ಸಿಂದಗಿ: ಪಟ್ಟಣದ ಕೈಗಾರಿಕಾ ವಲಯದಲ್ಲಿ ಇತ್ತೀಚೆಗೆ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳನ್ನು ಸಿಂದಗಿ ಪೊಲೀಸರು ಪತ್ತೆ ಹಚ್ಚಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಮ್ ಹೇಳಿದರು.
ಸಿಂದಗಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 30ರಂದು ಶವವಾಗಿ ಸಿಕ್ಕ ಬಾಲಕಿ ಜ್ಯೋತಿ ಕೋರಿ (10) ಅವರ ತಂದೆ ಯಲ್ಲಪ್ಪ ಕೋರಿ ದೂರಿನನ್ವಯ ಸಿಂದಗಿ ಪೊಲೀಸ್‌ರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಪ್ರಮುಖ ಆರೋಪಿ ತಾಲೂಕಿನ ಮೋರಟಗಿ ಗ್ರಾಮದ ಶರಣಪ್ಪ ದುಂಡಪ್ಪ ಒಡೆಯರ (35) ಮತ್ತು ತಾಲೂಕಿನ ಅಂತರಗಂಗಿ ಗ್ರಾಮದ ಇಮಾಮಸಾಬ ಮೈಬೂಬಸಾಬ ನದಾಫ್ (50) ಅವರನ್ನು ಬಂಧಿಸಲಾಗಿದೆ.
ಪ್ರಮುಖ ಆರೋಪಿ ಶರಣಪ್ಪ ದುಂಡಪ್ಪ ಒಡೆಯರ ಮೇ 29ರಂದು ಬಾಲಕಿ ಜ್ಯೋತಿಯನ್ನು ಅಪಹರಣ ಮಾಡಿ ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಬಾಲಕಿಯನ್ನು ಹಾಗೆ ಬಿಟ್ಟರೆ ಮನೆಯಲ್ಲಿ ಹೇಳುತ್ತಾಳೆ ಎಂಬ ಭಯದಿಂದ ಅವಳನ್ನು ಕತ್ತು ಹಿಚುಕಿ ಕೊಲೆ ಮಾಡಿದ್ದಾನೆ. ಶವವನ್ನು ಇಮಾಮಸಾಬ
ಮೈಬೂಬಸಾಬ ನದಾಫ್ ಅವರಿಗೆ ಸೇರಿದ ಕಾರಿನಲ್ಲಿ ರಾತ್ರಿಯೆ ಹಾಕಿ ಹೋಗಿದ್ದಾನೆ ಎನ್ನಲಾಗಿದೆ.
ಕಾರಿನಲ್ಲಿದ್ದ ಬಾಲಕಿ ಶವ ಕಂಡು ಇಮಾಮಸಾಬ ನದಾಫ್ ಗಾಬರಿಯಾಗಿ ಅಲ್ಲಿದ್ದ ಶರಣಪ್ಪನನ್ನು ವಿಚಾರಿಸಿದಾಗ ಎಲ್ಲವನ್ನು ಹೇಳಿದಾಗ ಹೇಗಾದರು ತಪ್ಪಿಸಿಕೊಳ್ಳಬೇಕು ಎಂಬ ಭರದಲ್ಲಿ ಬಾಲಕಿ ಶವವನ್ನು ಕಾರಿನಿಂದ ಹೊರ ತಗೆದು ರಸ್ತೆಯ ಪಕ್ಕದಲ್ಲಿನ ಗರಸಿನ ದಿಬ್ಬೆ ಹತ್ತಿರ ಬಿಸಾಕಲಾಗಿದೆ ಎಂದು ಆರೋಪಿ ಶರಣಪ್ಪ ಆರೋಪವನ್ನು ಒಪ್ಪಿಕೊಂಡಿದ್ದಾನೆ.
ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿದ ಇಂಡಿ ಡಿವೈಎಸ್‌ಪಿ ರವೀಂದ್ರ ಶಿವೂರ, ಸಿಪಿಐ ಎಂ.ಕೆ. ದ್ಯಾಮಣ್ಣವರ, ಸಿಂದಗಿ ಪಿಎಸೈ ನಿಂಗಪ್ಪ ಪೂಜಾರಿ, ದೇವರಹಿಪ್ಪರಗಿ ಪಿಎಸೈ ಬಸವರಾಜ ಬಿಸನಕೊಪ್ಪಾ, ಕಲಕೇರಿ ಪಿಎಸೈ ಎಂ.ಎನ್. ಸಿಂಧೂರ ಮತ್ತು ಸಿಬ್ಬಂದಿಗಳಾದ ಎ.ಎಲ್. ಹೊಸಮನಿ, ಎಸ್.ಎಂ. ಬೆನಕನಳ್ಳಿ, ಜೆ.ಎಸ್. ಗಲಗಲಿ, ಎ.ಎಸ್. ನಾಯೊRàಡಿ, ಶಿವಾನಂದ ನಾಟೀಕಾರ, ಎಸ್.ಎಸ್. ಬಗಲಿ, ಎಸ್.ಎಸ್. ಅಮಲಿಹಾಳ, ಎಸ್.ಎಸ್. ಯಳಸಂಗಿ, ಆರ್. ಎಲ್. ಕಟ್ಟಿಮನಿ, ಐ.ವೈ. ದಳವಾಯಿ, ವೈ. ಕೆ. ಉಕುಮನಾಳ, ಎಸ್.ಬಿ. ಉಮರಾಣಿ, ಎಸ್.ಪಿ. ಹುನಸಿಕಟ್ಟಿ, ಎಸ್.ಎಸ್. ಹೂಗಾರ, ಎ.ಎನ್. ಕುಂಬಾರ, ಸಿ.ಎಸ್. ತೋಳಮಟ್ಟಿ, ಎಸ್.ಎನ್. ಬೇವಿನಕಟ್ಟಿ ಅವರ ತಂಡಕ್ಕೆ 10 ಸಾವಿರ ರೂ. ಬಹುಮಾನ ಘೋಷಿಸಿದರು.