Advertisement

ನಾಲ್ವರು ಅಂತಾರಾಜ್ಯ ದರೋಡೆಕೋರರ ಬಂಧನ

12:37 PM Mar 23, 2022 | Team Udayavani |

ನಾಲ್ವರು ಅಂತಾರಾಜ್ಯ ದರೋಡೆಕೋರರ ಬಂಧನಸಿಂಧನೂರು: ವಾಹನಗಳನ್ನು ತಡೆದು ಬೆದರಿಕೆ ಹಾಕಿ ದರೋಡೆ ಮಾಡುತ್ತಿದ್ದ ನಾಲ್ವರು ಅಂತಾರಾಜ್ಯ ದರೋಡೆಕೋರರನ್ನು ಬಂಧಿಸುವಲ್ಲಿ ಸಿಂಧನೂರು ಪೊಲೀಸರ ತಂಡ ಯಶಸ್ವಿಯಾಗಿದೆ ಎಂದು ರಾಯಚೂರು ಜಿಲ್ಲಾ ಎಸ್ಪಿ ಬಿ. ನಿಖೀಲ್‌ ತಿಳಿಸಿದರು.

Advertisement

ನಗರದ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಕುರಿತು ಮಾಹಿತಿ ಒದಗಿಸಿದರು.

ಸಿಂಧನೂರು ನಗರದ ಜನತಾ ಕಾಲೋನಿ ನಿವಾಸಿ ಅಮರೇಶ್‌ ಮೋಡಿಕಾರ್‌, ದುರ್ಗಪ್ಪ ಆಲಿಯಾಸ್‌ ದುರುಗೇಶ, ಸಂಜೀವ, ರಾಮಸ್ವಾಮಿ ಎಂಬವರನ್ನು ಪೊಲೀಸ್‌ ತಂಡ ಸೋಮವಾರ ದಸ್ತಗಿರಿ ಮಾಡಿದೆ. ಅವರ ಬಳಿಯಿದ್ದ ಎರಡು ಲಕ್ಷ ರೂ. ನಗದು, 3 ಮೋಟಾರ್‌ ಸೈಕಲ್‌, ಒಂದು ಬುಲೆರೋ ಮ್ಯಾಕ್ಸ್‌ ಟ್ರಕ್‌ ಜಪ್ತಿ ಮಾಡಲಾಗಿದೆ ಎಂದರು.

ಏಳು ಜಿಲ್ಲೆ, ಅಂತಾರಾಜ್ಯ ನಂಟು

ಗ್ರಾಮೀಣ ಪೊಲೀಸ್‌ ಠಾಣೆ ವ್ಯಾಪ್ತಿಯ ದಢೇಸುಗೂರು ಕೆಇಬಿ ಸಮೀಪ ಈ ಹಿಂದೆ ಕುರಿ ವ್ಯಾಪಾರಸ್ಥರನ್ನು ತಡೆದು, ಅವರಿಗೆ ರಾಡ್‌ನಿಂದ ಹೊಡೆದು ಅವರ ಬಳಿಯಿದ್ದ 3.27 ಲಕ್ಷ ರೂ. ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳು ಈ ಪ್ರಕರಣ ಸೇರಿದಂತೆ ರಾಜ್ಯದ 7 ಜಿಲ್ಲೆಯಲ್ಲಿ 13 ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡಿದ್ದಾರೆ. ರಾಯಚೂರು-3, ಕೊಪ್ಪಳ-2, ವಿಜಯನಗರ-1, ಮಂಡ್ಯ-1, ತುಮಕೂರು-2, ಆಂಧ್ರಪ್ರದೇಶದ ರಾಜ್ಯದ ಕರ್ನೂಲ್‌ ಜಿಲ್ಲೆಯಲ್ಲಿ 3, ಅನಂತಪುರಂ ಜಿಲ್ಲೆಯಲ್ಲಿ 1 ಪ್ರಕರಣ ಸೇರಿ 13 ಕಡೆ ದರೋಡೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದರು.

Advertisement

50 ಸಾವಿರ ರೂ.ಬಹುಮಾನ

ದರೋಡೆ ಪ್ರಕರಣ ಭೇದಿಸಲು ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಒ ಉಮೇಶ್‌ ಕಾಂಬಳೆ, ಪಿಎಸೈ ಯರಿಯಪ್ಪ, ಚಂದ್ರಪ್ಪ, ಶಂಕರಗೌಡ ಬಳಗಾನೂರು, ಹನುಮಂತ, ಸಿಬ್ಬಂದಿಗಳಾದ ರಾಘವೇಂದ್ರ, ಶೆಟ್ಟೆಪ್ಪ, ಪರಶುರಾಮ, ದ್ಯಾಮಣ್ಣ, ಶರಣಪ್ಪ, ಅನಿಲಕುಮಾರ್‌, ಜಿ.ಕೆ. ಹೊನ್ನುಸಾ, ಸಿದ್ದಪ್ಪ, ಚಾಂದಪಾಷಾ, ಅಮರೇಗೌಡ, ಅಮರೇಶ, ಮಂಜುನಾಥ, ಅನಿಲ್‌ಕುಮಾರ್‌, ದೊಡ್ಡಬಸವ, ಸಂಗನಗೌಡ, ಅಶೋಕ, ದೇವರೆಡ್ಡಿ ಮತ್ತು ಡಿಪಿಒ ಸಿಆರ್‌ಆರ್‌ ಸೆಲ್‌ ನ ಅಜೀಂಪಾಷಾ ಅವರನ್ನು ಒಳಗೊಂಡ ತಂಡ ರಚಿಸಲಾಗಿತ್ತು. ಎರಡು ಬಾರಿ ದರೋಡೆಕೋರರು ತಪ್ಪಿಸಿಕೊಂಡಿದ್ದರು. ಆದರೆ, ಸತತ 6 ತಿಂಗಳು ನಿಗಾ ಇಟ್ಟು 3ನೇ ಪ್ರಯತ್ನದಲ್ಲಿ ಅವರನ್ನು ಸೆರೆ ಹಿಡಿಯಲಾಗಿದೆ. ದರೋಡೆಕೋರರನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದ ತಂಡಕ್ಕೆ 50 ಸಾವಿರ ರೂ. ನಗದು ಬಹುಮಾನ ಘೋಷಿಸಲಾಗಿದೆ ಎಂದರು.

ಈ ವೇಳೆ ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ಉಮೇಶ್‌ ಕಾಂಬಳೆ, ಪಿಎಸ್‌ಗಳಾದ ಯರಿಯಪ್ಪ, ಚಂದ್ರಪ್ಪ, ಹನುಮಂತ, ಬಸವರಾಜ, ಶಂಕರಗೌಡ ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next