ಬೆಂಗಳೂರು : ” ಆಕಾಶದ ಗುಡ್ಡಕ್ಕೆ ಶಿಶು ಏರಿತಲೆ ಪರಾಕ್ ” ಎಂದು ಹಾವೇರಿಯ ದೇವರಗುಡ್ಡದ ಕಾರಣಿಕ ನುಡಿ ಈಗ ರಾಜ್ಯ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಪ್ರತಿ ವರ್ಷವೂ ಈ ಕಾರಣಿಕದ ನುಡಿ ಒಂದಿಲ್ಲೊಂದು ಕಾರಣಕ್ಕಾಗಿ ನಾಡಿನ ಆಸ್ತಿಕ ವರ್ಗ ಹಾಗೂ ಭವಿಷ್ಯವಾಣಿಯಲ್ಲಿ ನಂಬಿಕೆ ಹೊಂದಿರುವವರ ಕುತೂಹಲವನ್ನು ಕೆರಳಿಸುತ್ತಲೇ ಇದೆ. ಆದರೆ ಈ ಬಾರಿಯ ಕಾರಣಿಕದ ವಿಚಾರ ರಾಜಕೀಯ ಹಾಗೂ ನವ ನಾಯಕತ್ವದ ಉದಯವನ್ನು ಲಕ್ಷದಲ್ಲಿಟ್ಟುಕೊಂಡೇ ವಿಶ್ಲೇಷಣೆಗೆ ಒಳಗಾಗುತ್ತಿದೆ.
ಚುನಾವಣಾ ವರ್ಷದಲ್ಲಿ ಪಕ್ಷದ ಯುವ ನೇತಾರನೊಬ್ಬ ರಾಜ್ಯದ ಚುಕ್ಕಾಣಿ ಹಿಡಿಯಬಹುದು ಎಂಬುದು ಒಂದು ವ್ಯಾಖ್ಯಾನವಾದರೆ, ರಾಜ್ಯ ಬಿಜೆಪಿ ಸಾರಥ್ಯಕ್ಕೆ ಯುವ ಮುಖವೊಂದರ ನೇಮಕವಾಗಬಹುದು ಎಂದೂ ಅರ್ಥೈಸಲಾಗುತ್ತಿದೆ.
ಹೀಗಾಗಿ ರಾಜ್ಯ ರಾಜಕಾರಣದ ಯುವ ಮುಖಗಳ ಹೆಸರು ಮತ್ತೆ ಮುಂಚೂಣಿಗೆ ಬಂದಿದೆ. ಬಿಜೆಪಿಯ ನವ ನಾಯಕತ್ವಕ್ಕೆ ಇಂಧನ ಸಚಿವ ವಿ.ಸುನಿಲ್ ಕುಮಾರ್, ಸಿ.ಟಿ.ರವಿ, ಅರವಿಂದ ಬೆಲ್ಲದ್, ಪಿ.ರಾಜೀವ್, ವಿಜಯೇಂದ್ರ ಅಂಥವರ ಹೆಸರು ಈ ಬಾರಿ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ರಾಜ್ಯದಲ್ಲಿ ಪಕ್ಷಾತೀತವಾಗಿ ಮುಂಚೂಣಿ ನಾಯಕರು ನಿವೃತ್ತಿ ಅಂಚಿನಲ್ಲಿದ್ದಾರೆ. ಯಡಿಯೂರಪ್ಪ, ಸಿದ್ದರಾಮಯ್ಯ, ಈಶ್ವರಪ್ಪ, ದೇವೇಗೌಡ, ಎಸ್.ಎಂ.ಕೃಷ್ಣ ಸೇರಿದಂತೆ ಮೂರು ಪಕ್ಷದ ಅಗ್ರಗಣ್ಯ ನಾಯಕರು ನೇಪಥ್ಯಕ್ಕೆ ಸರಿದು ಯುವ ಮುಖಗಳು ಮುಂಚೂಣಿಗೆ ಬರಬಹುದೆಂಬುದು ಕಾರಣಿಕದ ಭಾವ ಎಂದು ಭವಿಷ್ಯಾಸಕ್ತರು ವಿಶ್ಲೇಷಣೆ ಮಾಡಲಾರಂಭಿಸಿದ್ದಾರೆ.
ಇದನ್ನೂ ಓದಿ : ಪಿಎಸ್ಐ ಹಗರಣದಲ್ಲಿ ಮಾಜಿ ಸಿಎಂ ಮಗನ ಕೈವಾಡವೇನು? ಕಾಂಗ್ರೆಸ್ ಗೆ ಅಸ್ತ್ರವಾದ ಯತ್ನಾಳ್ ಆರೋಪ