Advertisement

Devanahalli: ತುಂತುರು ಮಳೆ- ರೇಷ್ಮೆ ಬೆಳೆಗಾರರಿಗೆ ನಷ್ಟದ ಭೀತಿ

04:55 PM Dec 06, 2023 | Team Udayavani |

ದೇವನಹಳ್ಳಿ: ಕಳೆದ 3-4 ದಿನಗಳಿಂದ ಜಿಲ್ಲಾದ್ಯಂತ ಮೋಡ ಮುಸುಕಿದ ವಾತಾವರಣದಿಂದಾಗಿ ಹಾಗೂ ತುಂತುರು ಮಳೆಯಿಂದಾಗಿ ರೇಷ್ಮೆ ಹುಳುಗಳಿಗೆ ಹಾಲು ತೊಂಡೆ ರೋಗದ ಭೀತಿ ಎದುರಾಗಿದೆ. ಮಿಚಾಂಗ್‌ ಚಂಡಮಾರುತದಿಂದಾಗಿ ಮೋಡ
ಕವಿದ ವಾತಾವರಣವಿದ್ದು ರೋಗಕ್ಕೆ ತುತ್ತಾದ ಹುಳುಗಳು ಹಣ್ಣಾಗುವ ಬದಲು ಹಾಲು ವಾಂತಿ ಮಾಡಿಕೊಂಡು ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

3-4 ದಿನ ಮೋಡ ಮುಸುಕಿದ ವಾತಾವರಣ ಮುಂದುವರಿದರೆ ಹುಳುಗಳಲ್ಲಿ ಸುಣ್ಣಕಟ್ಟು ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಈ ರೋಗ ಬಂದ ರೇಷ್ಮೆ ಹುಳುಗಳು ಸೊಪ್ಪು ತಿನ್ನದೆ ಚಟುವಟಿಕೆ ರಹಿತವಾಗಿ ಸಾಯುತ್ತವೆ. ಸತ್ತ ಉಳಿವಿನ ದೇಹವು ಗಟ್ಟಿಯಾಗಿ
ಮೈಮೇಲೆ ಬಿಳಿಯ ಪೌಡರ್‌ ರೂಪದಲ್ಲಿ ವೈರಾಣು ಉತ್ಪತ್ತಿಯಾಗುತ್ತದೆ. ಉತ್ಪತ್ತಿಯಾದ ವೈರಾಣು ಗಾಳಿ ಮೂಲಕ ಆರೋಗ್ಯವಂತ ಹುಳುವನ್ನು ಸೋಕುವುದರಿಂದ ಎಲ್ಲಾ ಹುಳುಗಳು ಸುಣ್ಣಕಟ್ಟು ರೋಗಕ್ಕೆ ಒಳಗಾಗುತ್ತವೆ.

ಹಿಪ್ಪು ನೇರಳೆ ಸೊಪ್ಪಿನಲ್ಲಿ ನೀರು ಇರುವ ಕಾರಣ ತೋಟಗಳಲ್ಲಿ ನೀರು ಉದುರಿಸಿದ ನಂತರ ಕಟಾವು ಮಾಡಿಕೊಂಡು ಹುಳುಗಳಿಗೆ ಕೊಡಬೇಕಾಗುತ್ತದೆ. ಸೊಪ್ಪಿನಲ್ಲಿ ನೀರಿನ ಅಂಶ ಹೆಚ್ಚಾಗಿರುವ ಕಾರಣ ತೇವಾಂಶ ಇರುವ ಸೊಪ್ಪು ತಿನ್ನುವ ಹುಳುಗಳು ಹಣ್ಣಾಗುವ ಹಂತದಲ್ಲಿ ಹಾಲು ತೊಂಡೆ ರೋಗ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ರೈತರಿಗೆ ಹಾಕಿರುವ ಬಂಡವಾಳವೂ ಬರುವುದಿಲ್ಲ ಎಂದು ತಜ್ಞರು ಹೇಳುತ್ತಾರೆ.

100 ಮೊಟ್ಟೆ ರೇಷ್ಮೆ ಹುಳು ಸಾಕಲು 45 ದಿನ ಬೇಕಿದ್ದು 30 ಸಾವಿರ ಖರ್ಚು ಮಾಡಬೇಕು. ಆದರೆ ಈಗಿನ ವಾತಾವರಣಕ್ಕೆ ರೇಷ್ಮೆ ಹುಳುಗೂಡು ಕಟ್ಟುತ್ತಿಲ್ಲ. ರೇಷ್ಮೆ ಹುಳು ಗೂಡು ಕಟ್ಟುವುದು ವಿಳಂಬವಾದರೆ 7-8 ದಿನ ವಿಳಂಬವಾಗುವ ಸಾಧ್ಯತೆ ಇದೆ. ಇದರಿಂದಾಗಿ ಬಂಡವಾಳ ಕೈಗೆ ಬರುವುದಿಲ್ಲ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಗೂಡಿನ ಇಳುವರಿಯೂ ಕುಂಠಿತ
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೇಷ್ಮೆ ಮತ್ತು ಹೈನುಗಾರಿಕೆಯನ್ನೇ ರೈತರು ಅವಲಂಬಿಸಿದ್ದಾರೆ. ಹಣ್ಣಾಗಿರುವ ಹುಳುಗಳನ್ನು ಚಂದ್ರಿಕೆಗಳಿಗೆ ಹಾಕಿ ವಿದ್ಯುತ್‌ ದೀಪ ಹಚ್ಚಿ ಶೆಡ್‌ಗಳಲ್ಲಿ ಜೋಡಿಸಿಟ್ಟು ಗೂಡು ಕಟ್ಟುವಂತೆ ಮಾಡಲು ಹರಸಾಹಸ ಪಡುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಾರೆ.

Advertisement

ಕಳೆದ 2-3 ದಿನಗಳಿಂದ ಹಣ್ಣಾಗಿರುವ ರೇಷ್ಮೆ ಹುಳುಗಳು ಸರಿಯಾಗಿ ಗೂಡುಕಟ್ಟುತ್ತಿಲ್ಲ. ಗೂಡಿನ ಇಳುವಳಿಯೂ ಕುಂಠಿತವಾಗಿದೆ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಮೋಡದ ವಾತಾವರಣದಲ್ಲಿ ಕಟ್ಟಿರುವ ಗೂಡು ತೀವ್ರ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಇದೇ ರೀತಿ ಮುಂದುವರಿದರೆ ರೈತರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಿಳಿಸಿದ್ದಾರೆ.

ಮೋಡ ಮುಸುಕಿದ ವಾತಾವರಣದಿಂದಾಗಿ ರೇಷ್ಮೆ ಹುಳುಗಳು ಸರಿಯಾದ ರೀತಿ ಗೂಡು ಕಟ್ಟುತ್ತಿಲ್ಲ. ರೈತರು ಸಾಕಷ್ಟು ಸಮಸ್ಯೆ
ಎದುರಿಸುವಂತೆ ಆಗಿದೆ. ಈ ವಾತಾವರಣ ರೇಷ್ಮೆ ಬೆಳೆಗಾರರಿಗೆ ಅನುಕೂಲವಾಗಿಲ್ಲ.
●ಗೋಕರೆ ಸತೀಶ್‌, ರೇಷ್ಮೆ ಬೆಳೆಗಾರ

3-4 ದಿನಗಳಿಂದ ಮೋಡ ಕವಿದ ವಾತಾವರಣವಿದ್ದು ರೇಷ್ಮೆ ಹುಳುಗಳಿಗೆ ಹಾಲು ತೊಂಡೆರೋಗ ಮತ್ತು ಸುಣ್ಣ ಕಟ್ಟು ರೋಗ ಬರುವ ಸಾಧ್ಯತೆಯಿದೆ. ರೈತರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.
●ಪ್ರಭಾಕರ್‌, ರೇಷ್ಮೆ ಇಲಾಖೆ ಉಪ ನಿರ್ದೇಶಕರು

●ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next