ಕಾಪು: ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ನೇತೃತ್ವದ ಪೊಲೀಸರ ತಂಡ ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ನಾಲ್ಕು ಮಂದಿ ಅಂತಾರಾಜ್ಯ ವಾಹನ ಚೋರರನ್ನು ಬಂಧಿಸಿ, 11 ವಾಹನಗಳನ್ನು ವಶಪಡಿಸಿಕೊಂಡಿದೆ.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ತಮಿಳುನಾಡು ಮೂಲದ ನಾಲ್ವರು ಅಂತಾರಾಜ್ಯ ವಾಹನ ಚೋರರನ್ನು ಬಂಧಿಸಿರುವ ಪೊಲೀಸರು ಕರಾವಳಿ ಸೇರಿದಂತೆ ವಿವಿಧೆಡೆಗಳಲ್ಲಿ ಕಳವಾಗಿರುವ 11ಕ್ಕೂ ಅಧಿಕ ವಾಹನ ಕಳವು ಪ್ರಕರಣಗಳನ್ನು ಭೇದಿಸಿದ್ದಾರೆ.
ಶಿವಮೊಗ್ಗ ಮೂಲದ ಸಯ್ಯದ್ ಮೆಹಬೂಬ್ ಪಾಷ (57), ಸಯ್ಯದ್ ಮಜರ್ ಪಾಷಾ (23), ಚಿಕ್ಕಮಗಳೂರು ಎನ್.ಆರ್. ಪುರ ನಿವಾಸಿವ ಎಲಿಯಾಸ್ ಯಾನೆ ಬಾಬು (58) ಮತ್ತು ತಮಿಳುನಾಡಿನ ಜಿಯಾವುಲ್ ಹಕ್ (37) ಬಂಧಿತರು.
ಜುಲೈ 19ರಂದು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ನ್ಯಾಯಾಲಯ ಮತ್ತೆ ಪೊಲೀಸರ ವಶಕ್ಕೆ ನೀಡಿತ್ತು.
ಅದರಂತೆ ವಾಹನಗಳ ಪತ್ತೆಗಾಗಿ ಪೊಲೀಸರ ತಂಡ ತಮಿಳುನಾಡಿಗೆ ತೆರಳಿದ್ದು ಅಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ವಾಹನಗಳನ್ನು ವಶಪಡಿಸಕೊಳ್ಳ ಲಾಗಿದೆ ಎಂದು ಕಾರ್ಕಳ ಎಎಸ್ಪಿ ಕೃಷ್ಣಕಾಂತ್ ಪತ್ರಿಕಾಗೋಷ್ಠಿಯಲ್ಲಿ ತಿಸಿದರು.
ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್, ಕಾಪು ಎಸ್ಸೈ ಜಯ ಕೆ., ಪ್ರೊಬೆಷನರಿ ಎಸ್ಸೈಗಳಾದ ಸದಾಶಿವ್, ಉದಯ ರವಿ ಮತ್ತು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.