ದೇವದುರ್ಗ: ಕೊರೊನಾ ವೈರಸ್ ತಡೆಗೆ ಸರ್ಕಾರ ಲಾಕ್‌ಡೌನ್ ಆದೇಶ ಜಾರಿಗೊಳಿಸಿದ್ದರಿಂದ ತಾಲೂಕಿನಾದ್ಯಂತ ಕಬ್ಬು ಬೆಳೆಗಾರರು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.
ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಕಬ್ಬು ಮಾರಾಟಕ್ಕೆ ಲಾಕ್ ಡೌನ್ ತೊಡಕಾಗಿದ್ದರಿಂದ ವ್ಯಾಪಾರ- ವಹಿವಾಟುಗಳು ಸ್ತಬ್ಧವಾಗಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ವಾರದ ಸಂತೆ ಕೃಷಿ ಮಾರುಕಟ್ಟೆ ವ್ಯಾಪಾರ ಸಂಪೂರ್ಣ ಸ್ಥಗಿತವಾದ್ದರಿಂದ ಲಕ್ಷಾಂತರ ಮೌಲ್ಯದ ಕಬ್ಬು ಮಾರಾಟವಾಗದೇ ಜಮೀನಿನಲ್ಲಿಯೇ ಉಳಿಯುವಂತಾಗಿದೆ.
ರೈತರು ಬೆಳೆಗಳ ಮಾರಾಟಕ್ಕೆ ಕೃಷಿ ಇಲಾಖೆಯಿಂದ ಗ್ರೀನ್ ಪಾನ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ಮನೆ ಬಿಟ್ಟು ಹೊರಗಡೆ ಬರದ ಸ್ಥಿತಿಯಲ್ಲಿರುವ ರೈತರಿಗೆ ಮಾಹಿತಿ ಕೊರತೆ ಎದುರಾಗಿದೆ. ಜಾಲಹಳ್ಳಿ, ತಿಮ್ಮಾಪುರ, ಬೀಸಲ್ ದೊಡ್ಡಿ, ತ್ಯಾಪ್ಲಿದೊಡ್ಡಿ ಸೇರಿದಂತೆ ಇತರೆ ಗ್ರಾಮಗಳಲ್ಲಿ ಕಬ್ಬು ಬೆಳೆಯಲಾಗಿದ್ದು, ಉತ್ತಮ ಫಸಲು ಕೂಡ ಬಂದಿದೆ. ಕಟಾವು ಮಾಡಿ ಮಾರಾಟ ಮಾಡಬೇಕೆನ್ನುತ್ತಿದ್ದ ರೈತರ ಪಾಲಿಗೆ ಕೊರೊನಾ ವೈರಸ್ ಕಾರ್ಮೋಡ ಕವಿದಿದೆ.
ರೈತರು ವಾರದ ಸಂತೆಯಲ್ಲಿಯೇ ಅತಿ ಹೆಚ್ಚು ಕಬ್ಬು ಮಾರಾಟ ಮಾಡುತ್ತಾರೆ. ಆದರೆ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ವಾರದ ಸಂತೆಗಳೆಲ್ಲ ಬಂದ್ ಆಗಿವೆ. ಜಾಲಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತದೆ. ದೇವದುರ್ಗ, ಸಿರವಾರ, ಗುಂಡಗುಂಟಾ, ಸುರಪುರ, ಶಹಾಪುರ, ಹಟ್ಟಿ ಸೇರಿ ಇತರೆ ತಾಲೂಕಿನಲ್ಲಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಎಲ್ಲೆಡೆ ಲಾಕ್‌ಡೌನ್ ಶುರುವಾಗಿದ್ದು, ಬೆಳೆ ಮಾರಾಟವಾಗುತ್ತಿಲ್ಲ ಎಂದು ರೈತ ಬುಡ್ಡಪ್ಪ ಕಾವಲಿ ಅಳಲು ತೋಡಿಕೊಳ್ಳುತ್ತಾರೆ.
ರೈತರು ಬೆಳೆಗಳ ಮಾರಾಟಕ್ಕೆ ಯಾವುದೇ ಅಡ್ಡಿಯಿಲ್ಲ. ಗ್ರೀನ್ ಪಾಸ್ ವ್ಯವಸ್ಥೆ ಮಾಡಲಾಗಿದೆ. ಕೃಷಿ ಮಾರುಕಟ್ಟೆ ವ್ಯಾಪಾರ- ವಹಿವಾಟಿಗೆ ತೊಂದರೆ ಇಲ್ಲ ಎಂದು ಸರ್ಕಾರವೇ ಸೂಚನೆ ನೀಡಿದ್ದು, ಈ ಬಗ್ಗೆ ಆತಂಕ ಬೇಡ.
ಡಾ| ಎಸ್. ಪ್ರಿಯಾಂಕ್,
ಸಹಾಯಕ ಕೃಷಿ ನಿರ್ದೇಶಕಿ