Advertisement

5,400 ಕೋಟಿ ರೂ.ಗಳ ಅಘೋಷಿತ ಆದಾಯ ಪತ್ತೆ!

11:11 AM Apr 10, 2017 | Team Udayavani |

ನವದೆಹಲಿ: ಕಳೆದ ನವೆಂಬರ್‌ನಲ್ಲಿ ನೋಟು ಅಪನಗದೀಕರಣಗೊಳಿಸಿದ ಬಳಿಕ 2017ರ ಜನವರಿ 10ರವರೆಗೆ ಸುಮಾರು 5,400 ಕೋಟಿ ರೂ. ಅಘೋಷಿತ ಆದಾಯ ಪತ್ತೆಯಾಗಿದೆ. ಇದೇ ಅವಧಿಯಲ್ಲಿ ಕೆಲವರು ಹಳೇ ನೋಟುಗಳನ್ನು ಬಳಸಿ ಬಂಗಾರ ಖರೀದಿಗೆ ಮುಂದಾಗಿದ್ದೂ ಸೇರಿದಂತೆ ಹಲವು ಅಕ್ರಮಗಳು ಪತ್ತೆಯಾಗಿವೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Advertisement

ವಿವಿಧ ತನಿಖಾ  ಸಂಸ್ಥೆಗಳು ನಡೆಸಿದ ದಾಳಿ, ವಶಕ್ಕೆ ಪಡೆದ ಹಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಮಾಹಿತಿ ಒದಗಿಸಿದ ಸರ್ಕಾರ, “2016ರ ನವೆಂಬರ್‌ 9ರಂದು ನೋಟು ಅಮಾನ್ಯಗೊಂಡ ನಂತರ, ಈ ಅವಧಿಯಲ್ಲಾದ ನಗದು ಜಮಾ ಕುರಿತ ಇ-ಮೌಲ್ಯಮಾಪನಕ್ಕೆ ಸಂಬಂಧಿಸಿದ ಮಾಹಿತಿ ಕಲೆಹಾಕುವ ಉದ್ದೇಶದಿಂದ ಆದಾಯ ತೆರಿಗೆ ಇಲಾಖೆಯು ಜನವರಿ 31ರಂದು “ಆಪರೇಷನ್‌ ಕ್ಲೀನ್‌ ಮನಿ’ ನಡೆಸಿದೆ. 2016ರ ನವೆಂಬರ್‌ 9ರಿಂದ 2017ರ ಜನವರಿ 10ರ ನಡುವೆ ಆದಾಯ ತೆರಿಗೆ ಇಲಾಖೆ ಸುಮಾರು 1,100 ದಾಳಿಗಳನ್ನು ನಡೆಸಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಮೌಲ್ಯದ ನೋಟುಗಳನ್ನು ಬ್ಯಾಂಕ್‌ಗಳಿಗೆ ಜಮಾ ಮಾಡಿದವರಿಗೆ 5,100 ನೋಟಿಸ್‌ಗಳನ್ನು ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.

ಈ ದಾಳಿಗಳ ಪರಿಣಾಮವಾಗಿ, 610 ಕೋಟಿ ರೂ.ಗಿಂತಲೂ ಅಧಿಕ ನಗದು (ಇದರಲ್ಲಿ 110 ಕೋಟಿ ರೂ. ಮೌಲ್ಯದ ಹೊಸ ನೋಟುಗಳಿವೆ) ಮತ್ತು ಬೆಲೆ ಬಾಳುವ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಆದಾಯ ತೆರಿಗೆ ಇಲಾಖೆ ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ನಡೆಸಿದ ದಾಳಿ ವೇಳೆ ಒಟ್ಟಾರೆ 5,400 ಕೋಟಿ. ಮೌಲ್ಯದ ಅಘೋಷಿತ ಆದಾಯ ಪತ್ತೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next