ಪ್ರಿಯಾಂಕ ಉಪೇಂದ್ರ ಅಭಿನಯದ “ದೇವಕಿ’ ಚಿತ್ರವನ್ನು ವೀಕ್ಷಿಸಿರುವ ಸೆನ್ಸಾರ್ ಮಂಡಳಿ “ಯು/ಎ’ ಪ್ರಮಾಣ ಪತ್ರ ನೀಡಿದೆ. ಇನ್ನು, ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರಕ್ಕಾಗಿ ಕಾಯುತ್ತಿದ್ದ ಚಿತ್ರತಂಡ ಇದೀಗ “ದೇವಕಿ’ ಚಿತ್ರವನ್ನು ಪ್ರೇಕ್ಷಕರ ಮುಂದೆ ತರಲು ಅಣಿಮಾಡುತ್ತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡದಿದ್ದರೆ, “ದೇವಕಿ’ ಜೂನ್ 28 ರಂದು ಬಿಡುಗಡೆಯಾಗಬೇಕಿತ್ತು.
ಆದರೆ, ಆ ದಿನ ಶಿವರಾಜಕುಮಾರ್ ಅಭಿನಯದ “ರುಸ್ತುಂ’ ಬಿಡುಗಡೆ ಆಗಲಿದೆ ಎಂಬ ಮಾತುಗಳ ಹಿನ್ನೆಲೆಯಲ್ಲಿ ನಿರ್ದೇಶಕ ಲೋಹಿತ್ ಅವರು ಜುಲೈ ಮೊದಲ ವಾರದಲ್ಲಿ “ದೇವಕಿ’ಯನ್ನು ಪ್ರದರ್ಶಿಸಲು ತೀರ್ಮಾನಿಸಿದ್ದಾರೆ. ಅಂದಹಾಗೆ, ಈ ಚಿತ್ರವನ್ನು ಕಾರ್ತಿಕ್‌ಗೌಡ ವಿತರಣೆ ಮಾಡುತ್ತಿದ್ದು, ಸಾಕಷ್ಟು ಚಿತ್ರಮಂದಿರಗಳಲ್ಲಿ ತೆರೆಕಾಣಿಸಲು ತಯಾರಿ ನಡೆಸಿದ್ದಾರೆ.
ಈಗಾಗಲೇ ಸಾಕಷ್ಟು ಸುದ್ದಿ ಮಾಡಿರುವ “ದೇವಕಿ’ , ಪೋಸ್ಟರ್, ಟೀಸರ್, ಟ್ರೇಲರ್‌ನಿಂದಲೇ ಕುತೂಹಲ ಕೆರಳಿಸಿದೆ. ಈ ಚಿತ್ರದಲ್ಲಿ ಅನೇಕ ವಿಶೇಷತೆಗಳಿವೆ. ಪ್ರಿಯಾಂಕ ಚಿತ್ರದ ಹೈಲೈಟ್ ಆಗಿದ್ದರೆ, ಅವರ ಪುತ್ರಿ ಐಶ್ವರ್ಯಾ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಅದರಲ್ಲೂ ಪ್ರಿಯಾಂಕ ಅವರ ಮಗಳಾಗಿಯೇ ಕಾಣಿಸಿಕೊಂಡಿರುವುದು ವಿಶೇಷ.
ಇಡೀ ಚಿತ್ರ ಪ್ರಿಯಾಂಕ ಅವರ ತವರೂರಾದ ಕೊಲ್ಕತ್ತಾದಲ್ಲೇ ಚಿತ್ರೀಕರಣವಾಗಿದೆ. “ದೇವಕಿ’ ಕನ್ನಡ ಮತ್ತು ತಮಿಳು ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿದೆ. ನಿರ್ಮಾಪಕದ್ವಯರಾದ ರವೀಶ್ ಹಾಗು ಅಕ್ಷಯ್ ಇವರಿಬ್ಬರಿಗೂ ಇದು ಮೊದಲ ನಿರ್ಮಾಣದ ಚಿತ್ರ. ಬಿಡುಗಡೆ ಮುನ್ನವೇ ವಿತರಣೆ ಹಕ್ಕನ್ನು ಕೊಟ್ಟ ಖುಷಿ ಅವರದು. ಇನ್ನು ಚಿತ್ರದ ವಿಶೇಷ ಪಾತ್ರದಲ್ಲಿ ಕಿಶೋರ್ ಕೊಲ್ಕತ್ತಾ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡರೆ,
ಬಾಲಿವುಡ್ ನಟ ಸಂಜೀವ್ ಜೆಸ್ವಾಲ್ ಸೇರಿದಂತೆ ಬೆಂಗಾಲಿಯ ಬಹುತೇಕ ರಂಗಭೂಮಿ ಕಲಾವಿದರೂ ಸಹ ಚಿತ್ರದಲ್ಲಿ ನಟಿಸಿದ್ದಾರೆ. ಸುಮಾರು 32 ದಿನಗಳ ಕಾಲ ಕೊಲ್ಕತ್ತಾದಲ್ಲೇ ಚಿತ್ರೀಕರಿಸಲಾಗಿದೆ. ರವಿವರ್ಮ ಸಾಹಸವಿದೆ. ಎಚ್.ಸಿ.ವೇಣು ಅವರ ಛಾಯಾಗ್ರಹಣವಿದೆ. ನೊಬಿನ್ ಪಾಲ್ ಅವರ ಸಂಗೀತವಿದೆ. ರವಿಚಂದ್ರ ಸಂಕಲನ ಮಾಡಿದ್ದಾರೆ.