Advertisement

ಹದಗೆಟ್ಟ ರಸ್ತೆ: ಪ್ರಧಾನಿಗೆ ಪತ್ರ

11:04 PM Sep 01, 2019 | Lakshmi GovindaRaj |

ಹೊಸನಗರ: ಹದಗೆಟ್ಟ ರಸ್ತೆ ಅವ್ಯವಸ್ಥೆ ಬಗ್ಗೆ ಕಾಲೇಜು ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಇದಕ್ಕೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದೆ. ಅರೋಡಿಯಿಂದ ಮಂಡರಳ್ಳಿಗೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟು ಓಡಾಡುವುದೇ ದುಸ್ತರ ಎಂಬಂತಾಗಿದೆ. ಈ ಬಗ್ಗೆ ಕೊಡಸೆ ಗ್ರಾಮದ ಗಣಪತಿ ಭಟ್‌ ಎಂಬುವವರ ಪುತ್ರಿ, ಹೊಸನಗರ ಕೊಡಚಾದ್ರಿ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿರುವ ಐಶ್ವರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸೂಕ್ತ ಕ್ರಮಕ್ಕಾಗಿ ಮನವಿ ಸಲ್ಲಿಸಿದ್ದಳು.

Advertisement

ಪ್ರಧಾನಿ ಕಚೇರಿ ಸ್ಪಂದನೆ: ವಿದ್ಯಾರ್ಥಿನಿ ಐಶ್ವರ್ಯ ಮನವಿಗೆ ಪ್ರಧಾನಿ ಕಚೇರಿಯಿಂದ ಸ್ಪಂದನೆ ದೊರೆತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ರವಾನಿಸಲಾಗಿತ್ತು. ಈ ಪತ್ರಕ್ಕೆ ಸ್ಪಂದಿಸಿದ ಮುಖ್ಯ ಕಾರ್ಯದರ್ಶಿಗಳು ಶಿವಮೊಗ್ಗ ಜಿಪಂ ಸಿಇಒಗೆ ಪತ್ರ ಬರೆದು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಆರಗ ಜ್ಞಾನೇಂದ್ರ ಅವರಿಗೂ ವಿಷಯ ಗಮನಕ್ಕೆ ಬಂದಿದ್ದು ರಸ್ತೆ ಅಭಿವೃದ್ಧಿ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಜಿಪಂ ಸದಸ್ಯರು ಭೇಟಿ ನೀಡಿ 2 ತಿಂಗಳೊಳಗೆ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ್ದಾರೆ.

ಸ್ಥಳಕ್ಕೆ ಜಿಪಂ ಸದಸ್ಯ ಭೇಟಿ: ಸಂಸದ ಬಿ.ವೈ. ರಾಘವೇಂದ್ರ ಸೂಚನೆಯಂತೆ ಆರೋಡಿ ಗ್ರಾಮಕ್ಕೆ ಆಗಮಿಸಿದ ಜಿಪಂ ಸದಸ್ಯ ಸುರೇಶ್‌ ಸ್ವಾಮಿರಾವ್‌ ಆರೋಡಿ ಮಂಡ್ರಳ್ಳಿ ರಸ್ತೆ ಅವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಮಾತನಾಡಿದ ಅವರು, ರಸ್ತೆ ಅವ್ಯವಸ್ಥೆ ಬಗ್ಗೆ ಪ್ರಧಾನ ಮಂತ್ರಿಗಳ ಗಮನ ಸೆಳೆದ ವಿದ್ಯಾರ್ಥಿನಿ ಐಶ್ವರ್ಯ ಕಾಳಜಿಯನ್ನು ಪ್ರಶಂಸಿಸಿದರು. ಜಿಪಂನಲ್ಲಿ ನಮಗೆ ಸಿಗುವ ಅನುದಾನದಲ್ಲಿ ರಸ್ತೆಯ ಸಂಪೂರ್ಣ ಅಭಿವೃದ್ಧಿ ಕಷ್ಟ. ಆದರೆ ಸಂಸದ ಬಿ.ವೈ. ರಾಘವೇಂದ್ರ ಮತ್ತು ಶಾಸಕ ಆರಗ ಜ್ಞಾನೇಂದ್ರ ಕೂಡ ಸ್ಪಂದಿಸುವ ಭರವಸೆ ನೀಡಿದ್ದು ಮುಂದಿನ 2 ತಿಂಗಳೊಳಗೆ ರಸ್ತೆಯನ್ನು ದುರಸ್ತಿ ಮಾಡಿಸುವ ಭರವಸೆ ನೀಡಿದರು.

ಪ್ರಧಾನಿಗಳಿಗೆ ಬರೆದ ಪತ್ರಕ್ಕೆ ಸ್ಪಂದನೆ ದೊರಕಿರುವುದು ಖುಷಿ ತಂದಿದೆ. ರಸ್ತೆ ಅವ್ಯವಸ್ಥೆಗೆ ಮುಕ್ತಿ ಸಿಕ್ಕಿದಾಗ ಮಾತ್ರ ಶ್ರಮ ಸಾರ್ಥಕವಾಗುತ್ತದೆ.
-ಐಶ್ವರ್ಯ, ವಿದ್ಯಾರ್ಥಿನಿ

Advertisement

Udayavani is now on Telegram. Click here to join our channel and stay updated with the latest news.

Next