ಬೆಂಗಳೂರು: ಲಾಕ್‌ಡೌನ್ ನಡುವೆ ನಗರದ ಹನುಮಂತನಗರದ ಕತ್ರಿಗುಪ್ಪೆ ಮುಖ್ಯರಸ್ತೆಯ ಬದಿಯಲ್ಲಿ ಅನುಮಾನಾಸ್ಪದ ವಸ್ತುವೊಂದು ಗುರುವಾರ ಬೆಳಗ್ಗೆ ಪತ್ತೆಯಾಗಿದ್ದು, ಕೆಲಕಾಲ ಅಂತಕ ಸೃಷ್ಟಿಯಾಗಿತ್ತು. ಹನುಮಂತನಗರ ಠಾಣಾ ಸಮೀಪ ಕತ್ರಿಗುಪ್ಪೆ ಮುಖ್ಯರಸ್ತೆ ಕಾರು ಗ್ಯಾರೇಜ್ ಮುಂಭಾಗದಲ್ಲಿ ಸಾರ್ವಜನಿಕರೊಬ್ಬರು, ಬಾಲ್ ಮಾದರಿಯ ವಸ್ತು ಮತ್ತು ವಯರ್ ಕಂಡು ಪೊಲೀಸ್ ಸಹಾಯವಾಣಿಗೆ ಕರೆ ಮಾಡಿದ್ದಾರೆ. ಈ ಮಾಹಿತಿ ಮೇರೆಗೆ ಹನುಮಂತನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ ಪರಿಶೀಲನೆ ನಡೆಸಿದರು.
ಪಟಾಕಿ ಮಾದರಿಯ ವಸ್ತು: ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ರಸ್ತೆಯ ನಾಲ್ಕು ದಿಕ್ಕುಗಳಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ಸಾರ್ವಜನಿಕ ಸಂಚಾರ ನಿರ್ಬಂಧಿಸಲಾಯಿತು. ಅನಂತರ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ತಾಂತ್ರಿಕ ತಂಡವನ್ನು ಕರೆಸಿಕೊಂಡು ಪರಿಶೀಲಿಸಿದಾಗ, ಪಟಾಕಿ ಮಾದರಿಯ ವಸ್ತು ಎನ್ನಲಾಗಿದ್ದು, ಯಾರು ಆಂತಕ ಪಡುವ ಅಗತ್ಯ ವಿಲ್ಲ ಎಂದು ದೃಢಪಡಿಸಿದರು. ಆದರೂ ಅಕ್ಕ-ಪಕ್ಕದ ಪ್ರದೇಶಗಳನ್ನು ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳ ಜತೆ ತಪಾಸಣೆ ನಡೆಸಲಾಯಿತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪೋಟ್ಯಾಷಿಯಂ ನೈಟ್ರೇಟ್: ಅನಂತರ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಅದನ್ನು ಮತ್ತೂಮ್ಮೆ ಪರೀಕ್ಷಿಸಿದಾಗ ಅದರಲ್ಲಿ ಪಟಾಕಿಗೆ ಬಳಸುವ ಪೋಟ್ಯಾಷಿಯಂ ನೈಟ್ರೇಟ್ ಇದೆ ಎಂಬುದು ಗೊತ್ತಾಗಿದೆ. ಘಟನಾ ಸ್ಥಳದಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಯಾವುದೇ ಸಾಕ್ಷ್ಯಗಳು ಸಿಕ್ಕಿಲ್ಲ. ಪಟಾಕಿ ಮಾದರಿಯ ವಸ್ತುವನ್ನು ಸುರಕ್ಷಿತವಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದರು.
ಹಿರಿಯ ಅಧಿಕಾರಿಗಳು ಭೇಟಿ: ಘಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ದಕ್ಷಿಣ ವಿಭಾಗದ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮಾತನಾಡಿ, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಈ ಕುರಿತು ಪಶ್ಚಿಮ ವಿಭಾಗದ ಹೆಚ್ಚುವರಿ ಆಯುಕ್ತರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಎಫ್ಎಸ್‌ಎಲ್ ವರದಿ ಬಳಿಕ ಸತ್ಯಾಂಶ ಹೊರಬೀಳಲಿದೆ ಎಂದರು.
ಮುಂದೆ ಬತ್ತಿ ಇತ್ತು
ಬಾಲ್ ಮಾದರಿಯಲ್ಲಿದ್ದ ವಸ್ತುವಿನ ಮೇಲ್ಭಾಗವನ್ನು ಬಟ್ಟೆಯಲ್ಲಿ ಸುತ್ತಲಾಗಿತ್ತು. ಅಲ್ಲದೆ, ಒಂದು ಭಾಗದಲ್ಲಿ ಪಟಾಕಿಗೆ ಇರು ವಂತಂಹ ಬತ್ತಿ ಇತ್ತು. ಜತೆಗೆ ಅಲ್ಲಿಯೇ ತುಂಡಾಗಿದ್ದ ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿರುವ ವೈಯರ್ ಇತ್ತು. ಹೀಗಾಗಿ ಅದನ್ನು ಕಂಡ ಆತಂಕಗೊಂಡಿದ್ದೆವು ಎಂದು ಘಟನಾ ಸ್ಥಳದಲ್ಲಿದ್ದ ಪ್ರಶಾಂತ್ ಎಂಬವರು ಮಾಹಿತಿ ನೀಡಿದರು.