Advertisement

ಸಿಸಿ ಕ್ಯಾಮೆರಾ ಅಳವಡಿಕೆ ನನೆಗುದಿಗೆ

01:42 PM Feb 15, 2020 | Naveen |

ದೇವದುರ್ಗ: ಪಟ್ಟಣದಲ್ಲಿ ಅಪರಾಧ ಕೃತ್ಯಗಳ ಮೇಲೆ ನಿಗಾ ವಹಿಸಲು, ಮಹಾನ್‌ ನಾಯಕರ ಪ್ರತಿಮೆಗಳಿಗೆ ಅಪಮಾನಿಸುವ ಕೃತ್ಯ ತಡೆಗಾಗಿ ಪ್ರಮುಖ ವೃತ್ತ, ಮಹಾನ್‌ ನಾಯಕರು ಇರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂಬ ಯೋಜನೆ ಎರಡು ವರ್ಷಗಳಿಂದ ನನೆಗುದಿಗೆ ಬಿದ್ದಿದೆ.

Advertisement

ಪುರಸಭೆ ಹಿಂದಿನ ಮುಖ್ಯಾಧಿಕಾರಿ μರೋಜ್‌ಖಾನ್‌ ಪಟ್ಟಣದ ಪ್ರಮುಖ ವೃತ್ತ, ಮಹಾನ್‌ ನಾಯಕರ ಪ್ರತಿಮೆಗಳು ಇರುವೆಡೆ ಸಿಸಿ ಕ್ಯಾಮೆರಾ ಅಳವಡಿಕೆಗೆ ಮುಂದಾಗಿದ್ದರು. ಇದಕ್ಕಾಗಿ ಅನುದಾನ ಸಹ ಬಿಡುಗಡೆಯಾಗಿತ್ತು. ಟೆಂಡರ್‌ ಪ್ರಕ್ರಿಯೆ ಆರಂಭಿಸಬೇಕೆನ್ನುವಷ್ಟರಲ್ಲಿ ಮುಖ್ಯಾಧಿಕಾರಿ ವರ್ಗಾವಣೆಗೊಂಡರು. ನಂತರ ಬಂದ ಅಧಿಕಾರಿಗಳು ಈ ಬಗ್ಗೆ ಚಿಂತನೆ ಮಾಡದ್ದರಿಂದ ಸಿಸಿ ಕ್ಯಾಮೆರಾ ಅಳವಡಿಕೆ ಕನಸಾಗೇ ಉಳಿದಿದೆ.

ಪಟ್ಟಣದ ಪ್ರಮುಖ ವೃತ್ತ, ಪ್ರತಿಮೆ ಇರುವೆಡೆ ಮತ್ತು ಜನದಟ್ಟಣೆ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅದರ ಮೇಲೆ ನಿಗಾ ವಹಿಸುವ ವ್ಯವಸ್ಥೆಯನ್ನು ಸಿಪಿಐ ಕಚೇರಿಯಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆ ಮಾಡಲಾಗಿತ್ತು. ಇದುವರೆಗೆ ಈ ಪ್ರಕ್ರಿಯೆಗೆ ಚಾಲನೆ ದೊರೆತಿಲ್ಲ.

ಪ್ರತಿಮೆಗಳಿಗೆ ಅವಮಾನ: ಈ ಹಿಂದೆ ಪಟ್ಟಣದ ಡಾ| ಬಿ.ಆರ್‌.ಅಂಬೇಡ್ಕರ್‌ ವೃತ್ತದಲ್ಲಿನ ಪ್ರತಿಮೆ ಕೈಯಲ್ಲಿ ಮಾನಸಿಕ ಅಸ್ವಸ್ಥನೊಬ್ಬ ಚೊಂಬು ಇಟ್ಟ ಪರಿಣಾಮ ಪಟ್ಟಣದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರು. ಪದೇ ಪದೇ ಇಂತಹ ಕೃತ್ಯ ತಡೆಗೆ ಪ್ರಮುಖ ವೃತ್ತ, ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕೆಂಬ ಕೂಗು ಎದ್ದಿತ್ತು. ಈಗಲೂ ಎಲ್ಲೇ ಮಹಾನ್‌ ನಾಯಕರ ಪ್ರತಿಮೆಗೆ ಅವಮಾನ ಮಾಡಿದರೂ ಸಿಸಿ ಕ್ಯಾಮೆರಾ ಅಳವಡಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ ಇದು ಅಧಿಕಾರಸ್ಥರ ಕಿವಿಗೆ ಬೀಳುತ್ತಿಲ್ಲ.

ತಾತ್ಕಾಲಿಕ ಸಿಸಿ ಕ್ಯಾಮೆರಾ: ಇನ್ನು ಪಟ್ಟಣದಲ್ಲಿ ಗಣೇಶ ವಿಸರ್ಜನೆ ವೇಳೆ ಕಟ್ಟರಕಟ್ಟಿ, ಗಾಂಧಿ ವೃತ್ತ, ಅಂಬೇಡ್ಕರ್‌ ವೃತ್ತ ಮತ್ತು ಇತರೆಡೆ ಪೊಲೀಸ್‌ ಇಲಾಖೆ ತಾತ್ಕಾಲಿಕ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಗಣೇಶ ವಿಸರ್ಜನಾ ಮೆರವಣಿಗೆ ಮೇಲೆ ನಿಗಾ ವಹಿಸುತ್ತದೆ. ಇದರಿಂದ ಗಣೇಶೋತ್ಸವದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಸಾಧ್ಯವಾಗಿದೆ.

Advertisement

ಅಪರಾಧ ತಡೆಗೆ ಸಹಕಾರಿ: ಪಟ್ಟಣದ ಪ್ರಮುಖ ವೃತ್ತ, ರಸ್ತೆಗಳಲ್ಲಿ, ಪ್ರತಿಮೆಗಳಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಕಣ್ಗಾವಲು ಇಟ್ಟಲ್ಲಿ ಅಪರಾಧ ಕೃತ್ಯ ಮತ್ತು ಕಿಡಿಗೇಡಿಗಳ ಕೃತ್ಯ,
ಮತ್ತು ಅಪಘಾತ ಘಟನೆಗಳ ಮೇಲೆ ನಿಗಾ ವಹಿಸಿ ಆರೋಪಿಗಳನ್ನು ಪತ್ತೆ ಹಚ್ಚಲು ಸಹಕಾರಿ ಆಗಲಿದೆ. ಪಟ್ಟಣದಲ್ಲಿ ಒಂದೇ ಬೈಕ್‌ ನಲ್ಲಿ ಮೂವರು ಸಂಚರಿಸುವುದು, ಸಣ್ಣಪುಟ್ಟ ಅಹಿತಕರ ಘಟನೆಗಳು, ಅಂಗಡಿಗಳಲ್ಲಿ ಕಳ್ಳತನ ಪ್ರಕರಣ ನಡೆಯುತ್ತಲೇ ಇರುತ್ತವೆ. ಇಂತಹ ಕೃತ್ಯಗಳ ತಡೆಗೆ ಸಿಸಿ ಕ್ಯಾಮೆರಾ ಅಳವಡಿಕೆ ಅಗತ್ಯವಾಗಿದೆ. ಈ ದಿಶೆಯಲ್ಲಿ ಪುರಸಭೆ ಮತ್ತು ಪೊಲೀಸ್‌ ಇಲಾಖೆ ಮುಂದಾಗಬೇಕು. ಪಟ್ಟಣದಲ್ಲಿರುವ ಮಹನಿಯರ ಪ್ರತಿಮೆಗಳಿರುವ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಅಧಿಕಾರಿಗಳು ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಬಸವ ಕೇಂದ್ರ ನಗರ ಘಟಕ ಅಧ್ಯಕ್ಷ ಬಸವರಾಜ ಕೊಪ್ಪರ, ಛಲುವಾದಿ ಮಹಾಸಭಾ ಮುಖಂಡ ಲಿಂಗಪ್ಪ ಜಾಲಹಳ್ಳಿ ಆಗ್ರಹಿಸಿದ್ದಾರೆ.

ಪಟ್ಟಣದ ಪ್ರಮುಖ ಸ್ಥಳ, ವೃತ್ತಗಳಲ್ಲಿ ಪುರಸಭೆ ಅನುದಾನದಲ್ಲಿ ಸಿಸಿ ಕ್ಯಾಮೆರಾ
ಅಳವಡಿಕೆಗೆ ಚಿಂತನೆ ಇದೆ. ಈ ಕುರಿತು ಸಿಪಿಐ ಜತೆ ಚರ್ಚಿಸಲಾಗಿದೆ. ವಾರದಲ್ಲಿ ಪ್ರಕ್ರಿಯೆ
ಆರಂಭಿಸಲಾಗುವುದು.
ತಿಮ್ಮಪ್ಪ ಜಗ್ಲಿ
ಪುರಸಭೆ ಮುಖ್ಯಾಧಿಕಾರಿ

ಇತ್ತೀಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದೇನೆ. ಪುರಸಭೆ ಅಧಿಕಾರಿಗಳ ಜತೆ ಚರ್ಚಿಸಿ ಮಹನೀಯರ ಪ್ರತಿಮೆ ಇರುವೆಡೆ ಸಿಸಿ ಕ್ಯಾಮೆರಾ ಅಳವಡಿಸಿ, ಕಚೇರಿಯಲ್ಲಿ ನಿಗಾವಹಿಸಲು ವ್ಯವಸ್ಥೆ ಮಾಡಲಾಗುತ್ತದೆ.
ಆರ್‌.ಎಂ. ನದಾಫ್‌
ಸಿಪಿಐ, ದೇವದುರ್ಗ

Advertisement

Udayavani is now on Telegram. Click here to join our channel and stay updated with the latest news.

Next