ಧಾರವಾಡ: ಬಿಆರ್‌ಟಿಎಸ್ ಯೋಜನೆಯೊಂದಿಗೇ ನಗರದಲ್ಲಿ ಪ್ರಾರಂಭವಾದ ಮರಗಳ ಮಾರಣಹೋಮ ಇನ್ನೂ ಮುಂದುವರಿದಿದೆ. ಮರಗಳ ಉಳಿವಿಗಾಗಿ ಪರಿಸರವಾದಿಗಳು ನಿತ್ಯ ಹೋರಾಟ ನಡೆಸಿದ್ದರೂ ಅಧಿಕಾರಿಗಳು ಮಾತ್ರ ಅವರ ಮನವಿಗೆ ಪುರಸ್ಕಾರ ನೀಡುತ್ತಲೇ ಇಲ್ಲ.
ಇಲ್ಲಿನ ಬೆಳಗಾವಿ ರಸ್ತೆಯಲ್ಲಿನ ಮರಗಳನ್ನು ಉಳಿಸುವಂತೆ ಪರಿಸರವಾದಿಗಳು ಗುರುವಾರವೂ ಸಹ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಜ್ಯುಬಿಲಿ ವೃತ್ತದಿಂದ ನರೇಂದ್ರ ಕ್ರಾಸ್‌ವರೆಗೆ ರಸ್ತೆ ಅಗಲೀಕರಣಕ್ಕಾಗಿ ಸುಮಾರು 800 ಗಿಡಗಳನ್ನು ಕಡೆಯಲು ಅರಣ್ಯ ಇಲಾಖೆ ಮುಂದಾಗಿದ್ದು, ಗುರುವಾರ ಸುಮಾರು 80 ಮರಗಳನ್ನು ಧರೆಗುರುಳಿಸಿದ ಕಾರಣಕ್ಕೆ ಮರಗಿದ ಪರಿಸರವಾದಿಗಳು, ವಿವಿಧ ಬಗೆಯ ಬರಹಗಳನ್ನೊಳಗೊಂಡ ಫಲಕಗಳನ್ನು ಮರಗಳಿಗೆ ನೇತುಹಾಕಿ ಪ್ರತಿಭಟಿಸಿದರು.
ಪರಿಸರವಾದಿಗಳ ತೀವ್ರ ವಿರೋಧದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಪ್ರಾರಂಭದಲ್ಲಿ ಮರಗಳನ್ನು ಕಡೆಯಲು ಪರವಾನಗಿ ನೀಡಿರಲಿಲ್ಲ. ಆದರೆ ರಾಜಕೀಯ ಒತ್ತಡಕ್ಕೆ ಮಣಿದ ಇಲಾಖೆ ಅಧಿಕಾರಿಗಳು, ಇದೀಗ ಎಲ್ಲ ಮರಗಳನ್ನು ಕಡೆಯಲು ಮುಂದಾಗಿದ್ದರಿಂದ ಕೆಲ ದಿನಗಳಲ್ಲೇ ಎಲ್ಲ ಮರಗಳಿಗೆ ಕೊಡಲಿ ಪೆಟ್ಟು ಬೀಳುವುದಂತೂ ನಿಶ್ಚಿತವಾಗಿದೆ.
ಮರಗಳಿಗೆ ಶ್ರದ್ಧಾಂಜಲಿ: ನಾವು ನಿನಗೆ ಬೈ ಬೈ ಹೇಳುತ್ತಿದ್ದೇವೆ.. ನನ್ನೊಂದಿಗೆ ನೀವು ಹೋಗುತ್ತಿದ್ದೀರಿ, ಹೋಗಿ ಬನ್ನಿ, ಕಲಿಗಾಲವಿದು ನಿಮಗಿದು ಕೊನೆಯ ಕಾಲ..ನನ್ನ ಹಾಗೂ ನನ್ನ ಬಂಧು-ಬಳಗ ಕೊಂದು, ಪ್ರತಿ ನಿಮಿಷವೂ ಸಾಯುತ್ತಿದ್ದೀರಿ, ನಿಮ್ಮ ಅಂಧಕಾರಕ್ಕೆ ನನ್ನದೊಂದು ಧಿಕ್ಕಾರ..ಬಿಸಿಲ ಬೇಗೆಗೆ ಬಾರದ ಮಳೆಗೆ ದೂರಬೇಡಿ ಇನ್ನು ಸುಮ್ಮ ಸುಮ್ಮನೆ ಕೊಂದು ನನನ್ನು..! ಹೀಗೆ ವಿವಿಧ ಬರಹಳನ್ನೊಳಗೊಂಡ ಫಲಕಗಳನ್ನು ನೇತು ಹಾಕುವ ಮೂಲಕ ಮರಗಳಿಗೆ ಶ್ರದ್ಧಾಂಜಲಿ ಸಲ್ಲಿಸಿ ಪರಿಸರವಾದಿಗಳು ತಮ್ಮ ಹಸಿರು ಪ್ರೇಮ ಮೆರೆದರು.
ಪಿ.ವಿ. ಹಿರೇಮಠ ಮಾತನಾಡಿ, ಹಲವು ವರ್ಷಗಳಿಂದ ಜನರ, ಪ್ರಾಣಿ, ಪಕ್ಷಿಗಳ ಒಡನಾಡಿಯಾಗಿದ್ದ ಮರಗಳನ್ನು ಅಭಿವೃದ್ಧಿ ಹೆಸರಿನಲ್ಲಿ ಕಡಿಯುತ್ತಿದ್ದಾರೆ. ನನ್ನನ್ನು ಕೊಂದು ನೀವು ಹೇಗೆ ಬದುಕುತ್ತೀರಿ ಎಂಬ ಮರದ ಪ್ರಶ್ನೆಯೊಂದಿಗೆ ಪ್ರತಿಭಟನೆ ಮಾಡಲಾಗಿದೆ. ಇದೇ ರೀತಿ ಅನೇಕ ಕಡೆಗಳಲ್ಲಿ ರಸ್ತೆಗಳ ನಿರ್ಮಾಣ ಮಾಡಬೇಕಾಗುತ್ತಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಿಡಗಳನ್ನು ಉಳಿಸುವ ಮೂಲಕ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡುವಂತಹ ಯೋಜನೆಗಳನ್ನು ರೂಪಿಸಬೇಕು ಎಂಬುದು ನಮ್ಮ ಅಭಿಪ್ರಾಯವಾಗಿದೆ ಎಂದರು. ಪರಿಸರವಾದಿ ಡಾ| ಪ್ರಕಾಶ ಭಟ್, ಪ್ರಕಾಶ ಗೌಡರ, ಪು.ತಿ. ಶರ್ಮಾ, ಓಟಿಲಿ ಅನಬನ್, ಕಿರಣ ಹಿರೇಮಠ ಇದ್ದರು.