Advertisement

ತಿಂಡಿ, ಊಟಕ್ಕೆ ಒಳ್ಳೇದ್‌ ಗುರೂ! ದೇವನಹಳ್ಳಿ ಗುರು ಟಿಫ‌ನ್‌ ಸೆಂಟರ್‌

02:00 PM Mar 12, 2018 | Harsha Rao |

 ಬಿಸಿ, ಬಿಸಿ ಚಿತ್ರಾನ್ನ, ತುಪ್ಪದ ದೋಸೆ, ವಡೆ, ಪೊಂಗಲ್‌, ತರಕಾರಿ ವಾಂಗೀಬಾತ್‌ ಹೀಗೆ ನೀವು ಏನೆ ನೆನಸಿಕೊಂಡು ತಿನ್ನ ಬೇಕೆನಿಸಿದರೆ ದೇವನಹಳ್ಳಿಯ ಜನರು ( ಬೆಂಗಳೂರು ಗ್ರಾಮಾಂತರ ಜಿಲ್ಲೆ) ಬರುವುದು ಈ ಗುರುಟಿಫ‌ನ್‌ ಸೆಂಟರ್‌ಗೆ.

Advertisement

ಸುಮಾರು 35 ವರ್ಷಗಳಿಂದ ಗುರು ಟಿಫ‌ನ್‌ ಸೆಂಟರ್‌ ಜನಪ್ರಿಯವಾಗಿದೆ. ಕಾರಣ ಶುಚಿ, ರುಚಿಯಲ್ಲಿ ಈ ಹೋಟೆಲಿನವರು ಎತ್ತಿದ ಕೈ.

ಹಳೇ ಬಸ್‌ ನಿಲ್ದಾಣದಿಂದ ಕೂಗಳತೆ ದೂರದಲ್ಲಿಯೇ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರಿನಲ್ಲಿ ಗುರು ಟಿಫ‌ನ್‌ ಸೆಂಟರ್‌ ಇದೆ. ಅಲ್ಲೇ ಗಾಂಧಿಚೌಕ, ಬಜಾರ್‌ ರಸ್ತೆ ಹತ್ತಿರ ಇರುವುದರಿಂದ ಜನಸಂದಣಿ ಹೆಚ್ಚು.

ನಗರದ ನಿವಾಸಿ ಟಿ.ಎಸ್‌.ರಾಜಣ್ಣ, ಗುರು ಟಿಫ‌ನ್‌ ಸೆಂಟರ್‌ನ ಮಾಲೀಕರು. ಆರಂಭದಲ್ಲಿ ಮನೆಯ ಹತ್ತಿರ ಸಣ್ಣ ಜಾಗದಲ್ಲಿ ಹೋಟೆಲ್‌ ಶುರುಮಾಡಿದರು. ಈಗ ಅದು ವಿಸ್ತಾರ ಗೊಂಡಿದೆ. ಇಲ್ಲಿ ರುಚಿ  ಹೆಚ್ಚು ಅನ್ನೋದಕ್ಕೆ ರಾಜಣ್ಣ ಅವರ ಶ್ರದ್ಧೆಯೇ ಉತ್ತರ. ರುಚಿಕೆಡದಂತೆ, ಗುಣಮಟ್ಟ ಇಳಿಯದಂತೆ ಅವರು ತಿಂಡಿಗಳನ್ನು ತಯಾರಿಸುತ್ತಾರೆ. ಹೀಗಾಗಿ ರಾಜಣ್ಣ ಎಲ್ಲೇ ಅಂಗಡಿ ಇಟ್ಟರೂ ಜನರು ಹಾಜರ್‌.

ಇವಿಷ್ಟೇ ಅಲ್ಲ, ಅವಲಕ್ಕಿ ಪುಳಿಯೋಗರೆ, ಪೂರಿಸಾಗು ತಿನ್ನ ಬೇಕೆಂದರೂ ಜನ ನೇರವಾಗಿ ರಾಜಣ್ಣ ಹೋಟೆಲ್‌ಗೇ ಬ ರುತ್ತಾರೆ.  ಇಡೀ ದೇವನಹಳ್ಳಿಯನ್ನು ಸುತ್ತು ಹಾಕಿದರೂ ಪುಳಿಯೊಗರೆ ಸಿಗುವುದು ಇಲ್ಲಿ ಮಾತ್ರ. ಒಂದರ್ಥದಲ್ಲಿ ನಗರದ ಜನರ ನಾಲಿಗೆಗೆ ಪುಳಿಯೋಗರೆ ಪರಿಚಯಿಸಿದ ಕೀರ್ತಿ ರಾಜಣ್ಣಅವರದು.  ವಿಶೇಷ ಎಂದರೆ ಬಿಸಿ, ಬಿಸಿ ಖಾರದ ಪೊಂಗಲ್‌ ಜೊತೆ ಸಿಹಿ ಪೊಂಗಲ್‌ ಕೂಡ ಇಲ್ಲಿ ಲಭ್ಯ.  ಸುತ್ತಮುತ್ತ ಬ್ಯೂಸಿನೆಸ್‌  ಹಾಗೂ ಜನವಸತಿ ಪ್ರದೇಶಗಳಿರುವುದರಿಂದ  ಇರುವುದರಿಂದ ಬೆಳಗ್ಗೆ ತಿಂಡಿಗಳ ಪಾರ್ಸೆಲ್‌ ಹೆಚ್ಚು.  ವಿಶೇಷ ಸಂದರ್ಭಗಲ್ಲಿ ಅಂದರೆ ಜನವರಿ 1 ರಂಥ ವಿಶೇಷ ದಿನಗಳಲ್ಲಿ ಅವರೇಕಾಯಿ ಸಾರು, ಪೂರಿ ಮಾಡುತ್ತಾರೆ. ಮಧ್ಯಾಹ್ನ ಊಟ ಸಿಗುತ್ತದೆ. ಬಿಸಿ ಚಪಾತಿ, ಅನ್ನರಸಂ, ಉಪ್ಪಿನಕಾಯಿ, ವಡೆ ಕಾಂಬಿನೇಷನ್‌ನ ಊಟ ಸವಿಯಬಹುದು. ಅದರಲ್ಲೂ ರಾಜಣ್ಣ ತಯಾರಿಸುವ ರಸಂಗೆ ಮನಸೋಲದವರೇ ಇಲ್ಲ. ರಸಂನಲ್ಲೂ ಎರಡು ರೀತಿ ಮಾಡುತ್ತಾರೆ.  ಟೊಮೆಟೋ, ನಿಂಬೆಹಣ್ಣಿನದ್ದು. ನಂದಿ ಬೆಟ್ಟ ಹತ್ತಿರವಿರುವುದರಿಂದ ಚಳಿಗಾಲದಲ್ಲಿ ಬಿಸಿ ಬಿಸಿ ನಿಂಬೆಹಣ್ಣಿನ ರಸಂ ತಿನ್ನುವುದರ  ಘಮ್ಮತ್ತೇ ಬೇರೆ. ಇದಕ್ಕೂ ಮೊದಲು ರಾಜಣ್ಣ  ಸಂಜೆ ಹೊತ್ತು ಚಿಂತಾಮಣಿಯ ಚಾಟ್ಸ್‌, ಬೋಂಡ, ಬಜ್ಜಿ ಮಾಡುತ್ತಿದ್ದರು. ಇದರಲ್ಲಿ ಬ್ರೆಡ್‌, ಬಜ್ಜಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿತ್ತು.

Advertisement

 ಒಂದರ್ಥದಲ್ಲಿ ದೇವನಹಳ್ಳಿಯಂಥ ಪ್ರದೇಶದಲ್ಲಿ ಹೋಟೆಲ್‌ ಉದ್ಯಮ ನ‚ಡೆಸುವುದು ಸವಾಲಿನ ಕೆಲಸ. ಕೆಲಸಗಾರರ ಕೊರತೆ ಸದಾ ಕಾಡುತ್ತಿರುತ್ತದೆ. ಹೀಗಿದ್ದರೂ ಮೂರು ದಶಕಗಳಿಂದ ರಾಜಣ್ಣ ಹೋಟೆಲ್‌ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ.

“ಗ್ರಾಹಕರಿಗೆ ನಾನಾ ಬಗೆಯ ತಿಂಡಿ, ತಿನುಸುಗಳನ್ನು ನೀಡುವ ಮೂಲಕ ಹಸಿವನ್ನು ನೀಗಿಸುತ್ತಿದ್ದೇವೆ. ತಿನ್ನುವುದರಲ್ಲಿ ಏಕತಾನತೆ ಇರಬಾರದು ಅನ್ನೋದು ನನ್ನ ಉದ್ದೇಶ. ಹೀಗಾಗಿ ನಮ್ಮ ಹೋಟೆಲ್‌ ಜನಯವಾಗಿದೆ.  ಹೋಟೆಲ್‌ ನಡೆಸುವುದಕ್ಕೆ ಕೆಲಸಗಾರರ ಸಮಸ್ಯೆ ನಮ್ಮನ್ನೂ ಕಾಡಿದೆ. ಅದಕ್ಕಾಗಿ ನಾನೇ ಸ್ವತಃ ಅಡುಗೆ ಮಾಡುತ್ತೇವೆ ಎನ್ನುತ್ತಾರೆ ರಾಜಣ್ಣ.

– ಎಸ್‌.ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next