ನಿಡ್ಪಳ್ಳಿ : ಇಲ್ಲಿನ ಜಿ.ಪಂ. ಹಿ.ಪ್ರಾ. ಶಾಲೆಗೆ ಹೋಗುವ ರಸ್ತೆ ತೀರಾ ಹದಗೆಟ್ಟಿದ್ದು, ಈ ರಸ್ತೆ ಯಲ್ಲಿ ನಡೆದಾಡಲೂ ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ನಿರ್ವಹಣೆ ಇಲ್ಲದೆ ರಸ್ತೆಯು ಗುತ್ತು ಚಾವಡಿಯ ಎದುರುಗಡೆ ಮತ್ತು ಚಿಕ್ಕೋಡಿ, ಗೋಳಿತ್ತಡಿ ಬಳಿ ಸಂಪೂರ್ಣ ಕೆಸರುಮಯವಾಗಿದೆ. ಎಲ್ಲಿ ಹೆಜ್ಜೆ ಹಾಕಿದರಲ್ಲಿ ಕೆಸರು ಮೆತ್ತಿಕೊಳ್ಳುತ್ತಲಿದೆ. ಶಾಲಾ ಮಕ್ಕಳ ಪರಿಸ್ಥಿತಿಯಂತೂ ದುಸ್ತರವಾಗಿದೆ. ಈ ಶೋಚನೀಯ ಪರಿಸ್ಥಿತಿ ಸರಿಪಡಿಸುವತ್ತ ಯಾರೂ ಗಮನಹರಿಸಿಲ್ಲ. ಸ್ಥಳೀಯ ಜನಪ್ರತಿನಿಧಿಗಳು, ಸಂಬಂಧಪಟ್ಟ ಅಧಿಕಾರಿಗಳು ಒಮ್ಮೆ ಇತ್ತ ಚಿತ್ತ ವಹಿಸಿ ರಸ್ತೆ ಸಮಸ್ಯೆ ಬಗೆಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ತತ್‌ಕ್ಷಣ ದುರಸ್ತಿಗೊಳಿಸಲಿ
ರಸ್ತೆ ಕೆಸರುಮಯವಾದ ಕಾರಣ ಮಕ್ಕಳಿಗೆ ಶಾಲೆಗೆ ಹೋಗಲು ಬಹಳ ಕಷ್ಟವಾಗಿದೆ. ಶಾಲೆಯಿಂದ ಮನೆಗೆ ಬರುವಾಗ ಡ್ರೆಸ್ ಮತ್ತು ಮೈಮೇಲೆ ಪೂರ್ತಿ ಮಣ್ಣು ತುಂಬಿರುತ್ತದೆ. ಇದರಿಂದ ಮಕ್ಕಳು ಶಾಲೆಗೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಗ್ರಾ.ಪಂ. ಈ ಕಡೆ ಗಮನ ಕೊಟ್ಟು ತತ್‌ಕ್ಷಣ ರಸ್ತೆ ದುರಸ್ತಿಗೊಳಿಸಲಿ.
– ಸುಮತಿ
ಶಾಲಾ ಎಸ್‌ಡಿಎಂಸಿ ಸದಸ್ಯೆ