Advertisement

ಭಾರತದ ತಳಹದಿಯನ್ನು ದುರ್ಬಲಗೊಳಿಸಲು ಬಿಡೆವು: ಸೋನಿಯಾ ಗಾಂಧಿ

07:44 PM Dec 28, 2021 | Team Udayavani |

ನವದೆಹಲಿ: “ದ್ವೇಷ ಮತ್ತು ಪೂರ್ವಗ್ರಹದಲ್ಲೇ ಮುಳುಗಿರುವ ವಿಭಜನಾತ್ಮಕ ಮನೋಭಾವವಿರುವ ಸಿದ್ಧಾಂತಗಳು ಭಾರತದ ಬಲಿಷ್ಠ ತಳಹದಿಯನ್ನು ದುರ್ಬಲಗೊಳಿಸಲು ಸರ್ವ ಪ್ರಯತ್ನ ನಡೆಸುತ್ತಿದೆ. ಇತಿಹಾಸವನ್ನೇ ತಿರುಚುತ್ತಾ, ದೇಶದ ಗಂಗಾ-ಜಮುನಾ ಪರಂಪರೆಯನ್ನು ಅಳಿಸಿಹಾಕಲು ಬಿಜೆಪಿ ಯತ್ನಿಸುತ್ತಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

Advertisement

ದೆಹಲಿಯಲ್ಲಿ ಮಂಗಳವಾರ ನಡೆದ ಪಕ್ಷದ 137ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ದೇಶದ ಜನಸಾಮಾನ್ಯನು ಈಗ ಅಸುರಕ್ಷತೆ ಮತ್ತು ಭಯದಿಂದ ಬದುಕುವಂತಾಗಿದೆ. ಪ್ರಜಾಸತ್ತೆ ಮತ್ತು ಸಂವಿಧಾನವನ್ನು ಗಾಳಿಗೆ ತೂರಿ ಸರ್ವಾಧಿಕಾರವನ್ನು ಮುನ್ನಲೆಗೆ ತರಲಾಗುತ್ತಿದೆ. ಕಾಂಗ್ರೆಸ್‌ ಇದನ್ನೆಲ್ಲ ಮೂಕಪ್ರೇಕ್ಷಕನಾಗಿ ನೋಡುವುದಿಲ್ಲ. ದೇಶದ ಭವ್ಯ ಪರಂಪರೆಯನ್ನು ನಾಶ ಮಾಡಲು ನಾವು ಬಿಡುವುದಿಲ್ಲ’ ಎಂದಿದ್ದಾರೆ.

ಬಿಜೆಪಿಯು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಅರ್ಹತೆಯೇ ಇಲ್ಲದ ಪಾತ್ರವನ್ನು ತನಗೆ ತಾನೇ ನೀಡಲು ಹೊರಟಿದೆ ಎಂದೂ ಆಡಳಿತಾರೂಢ ಪಕ್ಷದ ವಿರುದ್ಧ ಸೋನಿಯಾ ವಾಗ್ಧಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಲಲಿತ ಕಲೆಗಳಿಗೆ ಉತ್ತಮ ಪ್ರೋತ್ಸಾಹ:ಶಾಸಕ ಸುನಿಲ್ ನಾಯ್ಕ್

ಚುನಾವಣೆಯಲ್ಲಿ ಏಳುಬೀಳುಗಳು ಸಹಜ. ಆದರೆ, ನಮ್ಮ ವೈವಿಧ್ಯಮಯ ಸಮಾಜದ ಎಲ್ಲ ಜನರಿಗೂ ಕೊನೆಯವರೆಗೂ ನಮ್ಮ ಕೈಲಾದ ಸೇವೆ ಸಲ್ಲಿಸಲು ನಾವು ಬದ್ಧರಾಗಿರಬೇಕು ಎಂದು ಕಾಂಗ್ರೆಸ್‌ ಕಾರ್ಯಕರ್ತರಿಗೆ ಸೋನಿಯಾ ಕರೆ ನೀಡಿದ್ದಾರೆ.

Advertisement

ಕೆಳಗ್ಗೆ ಬಿದ್ದ ಕಾಂಗ್ರೆಸ್‌ ಧ್ವಜ
ಎಐಸಿಸಿ ಪ್ರಧಾನ ಕಚೇರಿಯಲ್ಲಿ ಬೆಳಗ್ಗೆ ಸೋನಿಯಾ ಅವರು ಧ್ವಜಾರೋಹಣ ನಡೆಸುವ ವೇಳೆ ಕಾಂಗ್ರೆಸ್‌ ಪಕ್ಷದ ಧ್ವಜವು ಏಕಾಏಕಿ ಸ್ತಂಭದಿಂದ ಕೆಳಕ್ಕೆ ಬಿದ್ದ ಘಟನೆ ನಡೆದಿದೆ. ಕೂಡಲೇ ಎಚ್ಚೆತ್ತ ಸೋನಿಯಾ ಹಾಗೂ ಇತರೆ ನಾಯಕರು ಧ್ವಜವು ಕೆಳಗೆ ಬೀಳದಂತೆ ತಡೆದಿದ್ದಾರೆ. ಬಳಿಕ ಹೊಸದಾಗಿ ಧ್ವಜಾರೋಹಣ ನೆರವೇರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next