ಬೆಂಗಳೂರು: ದೇವಾಸ್ ಮಲ್ಟಿಮೀಡಿಯಾ ಪ್ರೈ.ಲಿ.ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಾಮಚಂದ್ರನ್ ವಿಶ್ವನಾಥನ್‌ರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಘೋಷಣೆ ಮಾಡಿದೆ.
ಸೆಕ್ಷನ್ 12(2)ರ ಅಡಿ ರಾಮಚಂದ್ರನ್ ಆಸ್ತಿ ಜಪ್ತಿ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಜೂ.26ಕ್ಕೆ ನ್ಯಾಯಾಲಯ ಮುಂದೂಡಿದೆ. ಜಾರಿ ನಿರ್ದೇಶಾಲಯ (ಇಡಿ) ಪರವಾಗಿ ಎಸ್‌ಪಿಪಿ ಪಿ.
ಪ್ರಸನ್ನ ಕುಮಾರ್ ವಾದ ಮಂಡಿಸಿದ್ದಾರೆ.
ಏನಿದು ಪ್ರಕರಣ ?: 2004ರಲ್ಲಿ ರಾಮ ಚಂದ್ರನ್ ವಿಶ್ವನಾಥನ್ ಬೆಂಗಳೂರಿನಲ್ಲಿ ಉಪಗ್ರಹ ಆಧಾರಿತ ದೇವಾಸ್ ಮಲ್ಟಿ ಮೀಡಿಯಾ ಸೇವೆಗಳ ಕಂಪನಿ ಪ್ರಾರಂಭಿಸಿದ್ದರು. ಈ ಕಂಪನಿ ಭಾರತೀಯ ಮೊಬೈಲ್ ಬಳಕೆದಾರರಿಗೆ ಎಸ್-ಬ್ಯಾಂಡ್ ಟ್ರಾನ್ಸ್ಟಾಂಡರ್ಸ್ ಸಂವಹನ ಉಪಗ್ರಹದ ಮೂಲಕ ಮಲ್ಟಿಮೀಡಿಯಾ ಸೇವೆ ನೀಡಲು ಮುಂದಾಗಿತ್ತು. ಆಂತರಿಕ್ಷ್
ಕಾರ್ಪೊರೇಶನ್ ಜೊತೆ ಉಪಗ್ರಹ ನಿರ್ಮಿಸಬೇಕಾದ ಒಪ್ಪಂದ ಮಾಡಲಾಗಿತ್ತು. ದೇವಾಸ್ ಹಾಗೂ ಆಂತರಿಕ್ಸ್ ಒಡಂಬಡಿಕೆಯಲ್ಲಿ ಭ್ರಷ್ಟಾಚಾರ ನಡೆದಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿ ಆಗಿರುವ ರಾಮಚಂದ್ರನ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸಿತ್ತು.
ಆದರೆ, ರಾಮಚಂದ್ರನ್ ವಿಶ್ವನಾಥನ್ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿರಲಿಲ್ಲ. ಹೀಗಾಗಿ ರಾಮಚಂದ್ರನ್ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಲು ಇಡಿ ಅಧಿಕಾರಿಗಳು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ರಾಮಚಂದ್ರನ್ ವಿಶ್ವನಾಥನ್‌ರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ನ್ಯಾಯಾಲಯವು ಘೋಷಿಸಿದೆ. ಅಮೆರಿಕದ ನಿವಾಸಿಯಾಗಿರುವ ರಾಮಚಂದ್ರನ್ ಭಾರತ ಮೂಲದವರಾಗಿದ್ದು, ಈಗಾಗಲೇ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.