ವಿಯರ ರೂಪ ಧರಿಸಿ ಅವನನ್ನು ಸೇರುತ್ತಾಳೆ. ಮಿಲನೋತ್ತರ ಸ್ಖಲಿತವಾದ ರೇತಸ್ಸನ್ನು ತನ್ನ ಗರ್ಭದಲ್ಲಿ ಧರಿಸಲಾರದ ಆಕೆ ಅದನ್ನು ಶೆ¤àತಪರ್ವತದ ಶರವಣ ಕುಂಭದಲ್ಲಿ ನಿಕ್ಷೇಪಿಸುತ್ತಾಳೆ. ಆರನೇ ದಿನಕ್ಕೆ ಅವೆಲ್ಲವೂ ಸೇರಿ ಸ್ಕಂದನ ಆವಿರ್ಭಾವವಾಗುತ್ತದೆ. ಈ ಮೊದಲೇ ಶಿವ ಪಾರ್ವತಿಯರು ಕ್ರೀಡಿಸುವಾಗ ಶಿವನಿಂದ ಸ್ಖಲಿತವಾದ ರೇತಸ್ಸಿನ ಒಂದಂಶ ಅಗ್ನಿಯನ್ನು ಸೇರಿದ್ದು, ಅದೇ ಮುಂದೆ ಸ್ಕಂದನ ಹುಟ್ಟಿಗೆ ಕಾರಣವಾಗಿರುತ್ತದೆ. ಬಳಿಕ ಸ್ಕಂದ ಕೇಶಿ, ಮಹಿಷಾಸುರ ಮೊದಲಾದವರನ್ನು ಸಂಹರಿಸಿ ದೇವಸೇನೆಯನ್ನು ವರಿಸಿ ದೇವಸೇನಾನಿಯಾಗುವುದು ಮುಖ್ಯ ಕಥೆ.

Advertisement

ಆರಂಭದಲ್ಲಿ ದೇವೇಂದ್ರ ದೇವಸೇನಾನಿಗಾಗಿ ಹುಡುಕಾಟ ನಡೆಸುವುದು, ದಕ್ಷನ ಮಗಳಾದ ದೇವಸೇನೆಯೂ ವರಾನ್ವೇಷಣೆಯ ಬಯಕೆ ವ್ಯಕ್ತಪಡಿಸುವುದು, ಕೇಶಿ ದಾನವ ಆಕೆಯನ್ನು ಹೊಂದಲು ಯತ್ನಿಸಿ ದೇವೇಂದ್ರನಿಂದ ಪರಾಜಿತನಾಗುವುದು ಮೊದಲಾದ ಸನ್ನಿವೇಶಗಳು ಮೂಲದಲ್ಲಿ ಇರುವಂತೆಯೇ ಕಥೆಗೆ ಪೂರಕವಾಗಿ ಬಂದಿವೆ. ಈ ಕಥೆಯನ್ನು ರಂಗಕ್ಕೆ ಹೊಂದುವಂತೆ ಛಂದೋಬದ್ಧ ಪದ್ಯಗಳೊಂದಿಗೆ ಕವಿಯು ಸುಂದರ ಪೌರಾಣಿಕ ಪ್ರಸಂಗವನ್ನಾಗಿ ರಚಿಸಿದ್ದಾರೆ. ಐವತ್ತೇಳು ಬಗೆಯ ಯಕ್ಷಗಾನೀಯ ಮಟ್ಟುಗಳು, ಐದು ಸಮೀಕೃತ ಬಂಧಗಳು, ಇನ್ನೂರ ಮೂರು ಪದ್ಯಗಳಿಂದ ಕೂಡಿದ ಈ ಪ್ರಸಂಗದ ಸಾಹಿತ್ಯ ಸುಲಲಿತವೂ, ಸುಮಧುರವೂ ಆಗಿದೆ.

ಭಾಗವತರಾಗಿ ಎ.ಪಿ. ಪಾಟಕರ ಸಂಪ್ರದಾಯ ಶೈಲಿಯ ಸುಶ್ರಾವ್ಯ ಗಾಯನ, ಕೃಷ್ಣಮೂರ್ತಿ ಭಟ್‌, ಶರತ್‌ ಜಾನಕೈ ಇವರ ಚೆಂಡೆ-ಮದ್ದಳೆ ನಿನಾದ ಮುಮ್ಮೇಳದವರಿಗೆ ಸ್ಫೂರ್ತಿಯನ್ನೊದಗಿಸಿತು. ದೇವೇಂದ್ರ ಪಾತ್ರಧಾರಿ ರವಿ ಮಡೋಡಿಯವರ ವಿಶಿಷ್ಟ ಪೀಠಿಕೆ, ಸಂಪ್ರದಾಯದ ವೇಷ, ಗಂಭೀರ ನಡೆನುಡಿ, ಕಥೆಯ ಸಂದೇಶವನ್ನು ನಿರೂಪಿಸಿದ ರೀತಿ ಮನಮುಟ್ಟಿದವು. ಅಗ್ನಿಯಾಗಿ ವಿಜೃಂಭಿಸಿದ ಶಶಾಂಕ ಕಾಶಿಯವರ ಲಾಲಿತ್ಯದ ಕುಣಿತ, ಸ್ಪಷ್ಟ ಮಾತು, ಸಂದರ್ಭಾನುಕೂಲಿಯಾದ ಭಾವಾಭಿವ್ಯಕ್ತಿ ಸೊಗಸಾಗಿತ್ತು. ಮನೋಜ್‌ ಭಟ್‌ರ ಸ್ವಾಹಾ ದೇವಿಯ ಪಾತ್ರಚಿತ್ರಣ ಮನಮೋಹಕವಾಗಿದ್ದು ಚಪ್ಪಾಳೆಯನ್ನು ಗಿಟ್ಟಿಸಿಕೊಂಡಿತು., ಸ್ಕಂದನ ಪಾತ್ರ ನಿರ್ವಹಿಸಿದ ಶಶಿರಾಜ ಸೋಮಯಾಜಿ ಚುರುಕಿನ ಹೆಜ್ಜೆ, ಅಚ್ಚುಕಟ್ಟಾದ ಕುಣಿತ, ಮಿತ ಮಾತುಗಳಿಂದ ರಂಗದಲ್ಲಿ ಮಿಂಚಿದರು. ಆದಿತ್ಯ ಉಡುಪರ ಬಣ್ಣದ ವೇಷದ ಒಡ್ಡೋಲಗ ರಂಗಕ್ಕೆ ವಿಶೇಷವಾಗಿತ್ತು. ಕೃಷ್ಣ ಶಾಸ್ತ್ರಿಯವರ ಗರುಡಾಕ್ಷ(ಹಾಸ್ಯ) ಪವಿತ್ರಾ ಅವರ ದೇವಸೇನೆ ಮೊದಲಾದ ಪಾತ್ರಗಳು ಪ್ರಶಂಸೆಗೆ ಪಾತ್ರವಾದವು. ಒಟ್ಟು ಪರಿಣಾಮದಲ್ಲಿ ಪ್ರಸಂಗ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಸಾಧಿಸಿದರೂ ಸಮಯದ ಅಭಾವದಿಂದ ಕೊನೆಯ ಕೆಲವು ಮಹತ್ವದ ಸನ್ನಿವೇಶಗಳನ್ನು ವೇಗವಾಗಿ ಓಡಿಸುವುದು ಅನಿವಾರ್ಯವಾಯಿತು. ಕೃಷ್ಣಮೂರ್ತಿ ತುಂಗರ ನಿರ್ದೇಶನದಲ್ಲಿ ಇಡೀ ಪ್ರಸಂಗ ಸಂಪ್ರದಾಯ ಶೈಲಿಯ ಸೌಂದರ್ಯದಿಂದ ರಂಜಿಸಿತು.

ಶಿವಕುಮಾರ ಮಾತನಾಲಿಸು ನಮನವಿತ್ತೆ ಪವನ ಸಖನೆ ಅಸುರ ಕೇಶಿ ಕಂಡ ದೂರದಿ ಕಾಮಿನಿಮಣಿ ಮಣಿ ನಿಲ್ಲು ಮೊದಲಾದ ಪದ್ಯಗಳಿಗೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಒಟ್ಟಂದದಲ್ಲಿ ಆಕರ್ಷಕವಾಗಿರುವ ಕಥೆಯೊಂದನ್ನು ಯುವ ಯಕ್ಷಕವಿ ಸುಂದರ ಸಾಹಿತ್ಯ ರಚನೆಯಿಂದ ಯಕ್ಷಗಾನೀಯವಾಗಿಸಿದ್ದಾರೆ.

ರಂಜನ್‌ ಮಿಶ್ರ

Advertisement
Advertisement

Udayavani is now on Telegram. Click here to join our channel and stay updated with the latest news.

Next