ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಮನಗನಾಳ ಹತ್ತಿರದ ಕಾಟನ್ ಮಿಲ್ ಸಮೀಪ ನಡೆದ ದರೋಡೆ ಪ್ರಕರಣದ ಆರೋಪಿಗಳನ್ನು ಒಂದೇ ದಿನದಲ್ಲಿ ಪತ್ತೆ ಹಚ್ಚುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ಮೂಲದ ಸಿಮೆಂಟ್ ತುಂಬಿದ್ದ ಲಾರಿಯನ್ನು ಅಡ್ಡಗಟ್ಟಿ ತಡೆದು ಚಾಲಕ ಮತ್ತು ಕ್ಲೀನರ್ ಗೆ ಹೊಡೆದು ಬೆದರಿಸಿ ಅವರಲ್ಲಿದ್ದ 47,200 ರೂಪಾಯಿ ದರೋಡೆ ಮಾಡಿದ ಘಟನೆ ಫೆ. 11ರ ಸಾಯಂಕಾಲ ನಡೆದಿತ್ತು.
ಸಿಮೆಂಟ್ ಲೋಡ್ ತೆಗೆದುಕೊಂಡು ಸೇಡಂನಿಂದ ಸಿಂಧನೂರಕ್ಕೆ ಯಾದಗಿರಿ ಶಹಾಪೂರ ರಸ್ತೆಯ ಮೂಲಕ ಹೋಗುತ್ತಿದ್ದಾಗ ವಡಗೇರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು.
ಅಪರಿಚಿತ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದ ಪೊಲೀಸರು ಬುಧವಾರ ರಾತ್ರಿ ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಕಾರು ಕೆಎ – 52 ಎಮ್ – 1981 ಸಹಿತ ಯಾದಗಿರಿಯ ಬಸವರಾಜ ಸಿಂಧೆ, ಸಂತೋಷ ತಳವಾರ್ ಚಟ್ನಳ್ಳಿ ಎನ್ನುವವರನ್ನು ವಶಕ್ಕೆ ಪಡೆದಿದ್ದಾರೆ. ಇವರಿಂದ ಸುಮಾರು 35 ಸಾವಿರ ನಗದು ವಶಕ್ಕೆ ಪಡೆದಿಯಲಾಗಿದೆ.
ಪ್ರಕರಣ ಭೇದಿಸಲು ಯಾದಗಿರಿ ಸಿಪಿಐ ಶರಣಗೌಡ ಎನ್.ಎಂ., ವಡಗೇರಾ ಪಿಎಸ್ ಐ ಸಿದರಾಯ ಬಳೂರ್ಗಿ ಹಾಗು ಸಿಬ್ಬಂದಿಗಳ ತಂಡ ರಚಿಸಲಾಗಿತ್ತು.