ಮಣಿಪಾಲ: ಆತ ದೂರದ ದುಬೈನಲ್ಲಿ ಸೂಪರ್ ಮಾರ್ಕೆಟ್, ಉದ್ಯಮ ಎಂದು ಬ್ಯುಸಿಯಾಗಿದ್ದ ವ್ಯಕ್ತಿ. ಇತ್ತ ಹುಟ್ಟೂರು ಉಡುಪಿಯಲ್ಲೂ ಹೋಟೆಲ್ ಲಾಡ್ಜಿಂಗ್ ಮಾಡಿ ಉದ್ಯಮ ನಡೆಸುತ್ತಿದ್ದರು. ಉಡುಪಿ- ದುಬೈ ಎಂದು ಓಡಾಡಿಕೊಂಡಿದ್ದ ಈ ಉದ್ಯಮಿ ಒಂದು ದಿನ ನಾಪತ್ತೆಯಾಗುತ್ತಾರೆ. ಉದ್ಯಮಿಯ ತಾಯಿ ನೀಡಿದ ದೂರಿನಂತೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಸೆರೆ ಹಿಡಿದಿದ್ದು ಆ ಉದ್ಯಮಿಯ ಪತ್ನಿ ಮತ್ತು ಪುತ್ರ ಮತ್ತು ಪತ್ನಿಯ ಪ್ರಿಯಕರನನ್ನು!
ಹೌದು, ಇದು ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಕಥೆ. ಐದು ವರ್ಷಗಳ ಹಿಂದೆ ನಡೆದ ವಿಚಿತ್ರ ಕೊಲೆ ಪ್ರಕರಣದ ಅಂತಿಮ ತೀರ್ಪು ಇಂದು ಪ್ರಕಟವಾಗಿದೆ. ಪ್ರಮುಖ ಆರೋಪಿಗಳಾದ ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ, ಪುತ್ರ ನವನೀತ್ ಶೆಟ್ಟಿ ಮತ್ತು ರಾಜೇಶ್ವರಿ ಪ್ರಿಯಕರ ಕಾರ್ಕಳ ತಾಲೂಕಿನ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್ ದೋಷಿಗಳೆಂದು ಕೋರ್ಟ್ ತೀರ್ಪು ನೀಡಿದೆ. ಮೂವರಿಗೂ ಜೀವಾವಧಿ ಶಿಕ್ಷೆ ನೀಡಲಾಗಿದೆ.
ಸುಮಾರು ಐದು ವರ್ಷಗಳ ಹಿಂದೆ ನಡೆದ ಘಟನೆಯಿದು. 2016 ಜುಲೈ 28ರಂದು ಭಾಸ್ಕರ ಶೆಟ್ಟಿ ಕೊಲೆಯಾಗಿತ್ತು. ರಾಷ್ಟ್ರೀಯ ಮಾಧ್ಯಮಗಳಲ್ಲೂ ಸುದ್ದಿ ಮಾಡಿತ್ತು ಈ ಕೊಲೆ ಪ್ರಕರಣ. ಕಾರಣ ಇದು ಕೇವಲ ಕೊಲೆಯಲ್ಲ, ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಕೃತ್ಯ ಮಾಡಿದ್ದರು ಈ ಮೂವರು.
ಯಾರು ಈ ಭಾಸ್ಕರ್ ಶೆಟ್ಟಿ
ಭಾಸ್ಕರ್ ಶೆಟ್ಟಿ ಅವರು ಉಡುಪಿ, ದುಬೈನಲ್ಲಿ ಉದ್ಯಮಗಳನ್ನು ಹೊಂದಿದ್ದರು. ದುಬೈನಲ್ಲಿ ಸೂಪರ್ ಮಾರ್ಕೆಟ್, ಉಡುಪಿಯಲ್ಲಿ ಹೋಟೆಲ್ ಹೊಂದಿದ್ದ ಬಹುಕೋಟಿ ಉದ್ಯಮಿ. ಉಡುಪಿ ನಗರದ ಇಂದ್ರಾಳಿಯಲ್ಲಿ ವಾಸವಿದ್ದರು. ಉಡುಪಿ- ದುಬೈ ಎಂದು ಓಡಾಡಿಕೊಂಡಿದ್ದ ಅವರು ಸದಾ ಬ್ಯುಸಿ ಇರುತ್ತಿದ್ದರು.
ಪತ್ನಿ-ಪುತ್ರನೇ ವಿಲನ್
ಭಾಸ್ಕರ್ ಶೆಟ್ಟಿ ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ ಈ ಪ್ರಕರಣದ ಪ್ರಮುಖರು. ರಾಜೇಶ್ವರಿಗೆ ಮದುವೆಯಾದ ಬಳಿಕ ಭಾಸ್ಕರ್ ಶೆಟ್ಟಿ ಅವರು ರಾಜೇಶ್ವರಿ ಅವರ ಅಕ್ಕನ ಗಂಡನ ಜತೆಗೂಡಿ ವ್ಯವಹಾರ ಮಾಡುತ್ತಿದ್ದರು. ಎರಡು-ಮೂರು ವರ್ಷಗಳ ಹಿಂದಿನವರೆಗೆ ಒಟ್ಟಿಗೆ ವ್ಯವಹಾರ ನಡೆಸುತ್ತಿದ್ದ ಅಕ್ಕ, ತಂಗಿಯರ ಗಂಡಂದಿರ ನಡುವೆ ಪಾಲಾಯಿತು. ಇದಾದ ಕೆಲವೇ ಸಮಯದಲ್ಲಿ ರಾಜೇಶ್ವರಿಗೆ ನಿರಂಜನ್ ಭಟ್ಟನ ಸಂಪರ್ಕವಾಗಿತ್ತು.
ಇದನ್ನೂ ಓದಿ:ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: 3 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟ
ಜ್ಯೋತಿಷಿ ಎಂದು ಪರಿಚಯವಾಗಿ ನಂತರ ರಾಜೇಶ್ವರಿ ಮತ್ತು ನಿರಂಜನ್ ಜೊತೆ ಸ್ನೇಹವಾಗಿತ್ತು. ಇದು ಅತೀ ಎನ್ನುವಂತೆ ಹೆಚ್ಚಿತ್ತು. ಇದು ಭಾಸ್ಕರ್ ಶೆಟ್ಟಿಯವರಗೂ ತಿಳಿದಿತ್ತು. ನಿರಂಜನ್‌ಭಟ್‌ನೊಂದಿಗೆ ರಾಜೇಶ್ವರಿ ಅನ್ಯೋನ್ಯತೆ ಹೊಂದಿರುವುದನ್ನು ಸ್ವತಃ ಭಾಸ್ಕರ್ ಶೆಟ್ಟಿಯವರು ಕಂಡು ನೊಂದುಕೊಂಡಿದ್ದರು. ಆತನಿಗೆ ಹಣವನ್ನೂ ರಾಜೇಶ್ವರಿ ನೀಡುತ್ತಿದ್ದ ಮಾಹಿತಿ ಅವರಿಗಿತ್ತು. ಪುತ್ರ ಜಿಮ್ ಪ್ರಾರಂಭಿಸುವಲ್ಲಿಯೂ ನಿರಂಜನ್ ಭಾಗೀದಾರಿಕೆ ಹೆಚ್ಚಾಗಿತ್ತು. ಇನ್ನು ಅವರು ನನ್ನನ್ನು ಕ್ಯಾರ್ ಮಾಡುವುದಿಲ್ಲ ಎಂದು ತಿಳಿಯುತ್ತಲೇ ಮಡದಿಯ ಹೆಸರಿಗೆ ಮಾಡಿಕೊಟ್ಟಿದ್ದ ಪವರ್ ಆಫ್ ಅಟಾರ್ನಿಯನ್ನು ಹಿಂದಕ್ಕೆ ಪಡೆದು ಎಲ್ಲ ಆಸ್ತಿಯನ್ನು ಬದಲಾಯಿಸಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದರು. ಪತ್ನಿಗೆ ವಿಚ್ಚೇದನ ನೀಡುವ ಬಗ್ಗೆಯೂ ಆಪ್ತರಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ರಾಜೇಶ್ವರಿಗೆ ಎಲ್ಲ ಮಾಹಿತಿ ತಿಳಿದು ಕೆಂಡಾಮಂಡಲಗೊಂಡಿದ್ದಳು.
ಮುಂದೆ ನಿನಗೂ ಆಸ್ತಿ ಬಾರದು ಎಂದು ಹೇಳಿ ಮಗನನ್ನೂ ತನ್ನ ದಾರಿಯಲ್ಲೇ ಬರುವಂತೆ ಮಾಡಿಕೊಂಡಿದ್ದಳು. ದುರ್ಗಾ ಇಂಟರ್‌ನ್ಯಾಶನಲ್ ಕಟ್ಟಡದಲ್ಲಿ ಭಾಸ್ಕರ್ ಶೆಟ್ಟಿಯವರ ಕಚೇರಿ ಇದೆ. ಅಲ್ಲಿಗೆ ತಾಯಿ, ಮಗ ಬಂದು ಗಲಾಟೆ ಮಾಡಿ ಹಲ್ಲೆಯನ್ನೂ ಮಾಡಿದ್ದರು. ಬಳಿಕ ಭಾಸ್ಕರ್ ಶೆಟ್ಟಿ ಅವರಿಗೆ ಅಪಾಯದ ಅರಿವಾಗಿ ರಾತ್ರಿ ಇಂದ್ರಾಳಿಯ ಮನೆಗೆ ಹೋಗುವುದನ್ನೇ ನಿಲ್ಲಿಸಿ ಹೊಟೇಲ್‌ನಲ್ಲಿದ್ದ ಕಚೇರಿ ರೂಮಿನಲ್ಲಿಯೇ ಮಲಗುತ್ತಿದ್ದರು. ಆದರೆ ಅದಾಗಲೇ ಸಿದ್ದವಾಗಿತ್ತು ಒಂದು ಮಾಸ್ಟರ್ ಪ್ಲಾನ್!
ಹೋಮಕುಂಡದಲ್ಲ ಸುಟ್ಟರು!
ಅತ್ತ ಭಾಸ್ಕರ್ ಶೆಟ್ಟಿಯವರು ಪತ್ನಿಯ ವಿರುದ್ದ ಅಸಮಾಧಾನಗೊಂಡಿದ್ದರೆ, ಇತ್ತ ಪತ್ನಿ ರಾಜೇಶ್ವರಿಯು ಪುತ್ರ ಮತ್ತು ಪ್ರಿಯಕರನ ಜೊತೆ ಸೇರಿ ಪ್ಲಾನ್ ಮಾಡಿಕೊಂಡಿದ್ದರು. ಅದುವೇ ಗಂಡನ ಕೊಲೆ ಪ್ಲಾನ್. ಗಂಡನನ್ನು ಹೇಗೆ ಕೊಲೆ ಮಾಡಬೇಕು, ಕೊಲೆಯ ನಂತರ ಏನು ಮಾಡಬೇಕು ಎಂಬೆಲ್ಲಾ ಯೋಜನೆ ಸಿದ್ದವಾಗಿತ್ತು.
ಅದರಂತೆ 2016 ಜುಲೈ 28ರಂದು ಇಂದ್ರಾಳಿಯ ಮನೆಗೆ ಬಂದಿದ್ದ ಭಾಸ್ಕರ್ ಶೆಟ್ಟಿಯವರು ಸ್ನಾನ ಮಾಡಲೆಂದು ಹೋದಾಗ ಈ ಮೂವರು ಮೆಣಸಿನ ಹುಡಿ ಎರಚಿ, ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದರು. ನಂತರ ಮೃತದೇಹವನ್ನು ಕಾರ್ಕಳ ತಾಲೂಕಿನ ನಂದಳಿಕೆಗೆ ತಂದಿದ್ದರು. ಅಲ್ಲಿ ನಿರಂಜನ್ ಭಟ್ ನ ಮನೆಯಲ್ಲಿ ಸಿದ್ದಮಾಡಲಾಗಿದ್ದ ಹೋಮ ಕುಂಡದಲ್ಲಿ ಭಾಸ್ಕರ್ ಶೆಟ್ಟಿಯವರ ಮೃತದೇಹವನ್ನು ಸುಟ್ಟು ಹಾಕಿದ್ದರು ಈ ಮೂವರು. ಬಳಿಕ ಮೂಳೆ, ಬೂದಿಯನ್ನು ಬಿಸಾಕಿ ಸಾಕ್ಷ್ಯ ನಾಶ ಮಾಡಿದ್ದರು.
ಕೆಲವು ದಿನಗಳ ಕಾಲ ಮಗ ಕಾಣದ ಕಾರಣ ಗುಲಾಬಿ ಅವರು ಈ ಬಗ್ಗೆ ಜುಲೈ 31 ರಂದು ಬಗ್ಗೆ ದೂರು ನೀಡಿದ್ದರು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪತ್ನಿ ರಾಜೇಶ್ವರಿ ಮತ್ತು ಪುತ್ರ ನವನೀತ್ನನ್ನು ಮೊದಲು ಬಂಧಿಸಿದ್ದರು. ಈ ವೇಳೆ ಪ್ರಿಯಕರ ನಿರಂಜನ್ ನಾಪತ್ತೆಯಾಗಿದ್ದ. ನಿರಂಜನ್ ನ ತಂದೆ ಮತ್ತು ಕಾರು ಚಾಲಕ ರಾಘುನನ್ನು ಬಂಧಿಸಿದ್ದರು. ಬಳಿಕ ನಿರಂಜನ್ ಪೊಲೀಸರ ಬಂಧಿಯಾಗಿದ್ದ. ಈ ವೇಳೆ ತನ್ನ ಕೈಯಲ್ಲಿದ್ದ ಉಂಗುರವನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿ ಹೈಡ್ರಾಮವನ್ನು ಮಾಡಿದ್ದ.
ಇದನ್ನೂ ಓದಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ; ಅಂತಿಮ ತೀರ್ಪು ಪ್ರಕಟಿಸಿದ ಉಡುಪಿ ಜಿಲ್ಲಾ ನ್ಯಾಯಾಲಯ
ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಮತ್ತು ಸಾಕ್ಷಿ ನಾಶದ ಆರೋಪದಲ್ಲಿ ನಿರಂಜನ್ ಭಟ್ ತಂದೆ ಶ್ರೀನಿವಾಸ ಭಟ್ ಹಾಗೂ ಕಾರು ಚಾಲಕ ರಾಘವೇಂದ್ರನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಶ್ರೀನಿವಾಸ್ ಭಟ್ ಮತ್ತು ರಾಘವೇಂದ್ರನಿಗೆ ಆರಂಭದಲ್ಲಿ ಜಾಮೀನು ನೀಡಲಾಗಿತ್ತು. ವರ್ಷಗಳ ಹಿಂದೆ ಅನಾರೋಗ್ಯದಿಂದ ಶ್ರೀನಿವಾಸ ಭಟ್ ನಿಧನರಾಗಿದ್ದರು. ಈ ಮಧ್ಯೆ ಆರೋಪಿಗಳು ಜಾಮೀನಿಗಾಗಿ ಸತತ ಪ್ರಯತ್ನ ನಡೆಸಿದ್ದರು. ರಾಜೇಶ್ವರಿಗೆ ಜಾಮೀನು ಸಿಕ್ಕಿತ್ತು. ಆದರೆ ನಿರಂಜನ್ ಭಟ್ ಗೆ ಸುಪ್ರೀಂ ಕೋರ್ಟ್ ಕೂಡಾ ಜಾಮೀನು ನೀಡಲು ನಿರಾಕರಿಸಿತ್ತು.
ಸದ್ಯ ಉಡುಪಿ ಸತ್ರ ನ್ಯಾಯಾಲಯವು ರಾಜೇಶ್ವರಿ ಶೆಟ್ಟಿ, ನವನೀತ್ ಶೆಟ್ಟಿ, ನಿರಂಜನ್ ಭಟ್ ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಚಾಲಕ ರಾಘವೇಂದ್ರನನ್ನು ಖುಲಾಸೆ ಮಾಡಲಾಗಿದೆ.