Advertisement
ನಾ.ಮೊಗಸಾಲೆಯವರು ಕಾಸರಗೋಡು ತಾಲೂಕಿನ ಕೋಳ್ಯೂರು ಗ್ರಾಮದ ಮೊಗಸಾಲೆ ಎಂಬಲ್ಲಿ ದಿ| ವಿಠಲ(ಬಟ್ಟಪ್ಪ) ಭಟ್ಟ – ಸರಸ್ವತಿ ದಂಪತಿಯ ಪುತ್ರನಾಗಿ 1944 ಆಗಸ್ಟ್ 27ರಂದು ಜನಿಸಿದರು. ಕೇಶವ ಭಟ್ಟ(ಕೃಷಿ), ಡಾ| ಮಹಾಬಲ ಭಟ್ಟ, ಡಾ| ಗಣಪತಿ ಭಟ್ಟ ಅವರು ಸಹೋದರರು. ಪಾರ್ವತಿ, ಲಕ್ಷ್ಮೀ, ಶಾರದೆ ಸಹೋದರಿಯರು. ಮೊಗಸಾಲೆಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಕೋಳ್ಯೂರು ಶಂಕರನಾರಾಯಣ ಶಾಲೆಯಲ್ಲಿ ಮತ್ತು ಮಾಧ್ಯಮಕದಿಂದ ಹೈಸ್ಕೂಲ್ ತನಕದ ಅಧ್ಯಯನವನ್ನು ಕನ್ಯಾನದ ಸರಕಾರಿ ಪ್ರೌಢಶಾಲೆಯಲ್ಲಿ ಪಡೆದರು. ಅನಂತರ ಉಡುಪಿಯ ಆಯುರ್ವೇದ ಕಾಲೇಜಿನಲ್ಲಿ ಡಿ.ಎಸ್.ಎ.ಸಿ. ಆಯುರ್ವೇದ ಡಿಪ್ಲೋಮಾ ಪದವಿ ಪಡೆದು 1965ರಲ್ಲಿ ಕಾರ್ಕಳ ತಾಲೂಕಿನ ಅತೀ ಹಿಂದುಳಿದ ಪ್ರದೇಶವಾದ ಕಾಂತಾವರದ ಗ್ರಾಮೀಣ ಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಯಾಗಿ ನೇಮಕಗೊಂಡು ಅಲ್ಲಿಯೇ 2002ರ ವರೆಗೆ ಸೇವೆ ಸಲ್ಲಿಸಿ ನಿವೃತ್ತರಾದರು.
Related Articles
1. ಕವನ ಸಂಗ್ರಹಗಳು – ವರ್ತಮಾನದ ಮುಖಗಳು, ಪಲ್ಲವಿ, ಮೊಗಸಾಲೆಯ ನೆನಪುಗಳು, ಪ್ರಭವ, ಸ್ವಂತಕ್ಕೆ ಸ್ವಂತಾವತಾರ, ನೆಲದ ನೆರಳು, ಇದಲ್ಲ ಇದಲ್ಲ, ಅರುವತ್ತರ ತೇರು, ಇಹಪರದ ಕೊಳ, ಕಾಮನೆಯ ಬೆಡಗು, ದೇವರು ಮತ್ತೆ ಮತ್ತೆ, ಪೂರ್ವೋತ್ತರ, ಕರಣ ಕಾರಣ.
Advertisement
2. ಕಾದಂಬರಿಗಳು – ಮಣ್ಣಿನ ಮಕ್ಕಳು, ಅನಂತ, ಕನಸಿನ ಬಳ್ಳಿ, ನನ್ನದಲ್ಲದ್ದು, ಪಲ್ಲಟ, ಹದ್ದು, ಪ್ರಕೃತಿ, ನೆಲಮುಗಿಲುಗಳ ಮಧ್ಯೆ, ದಿಗಂತ, ದೃಷ್ಟಿ, ಉಪ್ಪು, ತೊಟ್ಟಿ, ಪಂಥ, ಅರ್ಥ, ಉಲ್ಲಂಘನೆ, ಮುಖಾಂತರ, ಧಾತು.
3. ಸಣ್ಣ ಕಥೆಗಳು – ಆಶಾಂಕುರ, ಹಸಿರು ಬಿಸಿಲು, ಸುಂದರಿಯ ಎರಡನೆ ಅವತಾರ, ಸೀತಾಪುರದ ಕಥೆಗಳು, ಸೀತಾಪುರದಲ್ಲಿ ಕತೆಗಳೇ ಇಲ್ಲ.
4. ಲೇಖನ ಸಂಕಲನಗಳು – ಮೊಗಸಾಲೆಯವರ ಒಲವು ನಿಲುವು, ಬಿಸಿಲು ಕೋಲು, ರೀತಿನೀತಿಗಳ ನಡುವಿನ ಪ್ರೀತಿ, ಅರಿವಿನೊಡನೆ ಅನುಸಂಧಾನ, ಶಬ್ದ ನಿಶಬ್ದಗಳ ನಡುವಿನ ಮಾತು.
5. ಸಂಪಾದನಾ ಕೃತಿಗಳು – ವಾಣಿ, ಪ್ರಸ್ತುತ, ಮುದ್ದಣ, ಕಾಂತಶ್ರೀ, ಮನೋರಮ, ರತ್ನಾಕರ, ಸ್ವರ್ಣನಂದಾದೀಪ, ದರ್ಪಣ, ಕೋಳ್ಯೂರು, ನುಡಿಹಾರ (4 ಸಂಪುಟಗಳು).
6. ವೈದ್ಯಕೀಯ ಕೃತಿಗಳು – ನಿಮ್ಮ ಕೈಯಲ್ಲೇ ನಿಮ್ಮ ಆರೋಗ್ಯ, ಆರೋಗ್ಯ ಅನಾರೋಗ್ಯದ ನಡುವೆ, ಆರೋಗ್ಯ ಅನಾರೋಗ್ಯಕ್ಕೆ ಆಯ್ಕೆ ಇದೆಯೇ, ದಾಂಪತ್ಯ ಯೋಗ, ಹೆಣ್ಣು ಹೆಣ್ಣನ್ನು ಅರಿಯುವ ಬಗ್ಗೆ, ಪ್ರತಿಕ್ಷಣವೂ ನಿಮ್ಮದೇ.
7. ಗೀತನಾಟಕ – ಪುರೂರವ – ಅಂಕಣ ಬರಹ – ಕನ್ನಡ ಜನಾಂತರಂಗ, ಕರಾವಳಿ ಅಲೆ ಪತ್ರಿಕೆಗಳಲ್ಲಿ ಆರೋಗ್ಯ ಸಲಹೆ, ಕನ್ನಡ ಪತ್ರಿಕೆಯಲ್ಲಿ ‘ಸಂಜೆ ಬಿಸಿಲಿನ ಅನುಭವ’.
– “ನನ್ನದ್ದಲ್ಲದ್ದು’ ಮತ್ತು ‘ಉಲ್ಲಂಘನೆ’ ಕಾದಂಬರಿಗಳಿಗೆ ಹಾಗೂ “ಇದಲ್ಲ ಇದಲ್ಲ’ ಕವನ ಸಂಕಲನಕ್ಕೆ ಸಾಹಿತ್ಯ ಅಕಾಡೆಮಿಯ ಬಹುಮಾನದ ಗೌರವ ಲಭಿಸಿವೆ. ಅವರ “ತೊಟ್ಟಿ’ ಕಾದಂಬರಿ ತೆಲುಗಿಗೆ ಅನುವಾದವಾಗಿದ್ದು ಈಗ ಸಿನಿಮಾರೂಪದಲ್ಲಿ ಹೊರಬರುತ್ತಿದೆ. ದೃಷ್ಟಿ, ಉಲ್ಲಂಘನೆ ತೆಲುಗಿಗೆ, ಮರಾಠಿಗೆ, ಇಂಗ್ಲೀಷಿಗೆ ಹಾಗೂ “ನನ್ನದ್ದಲ್ಲದ್ದು’ ಮಲಯಾಳಕ್ಕೆ ಅನುವಾದಗೊಂಡಿವೆ. ಅಲ್ಲದೆ “ಮುಖಾಂತರ’ ಹಾಗೂ ‘ಸೀತಾಪುರದ ಕತೆಗಳು’ ಇಂಗ್ಲೀಷಿನಲ್ಲೂ ಅನುವಾದಗೊಂಡಿವೆ.
“ಬಯಲು ಬೆಟ್ಟ’ ಮೊಗಸಾಲೆಯವರ ಆತ್ಮವೃತ್ತಂತ ಕೃತಿಯಾಗಿದೆ. “‘ಮೊಗಸಾಲೆ-50′, “ಆಯಸ್ಕಾಂತಾವರ’ ಅವರಿಗೆ ಅರ್ಪಿಸಲ್ಪಟ್ಟ ಅಭಿನಂದನ ಗ್ರಂಥಗಳಾಗಿವೆ. ಬೆಳಗೋಡು ರಮೇಶ ಭಟ್ಟರು “ಮೊಗಸಾಲೆಯ ಮುಖಾಂತರ’ ಎಂಬ ಜೀವನ ಚರಿತ್ರೆಯನ್ನು ಬರೆದಿರುತ್ತಾರೆ. ಡಾ| ದೀಪಾ ಫಡೆR ಅವರು ಮೊಗಸಾಲೆಯವರ ಬದುಕು ಬರಹಗಳ ಕುರಿತು “ಲೋಕಸಂವಾದಿ’ ಎನ್ನುವ ಹೊತ್ತಗೆ ಹೊರತಂದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ಮೊಗಸಾಲೆಯವರ ಬದುಕು ಬರಹದ ಬಗ್ಗೆ ಪ್ರಬಂಧ ಮಂಡಿಸಿ ಮೂಡುಕೋಣಾಜೆ ಡಾ| ಮಾಧವ ರಾವ್ ಅವರು ಪಿ.ಎಚ್.ಡಿ. ಯನ್ನು ಪಡೆದಿರುತ್ತಾರೆ. “ಉಲ್ಲಂಘನೆ’ ಕಾದಂಬರಿಯ ಕುರಿತು ಪ್ರಬಂಧ ಮಂಡಿಸಿ ಹಂಪಿ ವಿಶ್ವವಿದ್ಯಾಲಯದಿಂದ ಹರಿಣಾಕ್ಷಿ ಅವರು ಎಂ.ಫಿಲ್. ನ್ನು ಪಡೆದಿರುತ್ತಾರೆ. ಮೈಸೂರು, ಮಂಗಳೂರು ಮತ್ತು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದಲ್ಲಿ ಅವರ ಕೃತಿಗಳ ಬಗ್ಗೆ ಪಿ.ಎಚ್.ಡಿ. ಅಧ್ಯಯನಗಳು ನಡೆಯುತ್ತಿವೆ.
ಪ್ರಶಸ್ತಿ ಪುರಸ್ಕಾರಗಳುಪ್ರತಿಷ್ಠಿತವಾಗಿರುವ ಡಾ| ಶಿವರಾಮ ಕಾರಂತ, ಬಿ.ಎಚ್. ಶ್ರೀಧರ, ಕಡೆಂಗೋಡ್ಲು ಶಂಕರ ಭಟ್ಟ, ಉಗ್ರಾಣ ಮಂಗೇಶರಾವ್, ದಿನಕರ ದೇಸಾಯಿ, ವಿಶುಕುಮಾರ್, ನಿರಂಜನ, ಡಿ.ಎಸ್. ಕರ್ಕಿ, ಡಾ| ಪಿ.ಎಸ್. ಶಂಕರ್, ಕುವೆಂಪು, ಸೂರ್ಯನಾರಾಯಣ ಚಡಗ, ಚದುರಂಗ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಪೆರ್ಲ ಕೃಷ್ಣ ಭಟ್, ಯುಗಪುರುಷದ ಉಡುಪ-ಮೊದಲಾದವರ ಹೆಸರಿನಲ್ಲಿರುವ 20ಕ್ಕೂ ಮಿಕ್ಕಿ ಪ್ರಶಸ್ತಿಗಳು ಮೊಗಸಾಲೆಯವರ ಕೃತಿಗಳಿಗೆ ಸಂದಿವೆ. ಇವುಗಳ ಜೊತೆ ಮಾಸ್ತಿ ಪ್ರಶಸ್ತಿ, ಕರ್ನಾಟಕ ಸರಕಾರದ ಗಳಗನಾಥ ಕಾದಂಬರಿ ಪ್ರಶಸ್ತಿಗಳೂ ಅವರ ಒಟ್ಟು ಸಾಹಿತ್ಯ ಸೇವೆಗೆ ಸಂದಿವೆ. ಕರ್ನಾಟಕ ಸರಕಾರದ ಪ್ರತಿಷ್ಠಿತ ಸಾಂಸ್ಕೃತಿಕ ಪ್ರಶಸ್ತಿಗಳಾದ ಪಂಪಾ ಪ್ರಶಸ್ತಿ, ಗಾನಚಿಂತಾಮಣಿ, ಅತ್ತಿಮಬ್ಬೆ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ, ಪ್ರೊ| ಕೆ.ಜಿ. ಕುಂದಣಗಾರ, ಗಡಿನಾಡ ಸಾಹಿತ್ಯ ಪ್ರಶಸ್ತಿ, ಸಂಗೊಳ್ಳಿರಾಯಣ್ಣ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಾಗಿ ಮೊಗಸಾಲೆಯವರನ್ನು ನೇಮಿಸಿ ಗೌರವಿಸಲಾಗಿದೆ. ಇವರಿಗೆ ಮೂಡಬಿದಿರೆಯಲ್ಲಿ ಜರಗಿದ 71ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯ ಅಧ್ಯಕ್ಷತೆ, ಮಡಿಕೇರಿಯಲ್ಲಿ ಜರಗಿದ 80ನೇ ಅಖೀಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯಗಾಯನ ಕವಿಗೋಷ್ಠಿಯ ಅಧ್ಯಕ್ಷತೆ, 2016ರ ಮೈಸೂರು ದಸರಾ ಕವಿಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ, ಸವಣೂರಿನಲ್ಲಿ ಜರಗಿದ ದ.ಕ. ಜಿಲ್ಲಾ 10ನೇ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿuಯ ಅಧ್ಯಕ್ಷತೆ, ಅಜೆಕಾರಿನಲ್ಲಿ ನಡೆದ ಕಾರ್ಕಳ ತಾಲೂಕು 7ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರು ಆಕಾಶವಾಣಿ ಸಂಯೋಜಿಸಿದ 2008ರ ಸಾಲಿನ ರಾಜ್ಯೋತ್ಸವ ಕವಿಗೋಷ್ಠಿಯ ಅಧ್ಯಕ್ಷತೆ, ನಿಟ್ಟೆಯಲ್ಲಿ ಜರಗಿದ ಉಡುಪಿ ಜಿಲ್ಲಾ 5ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಮಂಗಳೂರಿನ ಕಡಲ ಕಿನಾರೆಯಲ್ಲಿ ನಡೆದ 5ನೇ ರಾಜ್ಯಮಟ್ಟದ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 2008ರಲ್ಲಿ ಕರ್ನಾಟಕ ರಾಜ್ಯದ ಎಲ್ಲಾ ಬಾನುಲಿ ಕೇಂದ್ರಗಳು ಶ್ರವಣಬೆಳಗೊಳದ ದಿಗಂಬರ ಜೈನಮಠದ ಆವರಣದಲ್ಲಿ ಆಯೋಜಿಸಿದ ಮಕ್ಕಳ ದಿನಾಚರಣೆಯ ರಾಷ್ಟ್ರೀಯ ಬಾಲಕವಿಗೋಷ್ಠಿಯ ಅಧ್ಯಕ್ಷತೆ, ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ವಿವಿಧ ಸಂಘ ಸಂಸ್ಥೆಗಳು ನಡೆಸಿದ 25ಕ್ಕೂ ಮಿಕ್ಕ ಕವಿಗೋಷ್ಠಿಗಳ ಅಧ್ಯಕ್ಷತೆಯ ಗೌರವ ಲಭಿಸಿದೆ. ಡಾ| ಮೊಗಸಾಲೆಯವರಿಗೆ ವೈದ್ಯಕೀಯ ಸಾಹಿತ್ಯ ರಚನೆಗಾಗಿ “ಬಿಷಕ್ ಸಾಹಿತ್ಯ ರತ್ನ’ ಪ್ರಶಸ್ತಿ, ಬೆಂಗಳೂರಿನ ದಕ್ಷಿಣ ಕನ್ನಡಿಗರ ಸಂಘದಿಂದ “ಪರಶುರಾಮ’ ಪುರಸ್ಕಾರ ಪ್ರಶಸ್ತಿ, ಜೀವಮಾನದ ಸಾಹಿತ್ಯ ಸೇವೆಗಾಗಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ’, ಮೂಡಬಿದಿರೆಯ ಶಿವರಾಮ ಕಾರಂತ ಪ್ರತಿಷ್ಠಾನದಿಂದ “ಶಿವರಾಮ ಕಾರಂತ ಗೌರವ ಪ್ರಶಸ್ತಿ’, ಗುಲ್ಬರ್ಗಾದ ಡಾ| ಬಿ.ಎಸ್. ಶಂಕರ ಪ್ರತಿಷ್ಠಾನದ “ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ’, ಪೇಜಾವರ ಶ್ರೀಗಳಿಂದ ‘ಶ್ರೀಕೃಷ್ಣಾನುಗ್ರಹ’ ಪ್ರಶಸ್ತಿ, ಮೂಡಬಿದಿರೆಯ ಎಸ್.ಕೆ.ಎಫ್. ಶಿಕ್ಷಣ ಪ್ರತಿಷ್ಠಾನದಿಂದ “ಶ್ರೇಷ್ಠ ಸಾಧಕ’ ಪ್ರಶಸ್ತಿ, ಪುತ್ತೂರು ವಿವೇಕಾನಂದ ಕಾಲೇಜಿನ “ನಿರಂಜನ’ ಸಾಹಿತ್ಯ ಪ್ರಶಸ್ತಿ, ಜೀವಮಾನದ ಸಾಧನೆಗಾಗಿ ಡಾ| ಶಿವರಾಮ ಕಾರಂತ ಪುರಸ್ಕಾರ ಪ್ರಶಸ್ತಿ, ಲಕ್ಷ್ಮೀಶ ಕಾವ್ಯ ವೈಭವ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ವಿದ್ವತ್ ಸಮ್ಮಾನ ಪ್ರಶಸ್ತಿ, ಹುಟ್ಟೂರು ಕೋಳ್ಯೂರು ಮಹಾಗಣಪತಿ ಶಂಕರನಾರಾಯಣ ಯಕ್ಷಗಾನ ಸಂಘದಿಂದ “ಹುಟ್ಟೂರ ಸಾಧಕ’ ಸನ್ಮಾನ ಪ್ರಶಸ್ತಿ, ಮೈಸೂರಿನ ಸುತ್ತೂರು ಮಠದ “ಶಿವರಾತ್ರೀಶ್ವರ’ ಪ್ರಶಸ್ತಿ, ಸಾಹಿತ್ಯ ಸೇವೆಗಾಗಿ 2004ರ ಕರ್ನಾಟಕ ಸರಕಾರದ ಪ್ರತಿಷ್ಠಿತ “ರಾಜ್ಯೋತ್ಸವ’ ಪ್ರಶಸ್ತಿ ಮೊದಲಾದ ಪ್ರಮುಖ ಪ್ರಶಸ್ತಿಗಳು ಡಾ| ಮೊಗಸಾಲೆಯವರನ್ನು ಅರಸಿಕೊಂಡು ಬಂದಿವೆ. ವೇಣೂರು ಕುಞೊnàಡಿ ರಾಮಕೃಷ್ಣಯ್ಯ – ಸೀತಮ್ಮ ದಂಪತಿಯ ಸುಪುತ್ರಿ ಪ್ರೇಮಲತಾ ಮೊಗಸಾಲೆಯವರ ಸಹಧರ್ಮಿಣಿ. ಇವರಿಗೆ ಮೂವರು ಮಕ್ಕಳು. ಹಿರಿಯವ ನಿರಂಜನ ಸ್ವೋದ್ಯೋಗಿಯಾಗಿರುತ್ತಾರೆ. ಎರಡನೇ ಸುದರ್ಶನ ಅವರು ಬಹುರಾಷ್ಟ್ರೀಯ ಸಾಫ್ಟವೇರ್ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿರುತ್ತಾರೆ. ಕಿರಿಯರಾದ ಪ್ರಸನ್ನ ಉಡುಪಿಯ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಸಹಪ್ರಾಧ್ಯಾಪಕರಾಗಿರುತ್ತಾರೆ. ಇದೀಗ ಮಾರ್ಚ್ 31 ಮತ್ತು ಎಪ್ರಿಲ್ 1ರಂದು ಕಾಸರಗೋಡಿನ ಮುಳ್ಳೇರಿಯಾದಲ್ಲಿ ಜರಗುವ ಕಾಸರಗೋಡು ಜಿಲ್ಲಾ 11ನೇಯ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯನ್ನು ನೀಡಿರುವುದು ಕಾಸರಗೋಡು ಮಣ್ಣಿನ ಮಗನಾದ ಮೊಗಸಾಲೆಯವರ ಕನ್ನಡ ಸಾಹಿತ್ಯ ಪರ ಸೇವೆಗಳಿಗೆ ಸಲ್ಲುವ ಗೌರವ ಆಗಿದೆ. – ಕೆ. ಕೇಳು ಮಾಸ್ತರ್ ಅಗಲ್ಪಾಡಿ