Advertisement

ಮೂರೇ ತಿಂಗಳಲ್ಲಿ ರಸ್ತೆ ಹಾಳು

11:49 AM Mar 09, 2019 | Team Udayavani |

ಲಿಂಗಸುಗೂರು: ಈ ರಸ್ತೆ ನಿರ್ಮಿಸಿ ಇನ್ನೂ ಮೂರು ತಿಂಗಳು ಕಳೆದಿಲ್ಲ ಆಗಲೇ ಬಿರುಕು ಬಿದ್ದಿದೆ. ಈಗಾಗಲೇ ಕೆಲವೆಡೆ ಕಿತ್ತು ಹೋಗಿ ಬರೀ ಕಲ್ಲುಗಳು ಕಾಣುತ್ತಿವೆ. ಕೆಲವೆಡೆ ರಸ್ತೆ ಕುಸಿಯುವ ಮೂಲಕ ಕಾಮಗಾರಿಯ ಅಸಲಿ ಮುಖ ಅನಾವರಣಗೊಂಡಿದೆ. ಪಟ್ಟಣದ ಏಳನೇ ವಾರ್ಡ್‌ನ ಶಾಂಭವಿ ಮಠದ ಹತ್ತಿರ ಎಚ್‌ಕೆಆರ್‌ ಡಿಬಿಯ 90 ಲಕ್ಷ ರೂ. ಅನುದಾನದಲ್ಲಿ ನಿರ್ಮಿಸಿದ ಸಿಸಿ ರಸ್ತೆ ಈಗಲೇ ಕಾಮಗಾರಿ ನಡೆದದ್ದು ಕಳಪೆ ಎಂಬುದನ್ನು ಸಾಬೀತುಪಡಿಸಿದೆ.

Advertisement

ಡಾಂಬಾರ್‌ ರಸ್ತೆ ನಿರ್ಮಿಸುವುದರಿಂದ ಬೇಗ ಕಿತ್ತು ಹಾಳಾಗಿ ಹೋಗುತ್ತದೆ ಎಂದು ಸರ್ಕಾರ ಸಿಸಿ ರಸ್ತೆ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡುತ್ತಿದೆ. ಆದರೆ ಗುತ್ತಿಗೆದಾರರು ಇಂತಹ ರಸ್ತೆಗಳನ್ನು ಉತ್ತಮವಾಗಿ ನಿರ್ಮಿಸುವುದಿಲ್ಲ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕಾಮಗಾರಿ ಕಳಪೆ ನಡೆದರೂ ಪ್ರಶ್ನಿಸುವುದಿಲ್ಲ. ಹೀಗಾಗಿ ತಾವು ಮಾಡಿದ್ದೇ ಕಾಮಗಾರಿ ಎಂಬಂತಾಗಿದೆ.

ಕಾಮಗಾರಿ ವೇಳೆ ಸರಿಯಾಗಿ ಕ್ಯೂರಿಂಗ್‌ ಮಾಡಿಲ್ಲ. ಹೀಗಾಗಿ ರಸ್ತೆ ಬಹು ಬೇಗನೆ ದುಃಸ್ಥಿತಿಗೆ ತಲುಪಿದೆ. ಇದು ಹೊಸ ಲೇಔಟ್‌ ಆಗಿದ್ದರಿಂದ ಇಲ್ಲಿ ವಾಹನಗಳ ಸಂಚಾರವೂ ಅಷ್ಟಿಲ್ಲ. ಇನ್ನು ಬೃಹತ್‌ ವಾಹನಗಳ ಸಂಚಾರವಂತೂ ಇಲ್ಲವೇ ಇಲ್ಲ. ಆದರೂ ರಸ್ತೆಯಲ್ಲಿ ಬಿರುಕು, ಕುಸಿತ ಉಂಟಾಗಿ ಗುತ್ತಿಗೆದಾರರು ಮಾಡಿದ ಕಾಮಗಾರಿಯ ನಿಜ ಬಣ್ಣ ತಾನೇ ಬಯಲಾಗಿದೆ ಎಂದು ನಿವಾಸಿಗಳು ದೂರಿದ್ದಾರೆ.
 
ಅಧಿಕಾರಿಗಳು ಮೌನ: ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಹಾಗೂ ಕಿರಿಯ ಅಭಿಯಂತರರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಹೀಗಾಗಿ ಹೇಳ್ಳೋರು, ಕೇಳ್ಳೋರು ಯಾರು ಇಲ್ಲವೆಂದು ಗುತ್ತಿಗೆದಾರರು ತಮ್ಮ ಮನಸೋ ಇಚ್ಛೆಯಂತೆ ಕಾಮಗಾರಿ ಮಾಡಿದ್ದರಿಂದ ಲಕ್ಷಾಂತರ ರೂ. ಅನುದಾನ ಕಾಮಗಾರಿ ಹಳ್ಳ ಹಿಡಿಯುವಂತೆ ಮಾಡಿದ್ದಾರೆ.

ಕಾಮಗಾರಿ ದುಃಸ್ಥಿತಿ ಬಗ್ಗೆ ಇಲ್ಲಿನ ನಿವಾಸಿಗಳು ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಜರುಗಿಸದೇ ಮೌನಕ್ಕೆ ಶರಣಾಗಿದ್ದಾರೆ. ಕಳಪೆ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಂಡು ಗುಣಮಟ್ಟದ ಕಾಮಗಾರಿ ಕೈಗೊಳ್ಳಬೇಕು. ಈ ಬಗ್ಗೆ ಮೇಲಾಧಿ ಕಾರಿಗಳು ಗಮನ ಹರಿಸುವಂತೆ ನಿವಾಸಿಗಳು ಆಗ್ರಹಿಸಿದ್ದಾರೆ. 

7ನೇ ವಾರ್ಡ್‌ನಲ್ಲಿ ಸಿಸಿ ರಸ್ತೆಗಾಗಿ ಹಿಂದಿನ ಶಾಸಕರು ಅತಿ ಆಸಕ್ತಿ ವಹಿಸಿ ಎಚ್‌ಕೆಆರ್‌ಡಿಬಿ ವತಿಯಿಂದ 90 ಲಕ್ಷ ಅನುದಾನ ಬಿಡುಗಡೆಗೊಳಿಸಿದ್ದಾರೆ. ಆದರೆ ಗುತ್ತಿಗೆದಾರರ ಬೇಜವಾಬ್ದಾರಿಯಿಂದ ಕಾಮಗಾರಿ ಹಾಳಾಗಿದೆ. ಪುರಸಭೆ ಅಧಿಕಾರಿಗಳು ಕಾಮಗಾರಿ ಬಿಲ್‌ ತಡೆ ಹಿಡಿದು, ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು.
 ಗಿರಿಜಮ್ಮ ವಿರೂಪಾಕ್ಷಿ, 7ನೇ ವಾರ್ಡ್‌ ಪುರಸಭೆ ಸದಸ್ಯೆ

Advertisement

7ನೇ ವಾರ್ಡ್‌ನಲ್ಲಿ ರಸ್ತೆ ಕಾಮಗಾರಿಗೆ ಇನ್ನೂ ಬಿಲ್‌ ಪಾವತಿಸಿಲ್ಲ. ಮೂರನೇ ಪಕ್ಷದವರಿಂದ ಪರಿಶೀಲಿಸಿದ ನಂತರ ಬಿಲ್‌ ಮಾಡಲಾಗುತ್ತದೆ.  ಹಸನ್‌,ಕಿರಿಯ ಅಭಿಯಂತರರು ಪುರಸಭೆ ಲಿಂಗಸುಗೂರು 

„ಶಿವರಾಜ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next