ಬೆಂಗಳೂರು: ಗ್ರಾಮ ವಾಸ್ತವ್ಯ ದೇಶಕ್ಕೇ ಮಾದರಿಯಾಗುವಂತಹ ಕಾರ್ಯಕ್ರಮ ಆಗಬೇಕು ಎಂದು ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಆಶಯ ವ್ಯಕ್ತಪಡಿಸಿದ್ದಾರೆ.
ಗ್ರಾಮ ವಾಸ್ತವ್ಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯದ ಮೂಲಕ ಈಗಾಗಲೇ ಜನಪ್ರಿಯರಾಗಿದ್ದಾರೆ. ಹೈದರಾಬಾದ್-ಕರ್ನಾಟಕ ಮೂಲಕ ಮತ್ತೆ ಗ್ರಾಮ ವಾಸ್ತವ್ಯ ಆರಂಭಿಸಿರುವುದು ಸ್ವಾಗತಾರ್ಹ.
ಈ ಕಾರ್ಯಕ್ರಮವನ್ನು ಶಿಸ್ತು ಬದ್ಧವಾಗಿ ಆಯೋಜಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಮುಖ್ಯಮಂತ್ರಿಯವರು ವಾಸ್ತವ್ಯ ಮಾಡುವ ಗ್ರಾಮದ ಜತೆಗೆ ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳಿಗೂ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಸಚಿವರಾದ ಬಂಡೆಪ್ಪ ಕಾಶೆಂಪೂರ್, ವೆಂಕಟರಾವ್ ನಾಡಗೌಡ ಮಾತನಾಡಿ, ಗ್ರಾಮ ವಾಸ್ತವ್ಯ ವಿನೂತನವಾದ ಕಾರ್ಯಕ್ರಮ. ಜನರೊಂದಿಗೆ ನೇರ ಸಂಪರ್ಕಕ್ಕೆ ಇದು ಸಹಾಯಕ. ಈ ಹಿಂದೆ ಮುಖ್ಯಮಂತ್ರಿಯವರು ಗ್ರಾಮ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಹಲವು ಯೋಜನೆಗಳು ರೂಪುಗೊಂಡಿದ್ದವು. ಜನರ ಆಶೋತ್ತರಗಳನ್ನು ಈಡೇರಿಸಲು ಜಿಲ್ಲಾಡಳಿತ ಸಜ್ಜಾಗಬೇಕು ಎಂದು ಹೇಳಿದರು
.
ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ.ಸುಬ್ರಹ್ಮಣ್ಯ, ಹಿರಿಯ ಅಧಿಕಾರಿಗಳಾದ ಡಾ.ಇ.ವಿ.ರಮಣರೆಡ್ಡಿ, ಡಾ.ರಜನೀಶ್ ಗೋಯಲ್, ಎಲ್.ಕೆ.ಅತೀಕ್, ರಾಕೇಶ್ ಸಿಂಗ್, ಕುಮಾರ್‌ನಾಯಕ್ ಅವರು ಮಾತನಾಡಿ, ಮುಖ್ಯಮಂತ್ರಿಯವರ ಗ್ರಾಮ ವಾಸ್ತವ್ಯಕ್ಕೆ ಪೂರ್ವಭಾವಿಯಾಗಿ ಸ್ಥಳ ಭೇಟಿ ಮಾಡಿ ಜನ ಸಾಮಾನ್ಯರ ಸಮಸ್ಯೆಗಳನ್ನು ಅರಿತು ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳು ಹಿಂದಿನ ಗ್ರಾಮವಾಸ್ತವ್ಯ ನೆನಪು ಹಂಚಿಕೊಂಡರು. ಆ ಸಂದರ್ಭದಲ್ಲಿ ರೂಪಿಸಿದ್ದ ಸುವರ್ಣ ಗ್ರಾಮ ಯೋಜನೆ ಜೀವ ಕೊಡಬೇಕು ಎಂದು ಹೇಳಿದರು.