Advertisement

ಓವರ್‌ಲೋಡ್‌ ಮರಳು ಸಾಗಾಟಕ್ಕಿಲ್ಲ ಕಡಿವಾಣ

12:15 PM Mar 16, 2020 | Naveen |

ದೇವದುರ್ಗ: ರಾಯಲ್ಟಿ ಪಾವತಿಸಿ ಅನುಮತಿ ಪಡೆದದ್ದಕ್ಕಿಂತ ಅಕ್ರಮ ಮತ್ತು ಓವರ್‌ಲೋಡ್‌ ಮರಳು ಸಾಗಾಟಕ್ಕೆ ತಾಲೂಕಿನಲ್ಲಿ ಕಡಿವಾಣ ಇಲ್ಲದಂತಾಗಿದೆ. ತಾಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಟ ಎಗ್ಗಿಲ್ಲದೇ ಸಾಗಿದೆ.

Advertisement

ಅಕ್ರಮ ಮರಳು ದಂಧೆ ಕಡಿವಾಣಕ್ಕೆ ಗಣಿ ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಪೊಲೀಸ್‌, ಪಿಡಬ್ಲ್ಯೂಡಿ ಸೇರಿ ಇತರೆ ಇಲಾಖೆ ಅಧಿಕಾರಿಗಳ ಸಮಿತಿ ರಚನೆ ಮಾಡಲಾಗಿದೆ. ಆದರೆ ಪೊಲೀಸ್‌ ಇಲಾಖೆ ಮಾತ್ರ ಅಕ್ರಮ ಮರಳು ಸಾಗಾಟ ತಡೆ ಕಾರ್ಯಾಚರಣೆ ನಡೆಸುತ್ತಿದ್ದು, ಉಳಿದ ಇಲಾಖೆಯವರು ಒಬ್ಬರತ್ತ ಮತ್ತೊಬ್ಬರು ಬೊಟ್ಟು ಮಾಡುತ್ತ ಹೊಣೆಯಿಂದ ನುಣುಚಿಕೊಳ್ಳುತ್ತಿದ್ದಾರೆ.

85 ಪ್ರಕರಣ ದಾಖಲು: ಪೊಲೀಸರು 2019ರ ಜನವರಿಯಿಂದ 2020ರ ಫೆಬ್ರವರಿವರೆಗೆ ಓವರ್‌ ಲೋಡ್‌ ಮರಳು ಸಾಗಾಟದ 85 ಪ್ರಕರಣ ದಾಖಲಿಸಿದ್ದಾರೆ. ದೇವದುರ್ಗ ಠಾಣೆ ವ್ಯಾಪ್ತಿಯಲ್ಲಿ 42, ಜಾಲಹಳ್ಳಿ 26, ಗಬ್ಬೂರು ಪೊಲೀಸ್‌ ಠಾಣೆಯಲ್ಲಿ 21 ಅಕ್ರಮ ಮರಳು ಸಾಗಾಟ, ಓವರ್‌ ಲೋಡ್‌ ಪ್ರಕರಣಗಳು ದಾಖಲಾಗಿವೆ.

ಪ್ರಭಾವಿಗಳ ಒತ್ತಡ: ಪೊಲೀಸರು ಅಕ್ರಮ ಮತ್ತು ಓವರ್‌ ಲೋಡ್‌ ಮರಳು ಸಾಗಿಸುವ ಟಿಪ್ಪರ್‌, ಲಾರಿ, ಟ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸುತ್ತಿದ್ದಂತೆ ತಾಲೂಕಿನ ಪ್ರಭಾವಿ ರಾಜಕಾರಣಿಗಳು, ಪಕ್ಷಗಳ ಮುಖಂಡರು ಪೊಲೀಸರ ಮೇಲೆ ಒತ್ತಡ ಹೇರಿ ಅವುಗಳನ್ನು ಬಿಡಿಸಿ ಕಳಿಸುತ್ತಿದ್ದಾರೆ. ಹೀಗಾಗಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳದಂತಾಗಿದೆ ಎನ್ನುತ್ತಾರೆ ಅಧಿಕಾರಿಗಳು.

ಪ್ರಾಣಕ್ಕೆ ಕುತ್ತು: ಗ್ರಾಮೀಣ ಭಾಗದಲ್ಲಿ ಮರಳು ಸಾಗಿಸುವ ಟಿಪ್ಪರ್‌, ಟ್ಯಾಕ್ಟರ್‌ಗಳು ವೇಗವಾಗಿ ಸಂಚರಿಸುವುದರಿಂದ ಅಪಘಾತ ಪ್ರಕರಣಗಳು ನಡೆಯುತ್ತಿವೆ. ಚಿಂಚೋಡಿ ಗ್ರಾಮದಲ್ಲಿ ಟಿಪ್ಪರ್‌ ಹಾಯ್ದು ಜಗದೀಶ ಎಂಬವರು ಮೃತಪಟ್ಟಿದ್ದು, ಫೆ.27ರಂದು ಜಾಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜನವರಿಯಲ್ಲಿ ನಗರಗುಂಡ ಗ್ರಾಮದಲ್ಲಿ ಟ್ಯಾಕ್ಟರ್‌ ಹಾಯ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದು, ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ರಜೆ ದಿನದಲ್ಲೂ ಮರಳು ಸಾಗಾಟ: ಕೆಲ ದಿನಗಳ ಹಿಂದೆ ಮಿನಿ ವಿಧಾನಸೌಧ ಸಭಾಂಗಣದಲ್ಲಿ ರಾಯಚೂರು ಸಹಾಯಕ ಆಯುಕ್ತ ಸಂತೋಷ ಕಾಮಗೌಡ ನೇತೃತ್ವದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ರವಿವಾರ ಮತ್ತು ಸರ್ಕಾರಿ ರಜೆ ದಿನಗಳಂದು ಮರಳು ಸಾಗಾಣಿಕೆಗೆ ನಿರ್ಬಂಧ ಹೇರುವಂತೆ ಸೂಚಿಸಿದ್ದರು. ಆದರೆ ತಾಲೂಕಿನ ಅಧಿಕಾರಿಗಳು ಈ ಆದೇಶ ಪಾಲನೆಗೆ ಮುಂದಾಗದ್ದರಿಂದ ರಜೆ ದಿನಗಳಲ್ಲೂ ಮರಳು ಸಾಗಾಟ ನಡೆಯುತ್ತಿದೆ.

ನದಿಗೆ ಇಟಾಚಿ ಹಾಗೂ ಟಿಪ್ಪರ್‌ಗಳನ್ನು ಇಳಿಸಿ ಹಗಲು ರಾತ್ರಿ ಎನ್ನದೆ ಮರಳು ಸಂಗ್ರಹಿಸುತ್ತಿದ್ದಾರೆ. ಟಿಪ್ಪರ್‌ಗಳು ಓವರ್‌ ಲೋಡ್‌ ತುಂಬಿಕೊಂಡು ಮರಳು ಸಾಗಿಸುತ್ತಿರುವದರಿಂದ ಗ್ರಾಮೀಣ ರಸ್ತೆಗಳು ಹಾಳಾಗುತ್ತಿವೆ. ಅಧಿಕಾರಿಗಳು ಮರಳು ದಂಧೆಗೆ ಕಡಿವಾಣ ಹಾಕಬೇಕೆಂದು ಕರವೇ ತಾಲೂಕು ಅಧ್ಯಕ್ಷ ಬಸವರಾಜ ಗೋಪಳಾಪುರ ಆಗ್ರಹಿಸಿದ್ದಾರೆ.

ಸಹಾಯಕ ಆಯುಕ್ತರು ತಾಲೂಕು ಕಚೇರಿಗೆ ಭೇಟಿ ನೀಡಿದಾಗ ಅಕ್ರಮ ಮರಳು ಸಾಗಾಣಿಕೆ ಕುರಿತು ಸಾರ್ವಜನಿಕರಿಂದ ಬಂದ ದೂರುಗಳನ್ನು ಗಮನಕ್ಕೆ ತರಲಾಗಿದೆ. ಅಕ್ರಮ ತಡೆಗೆ ಅಧಿಕಾರಿಗಳ ತಂಡ ರಚಿಸಲಾಗುವುದು.
ಮಧುರಾಜ್‌,
ತಹಶೀಲ್ದಾರ್‌

ಅಕ್ರಮ ಮರಳು ಮತ್ತು ಓವರ್‌ ಲೋಡ್‌ ಮರಳು ಸಾಗಾಟ ಕುರಿತು ಈಗಾಗಲೇ 80ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಂದೋಬಸ್ತ್ ಜೊತೆಗೆ ಅಕ್ರಮಕ್ಕೆ ಕಡಿವಾಣ ಹಾಕಲು ಪೊಲೀಸ್‌ ಇಲಾಖೆ ಮುಂದಾಗಿದೆ.
ಆರ್‌.ಎಂ. ನದಾಫ್‌,
ಸಿಪಿಐ ದೇವದುರ್ಗ

ನಾಗರಾಜ ತೇಲ್ಕರ್‌

Advertisement

Udayavani is now on Telegram. Click here to join our channel and stay updated with the latest news.

Next