Advertisement

ತಂತಿ ಮೇಲೆ ಕಸರತ್ತು: ದೇವರಗದ್ದೆ ಎಂಬ ಕುಗ್ರಾಮವನ್ನು ದೇವರೇ ಕಾಯಬೇಕು

08:20 AM Jul 23, 2017 | Team Udayavani |

ಬೈಂದೂರು: ಬೈಂದೂರು ಸಮೀಪದ ಕುಗ್ರಾಮವಾದ ದೇವರಗದ್ದೆ ಎನ್ನುವ ಊರಿನ ಜನರು ಕಳೆದ ಆರು ದಶಕಗಳಿಂದ ತಂತಿ ಮೇಲೆ ಸಂಚರಿಸುತ್ತಾ  ಮಳೆಗಾಲ ಕಳೆಯಬೇಕಾದ ಸಂಕಷ್ಟದ ಪರಿಸ್ಥಿತಿ ಹೊಂದಿದ್ದಾರೆ.

Advertisement

ದೇವರ ಮುನಿಸು!
ಬೈಂದೂರು ನೂತನ ಬಸ್‌ ನಿಲ್ದಾಣದಿಂದ 20 ಕಿ.,ಮೀ ಪೂರ್ವಕ್ಕೆ ಸಾಗಿದಾಗ ಸಹ್ಯಾದ್ರಿ ಪರ್ವತ ಶ್ರೇಣಿಗಳಿವೆ. ಇಲ್ಲಿನ ಪ್ರಸಿದ್ದ ಕೊಸಳ್ಳಿ ಜಲಪಾತಕ್ಕೆ ಸಾಗುವಾಗ ಬಲಭಾಗದ ಕಾಡು ದಾರಿಯಲ್ಲಿ ಸಾಗಿದರೆ ದೇವರಗದ್ದೆ ಕಾಣಸಿಗುತ್ತದೆ. ದೇವರಗದ್ದೆಗೆ ಅಭಿವೃದ್ಧಿಯ ವಿಚಾರದಲ್ಲಿ ದೇವರೆ ಮುನಿದುಕೊಂಡಂತಿದೆ. 35ರಿಂದ40 ಮನೆಗಳಿರುವ ಈ ಭಾಗದಲ್ಲಿ ಮಳೆಗಾಲದ ಮೂರು ತಿಂಗಳು ಹೊರಜಗತ್ತಿನ ಸಂಪರ್ಕವೇ ಇಲ್ಲದಂತಹ ಪರಿಸ್ಥಿತಿಯಿದೆ.

ಊರಿಗೆ ಅಡ್ಡಲಾಗಿ ಹರಿಯುವ ನದಿಯನ್ನು ದಾಟಲು ತಲೆತಲಾಂತರದಿಂದ ತಂತಿಸಂಕವನ್ನು ಬಳಸುತ್ತಿದ್ದಾರೆ. ಜಾಸ್ತಿ ಮಳೆಯಾದಾಗ ನೀರಿನ ರಭಸದಲ್ಲಿ ಕಾಲುಸಂಕವೇ ಕೊಚ್ಚಿ ಹೋಗುತ್ತಿದೆ.

ಅನುಷ್ಠಾನ ಎಂದೋ?
ಹತ್ತಾರು ಬಾರಿ ಕಾಲುಸಂಕ ರಚನೆ ಸೇರಿದಂತೆ ವಿದ್ಯುತ್‌ ಸೌಲಭ್ಯಕ್ಕೆ ಮನವಿ ನೀಡಿದರೂ ಪ್ರಯೋಜನವಾಗಿಲ್ಲ.ಬಳಿಕ ಸ್ಥಳೀಯರೆ ಹಣ ಸಂಗ್ರಹಿಸಿ ಮರದ ತುಂಡುಗಳಿಂದ ಕಾಲುಸಂಕ ರಚಿಸಿಕೊಂಡಿದ್ದಾರೆ. ತುಂಬಿ ಹರಿಯುವ ನದಿಯ ಮೇಲ್ಗಡೆ ತಂತಿ ಹಿಡಿದು ಸಾಗುವಾಗ ಜೀವ ಕೈಗೆ ಬಂದ ಅನುಭವವಾಗುತ್ತದೆ. ಈ ಬಗ್ಗೆ ಕಳೆದ ವರ್ಷ ಪ್ರಕಟಿಸಿದ ವರದಿಗೆ ಸ್ಪಂದಿಸಿದ ಸಂಸದರು ಕ್ಷೇತ್ರದಲ್ಲಿ ಅತ್ಯಗತ್ಯವಿರುವ ಕಡೆಗಳಲ್ಲಿ ಕಾಲುಸಂಕ ಶೀಘ್ರ ನಿರ್ಮಿಸುವ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ವರದಿ ತರಿಸಿಕೊಂಡಿದ್ದಾರೆ. ಆದರೆ ಇದುವರಗೆ ಅನುಷ್ಠಾನವಾಗಿಲ್ಲ. ಕೃಷಿಯೆನ್ನೇ ನಂಬಿಕೊಂಡಿರುವ ಇಲ್ಲಿನ ಸ್ಥಳೀಯರಿಗೆ ಸೋಲಾರ್‌ ದೀಪ ಹೊರತುಪಡಿಸಿದರೆ ಚಿಮಣಿ ದೀಪವೇ ಗತಿಯಾಗಿದೆ.

ಕನಿಷ್ಠ ಪಕ್ಷ ಇಂತಹ ಹಳ್ಳಿಗಳ ಜನರ ನೋವಿಗೆ ಸ್ಪಂದಿಸುವ ಔದಾರ್ಯ ತೋರುವ ಮೂಲಕ ಗ್ರಾಮೀಣ ಭಾಗದ ಜನರ ಸಮಸ್ಯೆಗೆ ಸ್ಪಂದಿಸಬೇಕೆನ್ನುವುದು  ಸ್ಥಳೀಯರ ಅಭಿಪ್ರಾಯವಾಗಿದೆ.

Advertisement

ಕಠಿನ ಪರಿಸ್ಥಿತಿ
ಒಂದೆರೆಡು ಬಾರಿ ಇಲಾಖಾ ಅಧಿಕಾರಿಗಳು ಕಾಲುಸಂಕ ನಿರ್ಮಾಣ ಮಾಹಿತಿ ಪಡೆಯಲು ಆಗಮಿಸಿದ್ದು ನದಿ ದಾಟಲಾಗದೆ ವಾಪಸು ತೆರಳಿದ್ದಾರೆ.ಅನಾರೋಗ್ಯ,ಆಕಸ್ಮಿಕ ಅವಘಡ ಸಂಭವಿಸಿದಾಗ ಇಲ್ಲಿನ ಜನರ ಪರಿಸ್ಥಿತಿ ಹೇಳತೀರದಾಗಿದೆ. ಬೈಂದೂರು ಕ್ಷೇತ್ರದ ಬಹುತೇಕ ಗ್ರಾಮೀಣ ಭಾಗದಲ್ಲಿ ಸೇತುವೆ ನಿರ್ಮಾಣವಾಗಿದೆ. ಕೆಲವೇ ಕೆಲವು ಭಾಗಗಳಲ್ಲಿ ತುರ್ತು ವ್ಯವಸ್ಥೆ ಕಲ್ಪಿಸಬೇಕಾಗಿದೆ. 

– ಅರುಣ ಕುಮಾರ್‌ ಶಿರೂರು

Advertisement

Udayavani is now on Telegram. Click here to join our channel and stay updated with the latest news.

Next