ಎಚ್.ಡಿ.ಕೋಟೆ: ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದ ಉದ್ಯಾನವನದಲ್ಲಿ ಕಳೆದ ಸೋಮವಾರ ನವಜಾತ ಹೆಣ್ಣು ಶಿಶುವನ್ನು ಎಸೆದು ಹೋಗಿದ್ದ ಮಹತಾಯಿಯನ್ನು ಮಂಗಳವಾರ ಪತ್ತೆ ಹಚ್ಚುವಲ್ಲಿ ಪಟ್ಟಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರ ಆಗ ತಾನೇ ಜನನವಾದ ಮಗುವನ್ನು ತಾಯಿಯೊಬ್ಬಳು ಬಿಸಾಡಿ ಹೋಗಿದ್ದರು. ನಂತರ ಸಾರ್ವಜನಿಕ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಮಗುವಿಗೆ ಚಿಕಿತ್ಸೆ ನೀಡಿ ಹಾರೈಕೆ ಮಾಡುತ್ತಿದ್ದರು.
ತಾಯಿ ಖಾಸಗಿ ಆಸ್ಪತ್ರೆಯಲ್ಲಿ ಪತ್ತೆ: ಶಿಶುವನ್ನು ನೋಡಿ ಮರುಕ ವ್ಯಕ್ತಪಡಿಸಿದ್ದ ಪೊಲೀಸರು, ತಾಯಿಯನ್ನು ಹುಡುಕಲು ಕಾರ್ಯಾಚರಣೆ ನಡೆಸಿದರು. ಪಟ್ಟಣದ ಎಲ್ಲಾ ಆಸ್ಪತ್ರೆಗಳ ವಿವರ ಪಡೆದು ಶೋಧಿಸಿದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ.
108ರ ಬೆನ್ನತ್ತಿದಾಗ ನಿಜ ಬಯಲಾಯ್ತು!: ಕೊನೆಗೆ ನಿತ್ಯ ರೋಗಿಗಳಿಂದ ಕೆರೆ ಬಂದೊಡನೆ ಅವರ ಮನೆ ಮುಂದೆ ಹಾಜರಾಗುವ 108 ವಾಹನದ ಮೇಲೆ ಕಣ್ಣಿಟ್ಟ ಪೊಲೀಸರು, ವಾಹನ ಸಿಬ್ಬಂದಿಯ ವಿಚಾರಣೆ ನಡೆಸಿದರು. ಯಾರನ್ನು ಯಾವ ಭಾಗದಿಂದ ಯಾವ ಚಿಕಿತ್ಸೆಗಾಗಿ ಕರೆತಂದಿದ್ದೀರಿ ಎಂದು ತಿಳಿಸಿದಾಗಲೇ ಆ ತಾಯಿ ವಿಚಾರ ತಿಳಿಯಿತು.
ತಕ್ಷಣ ಪಟ್ಟಣ ಸಾರ್ವಜನಿಕ ಆಸ್ಪತ್ರೆ ಹೊರತು ಪಡಿಸಿ ಖಾಸಗಿ ಆಸ್ಪತ್ರೆಗಳನ್ನು ಶೋಧಿಸಿದಾಗ ತಾಯಿ ಪಟ್ಟಣದ ಹೆಸರಾಂತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವುದು ತಿಳಿದು ಬಂದಿದೆ. ವಿಚಾರಣೆ ಮಾಡಿದಾಗ ಅವಿವಾಹಿತೆ ಎಂದು ತಿಳಿದು ಬಂದಿದ್ದು ಭಯದಿಂದ ಕೃತ್ಯವೆಸಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆಂದು ತಿಳಿದು ಬಂದಿದೆ. ಕೇಸು ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆ ಸ್ಥಿತಿಗೆ ಕಾರಣನಾದ ವ್ಯಕ್ತಿಗಾಗಿ ಬಲೆ ಬೀಸಿದ್ದಾರೆ.