Advertisement
ಉಡುಪಿ ಕಡೆಯ ಮಾರ್ಗವಾಗಿ ಕಾರ್ಕಳ ನಗರ ತಲುಪುವ ಮುಂಚಿತ ಪುರಸಭೆ ವ್ಯಾಪ್ತಿಯ ಬಂಡಿಮಠ, ಸಾಲ್ಮರ ಪರಿಸರ ತಲುಪುತ್ತಿದ್ದಂತೆ ಗುಂಡಿಗಳ ದರ್ಶನವಾಗುತ್ತವೆ. ಸಾಲ್ಮರದ ಅಷ್ಟೂ ದೂರದವರೆಗೆ ಮುಖ್ಯ ರಸ್ತೆಯ ಡಾಮರು ಕಿತ್ತು ಹೋಗಿ ದೊಡ್ಡ ಗುಂಡಿಗಳು ನಿರ್ಮಾಣಗೊಂಡಿವೆ. ರಸ್ತೆಯ ಅಲ್ಲಲ್ಲಿ ಚಿಕ್ಕದಾಗಿದ್ದ ಹೊಂಡಗಳ ಗಾತ್ರ ಮಳೆಗೆ ಬೃಹದಾಕಾರವಾಗಿ ಮಾರ್ಪಟ್ಟಿವೆ.
Related Articles
Advertisement
ಲೊಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಕಳ ಉಪ ವಿಭಾಗ ವತಿಯಿಂದ ಕಾರ್ಕಳ ಪುರಸಭೆ ವ್ಯಾಪ್ತಿಯ ಸಾಲ್ಮರದಿಂದ ಜಯಭಾರತಿ ಡ್ರೈವಿಂಗ್ ಸ್ಕೂಲ್ ವರೆಗೆ ಚತುಷ್ಪಥ ರಸ್ತೆ ನಿರ್ಮಾಣವನ್ನು ಮಹಾಮಸ್ತಕಾಭಿಷೇಕ ವಿಶೇಷ ಅನುದಾನದಲ್ಲಿ ಮಾಡಲಾಗಿತ್ತು. ಅಂದು ಗುತ್ತಿಗೆದಾರರು ಕಾಮಗಾರಿ ನಡೆಸುವಾಗಲೇ ಸಾರ್ವಜನಿಕರು ಕಾಮಗಾರಿ ಕಳಪೆ ಎಂದು ದೂರಿದ್ದರು.
ದಾಟಿ ಹೋದರೂ ಕಣ್ಣಿಗೆ ಬಿದ್ದಿಲ್ಲ!:
ಅಧಿಕಾರಿಗಳು, ಜನಪ್ರತಿನಿಧಿಗಳು ಇದೇ ರಸ್ತೆಯ ಹೊಂಡ ದಾಟಿಯೇ ಹತ್ತಾರು ಕಾರ್ಯಕ್ರಮಗಳಿಗೆ ತೆರಳುತ್ತಾರೆ. ಆದರೆ ಅವರ್ಯಾರ ಕಣ್ಣಿಗೂ ಈ ಗುಂಡಿಗಳು ಬೀಳದಿರುವುದು ವಿಶೇಷ. ಇನ್ನು ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳು, ಸರಕಾರಿ, ಖಾಸಗಿ ಸಂಸ್ಥೆಗಳ ಉದ್ಯೋಗಸ್ಥರು, ಮಹಿಳೆಯರು ವಾಹನದಲ್ಲಿ ಓಡಾಡುವಾಗ ಭಯ ಪಡುತ್ತಿದ್ದಾರೆ. ಮಳೆಗೆ ರಸ್ತೆಯ ಹೊಂಡಗಳಲ್ಲಿ ನೀರು ನಿಂತು ಗುಂಡಿಗಳ ಅರಿವಿಲ್ಲದೆ ಬಿದ್ದು ಗಾಯಗೊಳ್ಳುತ್ತಿದ್ದಾರೆ.
ಅಪಘಾತ ತಡೆಗೆ ಬ್ಯಾರಿಕೇಡ್? :
ಪುರಸಭೆ ವ್ಯಾಪ್ತಿಯ ಸಾಲ್ಮರ ಬಳಿ ರಸ್ತೆ ಹದಗೆಟ್ಟು ಹೊಂಡ ನಿರ್ಮಾಣವಾದ ಸ್ಥಳಕ್ಕೆ ಪುರಸಭೆ ಮುಖ್ಯಾಧಿಕಾರಿ ರೂಪಾ ಶೆಟ್ಟಿ ನೇತೃತ್ವದಲ್ಲಿ ಅಧಿಕಾರಿಗಳು ದಿಢೀರ್ ಭೇಟಿ ನೀಡಿದರು. ಪೊಲೀಸರು ಕೂಡಲೆ ಆ ಸ್ಥಳದಲ್ಲಿ ಬ್ಯಾರಿಕೇಡ್ ಇರಿಸಿ ಅಪಘಾತ ತಡೆ ಪ್ರಯತ್ನವನ್ನು ಮಂಗಳವಾರ ನಡೆಸಿದ್ದಾರೆ.
ಮಳೆ ಬಂದರೆ ನಡು ಪೇಟೆ ಹೊಳೆಯಾಗುತ್ತದೆ! :
ಮೂರುಮಾರ್ಗ ಜಂಕ್ಷನ್‌ನಿಂದ ಬಸ್‌ನಿಲ್ದಾಣಕ್ಕೆ ತೆರಳುವ ಮಾರ್ಗ ಮಧ್ಯೆ ಮುಖ್ಯ ಪೇಟೆಯ ನಡು ರಸ್ತೆಯಲ್ಲಿ ದೊಡ್ಡ ಹೊಂಡವಿದ್ದು, ಅಪಘಾತಕ್ಕೆ ಆಹ್ವಾನ ನೀಡುತ್ತಿದೆ. ಒಂದು ಬಾರಿ ಹೊಂಡ ಮುಚ್ಚಿದ್ದರೂ ಮತ್ತೆ ತೆರೆದಿದೆ. ಸೂಕ್ತ ಚರಂಡಿಯಿಲ್ಲದೆ ಮಳೆ ಬಂದಾಗ ರಸ್ತೆ ಮೇಲೆ ನೀರು ನಿಂತು ಹೊಂಡ ಕಾಣದಂತಾಗುತ್ತದೆ.
ನಿರಂತರ ಮಳೆ ಸುರಿಯುತ್ತಿರುವುದರಿಂದ ಈಗ ಕಾಮಗಾರಿ ನಡೆಸಲು ಅಡಚಣೆಯಾಗಿದೆ. ಮಳೆ ಸ್ವಲ್ಪ ಕಡಿಮೆಯಾದಲ್ಲಿ ತತ್‌ಕ್ಷಣವೇ ದುರಸ್ತಿ ಪಡಿಸಲಾಗುವುದು. ಮೂರು ಮಾರ್ಗ ರಸ್ತೆಯಲ್ಲಿ ತಾನೇ ನಿಂತು ಕೆಲಸ ಮಾಡಿಸಿದ್ದೆ. ಸತತ ಮಳೆಯಿಂದ ಮತ್ತೆ ಹೊಂಡ ಬಿದ್ದಿದೆ. ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡುವೆ. –ಸುಮಾಕೇಶವ್, ಅಧ್ಯಕ್ಷೆ ಪುರಸಭೆ ಕಾರ್ಕಳ
-ಬಾಲಕೃಷ್ಣ ಭೀಮಗುಳಿ