Advertisement

ಧರ್ಮಗಳಿಂದ ಶಾಂತಿ, ಸುವ್ಯವಸ್ಥೆ ಹಾಳು

01:15 PM Jan 06, 2020 | Lakshmi GovindaRaj |

ಮೈಸೂರು: ಶಾಂತಿ, ಸೌಹಾರ್ದತೆ ಹಾಗೂ ಏಕತೆ ಸಾರುವ ನಿಟ್ಟಿನಲ್ಲಿ ಸ್ಥಾಪಿತವಾಗಿದ್ದ ಧರ್ಮಗಳಿಂದ ಶಾಂತಿ ಸುವ್ಯವಸ್ಥೆ ಹಾಳಾಗುತ್ತಿದೆ ಎಂದು  ವಿಶ್ವ ಮೈತ್ರಿ ಬುದ್ಧ ವಿಹಾರದ ಕಲ್ಯಾಣ ಸಿರಿ ಭಂತೇಜಿ ವಿಷಾದ ವ್ಯಕ್ತಪಡಿಸಿದರು. ಜಾಗೃತಿ ಸಂಸ್ಥೆ ವತಿಯಿಂದ ಇನ್‌ಸ್ಟಿಟ್ಯೂಟ್‌ ಆಫ್ ಎಂಜಿನಿಯರ್ಸ್‌  ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ “ಶಾಂತಿ ಸೌಹಾರ್ದತೆಯಿಂದ ಸಮಾನತೆ ಮತ್ತು ಏಕತೆಯ ಕಡೆಗೆ’ ಎಂಬ ವಿಚಾರ ಸಂಕಿರಣದಲ್ಲಿ  ಮಾತನಾಡಿದರು.

Advertisement

ಸಮಾಜದಲ್ಲಿ ಪ್ರತಿಯೊಬ್ಬರೂ ಶಾಂತಿ ಹಾಗೂ ಮನುಷ್ಯತ್ವ ರೂಢಿಸಿಕೊಂಡರೆ ದೇಶದಲ್ಲಿ ಅಸಮಾನತೆ ಇರುವುದಿಲ್ಲ. ಸಮಾಜದ  ಒಗ್ಗೂಡುವಿಕೆಗಾಗಿ ಇಂತಹ ಕಾರ್ಯಕ್ರಮವನ್ನು ಪ್ರತಿಯೊಂದು ಹೋಬಳಿ ಮಟ್ಟದಲ್ಲಿ ನಡೆಸಿ ಜನರಲ್ಲಿ ಶಾಂತಿ ಸೌಹಾರ್ದತೆ ಮೂಡಿಸಬೇಕು. ಜಾತಿ  ಧರ್ಮ ಬಿಟ್ಟು ನಾವೆಲ್ಲಾ ಒಂದು ಎಂಬ ಭಾವನೆ ಯುವ ಪೀಳಿಗೆಯಲ್ಲಿ ಮೂಡಿಸಬೇಕು ಎಂದು ಹೇಳಿದರು.

ವೈಯಕ್ತಿಕ ಸ್ವಾರ್ಥಕ್ಕಾಗಿ ಜನರಲ್ಲಿ  ಜಾತಿಧರ್ಮದ ಮೂಲಕ ದ್ವೇಷದ ಭಾವನೆ ಮೂಡಿಸುತ್ತಿದ್ದಾರೆ. ಈ ರೀತಿಯ ಭಾವನೆಗಳಿಗೆ ಜನರು ಒಳಗಾಗಬಾರದು. ಉನ್ನತ ಶಿಕ್ಷಣವನ್ನು  ಪಡೆದುಕೊಂಡು ಪ್ರಜ್ಞಾವಂತರಾಗಿ ಮತ್ತೂಬ್ಬರಿಗೆ ತೊಂದರೆಯಾಗದಂತೆ ಜೀವನವನ್ನು ಸಾಗಿಸಬೇಕು ಎಂದರು. ಮೈಸೂರು ವಿವಿ  ಪ್ರಾಚ್ಯ ವಿದ್ಯಾ ಸಂಶೋಧನಾಲಯ ನಿರ್ದೇಶಕ ಪ್ರೊ. ಎಸ್‌.ಶಿವರಾಜಪ್ಪ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿ ಸುಭದ್ರ ಸಮಾಜದತ್ತ ಸಾಗುವವರೆ  ಎಲ್ಲರಲ್ಲೂ ಧರ್ಮ ಹಾಗೂ ಜಾತಿಯ ವಿಷಬೀಜ ಬಿತ್ತಿ ಶಾಂತಿ ಸೌಹಾರ್ದ ಕದಡುತ್ತಿದ್ದಾರೆ.

ಜಾತಿ, ಸಂಘಟನೆಗಳು ವಿಜೃಂಭಿಸುತ್ತಿದ್ದು, ಇದರಿಂದ  ಭಾರತ ಛಿದ್ರವಾಗುವ ಸಾಧ್ಯತೆಯಿದೆ ಎಂದು ಬೇಸರವ್ಯಕ್ತಪಡಿಸಿದರು. ಬುದ್ಧ, ಬಸವ, ನಮಗೆಲ್ಲ ಜ್ಞಾನ ಹಾಗೂ ಸಮಾನತೆಯ ತತ್ವ ಬೋಧಿಸಿದರು.  ಗಾಂಧೀಜಿ ಶಾಂತಿ ಸೌಹಾರ್ದದ ಮೂಲಕ ಭವ್ಯ ಭಾರತ ನಿರ್ಮಾಣದ ಕನಸು ಕಂಡಿದ್ದರು. ಆದರೆ ಇಂದು ಈ ದೇಶದಲ್ಲಿ ಮೌಡ್ಯ,  ಅಸ್ಪ್ರಶ್ಯತೆ, ಸ್ತ್ರೀ ಶೋಷಣೆ, ಜಾತಿ ನಿಂದನೆ ಹೆಚ್ಚಾಗುತ್ತಿದೆ.

ಧರ್ಮಗಳ ನಡುವೆ ಹೊಂದಾಣಿಕೆ ಮಾಡುವ ಕೆಲಸ ವನ್ನು ಸರಕಾರ ಮಾಡುತ್ತಿಲ್ಲ.  ಹೊಂದಾಣಿಕೆ ಇಲ್ಲದೇ ದೇಶದ ಒಗ್ಗಟ್ಟು ಸಾಧ್ಯವಿಲ್ಲ ಎಂದು ಹೇಳಿದರು. ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌, ಹಜರತ್‌ ಮೌಲನಾ ಮೊಹಮ್ಮದ್‌  ಅಹಮದ್‌ ಖಾನ್‌, ಪ್ರಜಾಪಿತ ಬ್ರಹ್ಮಕುಮಾರಿ ಈಸ್ವರಿ ವಿದ್ಯಾಲಯದ ರಾಜಯೋಗ ಶಿಕ್ಷಕ ಬಿ.ಕೆ.ಶಿವಲೀಲಾ, ಕರ್ನಾಟಕ ಪ್ರದೇಶ ಕೃಷಿಕ ಸಮಾಜ  ಅಧ್ಯಕ್ಷ ಕಲ್ಮಳ್ಳಿ ಶಿವಕುಮಾರ್‌, ಜಾಗೃತಿ ಸಂಸ್ಥೆ ಅಧ್ಯಕ್ಷೆ ಕೆಂಪಾಮಣಿ ಇತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next