ರಾಣಿಬೆನ್ನೂರ: ಲಾಕ್‌ಡೌನ್‌ನಿಂದ ಬೆಳೆದ ಹೂ ಮಾರಾಟ ಮಾಡಲಾಗದೇ ಅಕ್ಷರಶಃ ಕಂಗಾಲಾದ ಕೃಷಿ ಪದವೀಧರನೊಬ್ಬ ತಮ್ಮ 2 ಎಕರೆ ಜಮೀನಿನಲ್ಲಿ ಬೆಳೆದ ಚೆಂಡು ಹೂವಿನ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಪಡಿಸಿದ ಘಟನೆ ತಾಲೂಕಿನ ಮಾಳನಾಯಕನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಕೃಷಿ ಪದವೀಧರ ರಾಮಚಂದ್ರ ಕೃಷ್ಣಪ್ಪ ರಡ್ಡೇರ ಬೆಳೆ ನಾಶಪಡಿಸಿದ ಹೂ ಬೆಳೆಗಾರ. ಕೃಷಿ ಪದವೀಧರ (ಬಿಎಸ್ಸಿ ಅಗ್ರಿ) ರಾಮಚಂದ್ರ ರಡ್ಡೇರ ತಮ್ಮ 40 ಎಕರೆ ಜಮೀನಿನಲ್ಲಿ ಯೋಜನೆ ಪ್ರಕಾರ ನೂರಾರು ನಿರುದ್ಯೋಗಿಗಳಿಗೆ ಉದ್ಯೋಗ ಕೊಡುವ ನಿರೀಕ್ಷೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿ 2 ಎಕರೆ ಜಮೀನಿನಲ್ಲಿ ಚೆಂಡು ಹೂ ಬೆಳೆದಿದ್ದ. ಇದಕ್ಕಾಗಿ ಸುಮಾರು 2.5 ಲಕ್ಷ ರೂ. ಖರ್ಚು ಮಾಡಿದ್ದರು. ಬೆಳೆ ಕೂಡ ಹುಲುಸಾಗಿ ಬೆಳೆದಿತ್ತು. ಆದರೆ ಲಾಕ್‌ಡೌನ್ ತಮ್ಮೆಲ್ಲ ಯೋಜಾನಾಬದ್ಧ ಕಾಯಕಕ್ಕೆ ಬರೆ ಎಳೆದಿದೆ ಎನ್ನುತ್ತಾರೆ ರಾಮಚಂದ್ರ.
ಬೆಳೆದ ಹೂಗಳನ್ನು ಬಾಂಬೆಗೆ ಮಾಡಿ ಸುಮಾರು 50 ಲಕ್ಷ ರೂ. ಲಾಭ ನಿರೀಕ್ಷೆಯಲ್ಲಿದ್ದರು. ಆದರೆ ಲಾಕ್‌ಡೌನ್‌ನಿಂದ ಬೆಳೆದ ಹೂ ಮಾರಾಟ ಮಾಡಲಾಗದೇ ಹಾಕಿದ ಬಂಡವಾಳವೂ ಬಾರದೇ ಕಂಗಾಲಾದ ರೈತ ಟ್ರ್ಯಾಕ್ಟರ್ ಮೂಲಕ ಬೆಳೆ ನಾಶಪಡಿಸಿದ್ದಾರೆ.
ಸ್ಥಳೀಯ ಮಾರುಕಟ್ಟೆಗಳಲ್ಲಿ ಕೆ.ಜಿಗೆ 50ರಿಂದ 150 ಬಿಡಿ ಹೂ ಮಾರಾಟವಾಗುತ್ತಿತ್ತು. ಜಾತ್ರೆ, ಉತ್ಸವ, ದೇವಸ್ಥಾನಗಳಿಗೆ ನಿರ್ಬಂಧ ಹೇರಿದ್ದರಿಂದ ಹೂವಿಗೆ ಬೇಡಿಕೆ ಇಲ್ಲದಂತಾಗಿ ಹೊಲದಲ್ಲೇ ಉದುರುತ್ತಿದೆ. ಸುಮಾರು 2.5 ಲಕ್ಷ ನಷ್ಟವಾಗಿದೆ. ಇದು ಹಾಕಿದ ಬಂಡವಾಳ ನೀಗಿಸುತ್ತಿತ್ತು ಎಂದು ರಾಮಚಂದ್ರ ತಿಳಿಸುತ್ತಾರೆ.
ಲಾಕ್‌ಡೌನ್‌ನಿಂದ ಬೆಲೆ ಕುಸಿದಿದೆ. ಹೀಗಾಗಿ ಮಾರಾಟಗಾರರು ಬಾಯಿಗೆ ಬಂದಂತೆ ಕೇಳುತ್ತಾರೆ. ದಿನಕ್ಕೆ ಒಂದು ಆಳಿಗೆ 300ರಿಂದ 400 ರೂ. ಕೂಲಿ ಕೊಡಬೇಕು. ಬೆಳೆದ ಹೂವು ಬಿಡಿಸಲು ಕೂಲಿ ಕೊಡಲಾಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ.