Advertisement

ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಅಯೋಧ್ಯಾ ಸಭೆ ನಿರ್ಣಯ

11:04 PM Nov 01, 2020 | mahesh |

ಉಡುಪಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣ ಕುರಿತು ದೇಶಾದ್ಯಂತ ಅಭಿಯಾನವನ್ನು ಮಕರಸಂಕ್ರಾಂತಿ ಮರುದಿನ ಜ. 15ರಿಂದ 45 ದಿನಗಳ ಕಾಲ ನಡೆಸಲು ಅಯೋಧ್ಯೆ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ನಿರ್ಧರಿಸಿದೆ. ಅಯೋಧ್ಯೆ ಪ್ರವಾಸಿ ಮಂದಿರದಲ್ಲಿ ರವಿವಾರ ನಡೆದ ಟ್ರಸ್ಟ್‌ನ ಸಭೆಯಲ್ಲಿ ಈ 45 ದಿನಗಳ ಅವಧಿಯಲ್ಲಿ ಕಾರ್ಯಕರ್ತರು ಮನೆಮನೆಗಳಿಗೆ ತೆರಳಿ ದೇಣಿಗೆ ಸಂಗ್ರಹಿಸಲು ನಿರ್ಧರಿಸಲಾಯಿತು.

Advertisement

ಮಂದಿರ ನಿರ್ಮಿಸುವ ಎಲ್‌ ಆ್ಯಂಡ್‌ ಟಿ ಕಂಪೆನಿ ಮತ್ತು ಟಾಟಾ ಕನ್ಸಲ್ಟೆನ್ಸಿ ಸಂಸ್ಥೆಯ ಪ್ರತಿನಿಧಿಗಳು ಹಾಜರಿದ್ದು ಅವರಿಬ್ಬರ ವಿವಿಧ ಜವಾಬ್ದಾರಿಗಳ ಕುರಿತು ವಿಸ್ತೃತವಾಗಿ ಚರ್ಚಿಸಿದರು. ವಿವಿಧ ಬ್ಯಾಂಕ್‌ಗಳು ಖಾತೆತೆರೆಯಲು ಮನವಿ ಮಾಡಿಕೊಂಡಿದ್ದವು. ಆದರೆ ಭಾರತೀಯ ಸ್ಟೇಟ್‌ ಬ್ಯಾಂಕ್‌ ಒಂದರಲ್ಲಿಯೇ ಖಾತೆ ತೆರೆಯಲು ಸಭೆ ನಿರ್ಧರಿಸಿತು.

ಮಂದಿರ ನಿರ್ಮಾಣ ಮಾಡುವಾಗ ಎಂಜಿನಿಯರುಗಳ ಚಿಂತನೆ ನಡೆಯುತ್ತದೆ. ಆದರೆ ಭಾರತೀಯ ವಾಸ್ತು ರೀತಿಯಲ್ಲಿಯೂ ಚಿಂತನೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂತಹ ನಾಲ್ಕೈದು ವಾಸ್ತುತಜ್ಞರನ್ನು ಒಳಗೊಂಡ ಸಮಿತಿಯನ್ನು ರಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಟ್ರಸ್ಟಿಗಳಾದ ಶ್ರೀಗೋವಿಂದದೇವಗಿರಿ ಸ್ವಾಮೀಜಿ, ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ನೃಪೇಂದ್ರ ಮಿಶ್ರಾ, ಚಂಪತ್‌ರಾಯ್‌, ದಿನೇಶ್‌ ಚಂದ್ರ, ಡಾ| ಅನಿಲ್‌ ಮಿಶ್ರಾ, ರಾಜವಿಮಲೇಂದ್ರ ಮಿಶ್ರಾ, ಮೊದಲಾದವರು ಪಾಲ್ಗೊಂಡಿದ್ದರು. ಸಂಜೆ 6ರಿಂದ 7 ಗಂಟೆವರೆಗೆ ರಾಮಲಲ್ಲಾನ ಪೂಜೆಯಲ್ಲಿ ಟ್ರಸ್ಟಿಗಳು ಪಾಲ್ಗೊಂಡರು. ಪೇಜಾವರ ಸ್ವಾಮೀಜಿ ಸೋಮವಾರ ನೈಮಿಶಾರಣ್ಯ, ಬಳಿಕ ಹರಿದ್ವಾರ, ಬದರಿಗೆ ಭೇಟಿ ನೀಡಿ ದಿಲ್ಲಿಗೆ ಹೋಗಲಿದ್ದಾರೆ. ದಿಲ್ಲಿಯಲ್ಲಿ ನ. 10, 11ರಂದು ನಡೆಯುವ ಟ್ರಸ್ಟ್‌ ಸಭೆಯಲ್ಲಿ ಭಾಗವಹಿಸಿ ವಾಪಸಾಗುವರು.

ಧಾರಣ ಸಾಮರ್ಥ್ಯ ಅಧ್ಯಯನ
ಸಭೆ ಬಳಿಕ ಸ್ಥಳ ಪರಿಶೀಲನೆ ನಡೆಯಿತು. ಜನ್ಮ ಭೂಮಿ ಸ್ಥಳದಲ್ಲಿ ಜಾಗವನ್ನು ಸಮತಟ್ಟು ಮಾಡುವ ಕೆಲಸ ನಡೆಯುತ್ತಿದೆ. ಧಾರಣ ಸಾಮರ್ಥ್ಯವನ್ನು ಅಧ್ಯಯನ ನಡೆಸಲಾಗುತ್ತಿದೆ. ಹಳೆಯಕಟ್ಟಡಗಳನ್ನು ತೆರವುಗೊಳಿಸಲಾಗುತ್ತಿದೆ. ನಿವೇಶನದ ಪಶ್ಚಿಮ ದಿಕ್ಕಿನಲ್ಲಿ ತಗ್ಗು ಪ್ರದೇಶವಿದ್ದು ಇದನ್ನು ಮಣ್ಣು ಹಾಕಿ ತುಂಬಿಸಲಾಗುತ್ತಿದೆ. ಹಿಂದೆ ಮಂದಿರಕ್ಕಾಗಿ ನಡೆದ ಕೆತ್ತನೆಗಳನ್ನು ನಿವೇಶನಕ್ಕೆ ಸ್ಥಳಾಂತರಿಸಲಾಗುತ್ತಿದೆ ಎಂದು ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ.

 

Advertisement
Advertisement

Udayavani is now on Telegram. Click here to join our channel and stay updated with the latest news.

Next