Advertisement

ಮ್ಯಾಚ್‌ ಇದ್ದರೂ ಮೆಟ್ರೋಗೆ ಜನ ಜಾತ್ರೆ

12:33 PM Jun 19, 2017 | Team Udayavani |

ಬೆಂಗಳೂರು: ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಅಕ್ಷರಶಃ ಜಾತ್ರೆ ವಾತಾವರಣ. ಈ ಜಾತ್ರೆಗಾಗಿ ಸುಮಾರು ವರ್ಷಗಳಿಂದ ಕಾದುಕುಳಿತಿದ್ದ ಜನರ ಉತ್ಸಾಹ, ಸಂಭ್ರಮ ಮೇರೆ ಮೀರಿತ್ತು. ಒಂದೆಡೆ ವೀಕೆಂಡ್‌, ಒಂದೆಡೆ ಇಂಡಿಯಾ-ಪಾಕಿಸ್ತಾನದ ನಡುವೆ ಹೈ ಓಲ್ಟೆಜ್‌ ಪಂದ್ಯವಿದ್ದರೂ ಮೆಟ್ರೋದ ನೂತನ ಮಾರ್ಗಕ್ಕೆ ಸಾವಿರಾರು ಮಂದಿ ಲಗ್ಗೆ ಇಟ್ಟಿದ್ದರು. 

Advertisement

ಹೌದು, ನಮ್ಮ ಮೆಟ್ರೋ ಮೊದಲ ಹಂತ ಭಾನುವಾರ ಸಾರ್ವಜನಿಕ ಸಂಚಾರ ಸೇವೆಗೆ ಮುಕ್ತವಾಯಿತು. ಈ ಅಪೂರ್ವ ಕ್ಷಣಗಳಲ್ಲಿ ಭಾಗಿಯಾಗಲು ಜನ ಸಹಸ್ರ ಸಂಖ್ಯೆಯಲ್ಲಿ ಮೆಟ್ರೋ ನಿಲ್ದಾಣಗಳತ್ತ ಹರಿದುಬಂದರು. ಪರಿಣಾಮ “ಮೆಟ್ರೋ ಜಾತ್ರೆ’ಯಾಗಿ ಮಾರ್ಪಟ್ಟಿತು.  

ಸ್ನೇಹಿತರು, ನವದಂಪತಿಗಳು, ಹಿರಿಯ ನಾಗರಿಕರು ಸೇರಿದಂತೆ ಎಲ್ಲ ವರ್ಗದ ಜನ “ನಮ್ಮ ಮೆಟ್ರೋ’ದಲ್ಲಿ ಸಂಚರಿಸಲು ಬಂದಿದ್ದರು. ಇದರಿಂದ ನಿಲ್ದಾಣಗಳಲ್ಲೆಲ್ಲಾ ನೂಕುನುಗ್ಗಲು ಇತ್ತು. ಕಣ್ಣು ಹಾಯಿಸಿದಷ್ಟು ದೂರ ಜನ ಜಂಗುಳಿ. ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತ ದೃಶ್ಯ ಸಾಮಾನ್ಯವಾಗಿತ್ತು. 

ಸಂಭ್ರಮಕ್ಕೆ ಪಾರವೇ ಇಲ್ಲ: ನೂತನ ಮಾರ್ಗದಲ್ಲಿ 10 ನಿಮಿಷಕ್ಕೊಂದು ರೈಲುಗಳಿದ್ದವು. ಯಾವುದೋ ತುರ್ತು ಕೆಲಸಕ್ಕೆ ಹೊರಟವರೂ ಅಲ್ಲಿ ಯಾರೂ ಇರಲಿಲ್ಲ. ಆದರೂ ಅಲ್ಲಿದ್ದವರೆಲ್ಲರೂ ಧಾವಂತದಲ್ಲಿದ್ದರು. ಕಾರಣ, ಈ ಕ್ಷಣಗಳಿಗಾಗಿ ಅವರೆಲ್ಲಾ ದಶಕಗಳಿಂದ ಕಾದುಕುಳಿತಿದ್ದರು. ಉತ್ಸಾಹದ ಕಟ್ಟೆಯೂ ಒಡೆದಿತ್ತು. ಹಾಗಾಗಿ, ರೈಲು ಹತ್ತುವ ಸಂದರ್ಭದಲ್ಲಿನ ಆತುರ ಅವರಲ್ಲಿತ್ತು. ಟಿಕೆಟ್‌ ಸಿಗುತ್ತಿದ್ದಂತೆ ಪ್ಲಾಟ್‌ಫಾರಂಗಳತ್ತ ಧಾವಿಸುತ್ತಿದ್ದರು. ರೈಲು ಹತ್ತಿದೊಡನೇ ಸಾರ್ಥಕಭಾವ, ಸಂತಸದ ಹೊನಲು, ಸಂಭ್ರಮಕ್ಕೆ ಅಲ್ಲಿ ಪಾರವೇ ಇರಲಿಲ್ಲ.

ಮೆಟ್ರೋದಲ್ಲಿ ಪ್ರಯಾಣಿಸಲೆಂದು 3ಗಂಟೆಯಿಂದಲೇ ಜನಸಾಗರ ನಿಲ್ದಾಣದ ಕಡೆಗೆ ಹರಿದುಬರುತ್ತಿತ್ತು. ಟಿಕೆಟ್‌ ಪಡೆದು ಸ್ವಯಂಚಾಲಿತ ಮೆಟ್ಟಿಲುಗಳ ಮೇಲೆ ನಿಂತು, ಅಲ್ಲಿಂದ ಪ್ಲಾಟ್‌ಫಾರ್ಮ್ ಪ್ರವೇಶಿಸಿದ ಜನರಿಗೆ ಪ್ಲಾಟ್‌ಫಾರ್ಮ್ನಲ್ಲಿ ಮೆಟ್ರೊ ರೈಲು ಕಾಣಿಸಲೇ ಇಲ್ಲ. ಸ್ವಲ್ಪಹೊತ್ತು ಕಣ್ಣರಳಿಸಿ ಮೆಟ್ರೋ ಎದುರು ನೋಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಆ ಕಡೆಯಿಂದ “ನಮ್ಮ ಮೆಟ್ರೋ’ ಧ್ವನಿ ಮೊಳಗಿಸಿತು. ಅದಕ್ಕೆ ಪ್ರಯಾಣಿಕರು ಘೋಷಣೆಗಳ ಪ್ರತಿಕ್ರಿಯೆ ನೀಡಿದರು. 

Advertisement

ಹತ್ತಿದವರೇ ಹೆಚ್ಚು, ಇಳಿದವರು ವಿರಳ!: ಮೆಟ್ರೋ ರೈಲು ತಮ್ಮ ಮುಂದೆ ಬಂದು ನಿಂತಾಗ ಕನಸು ನನಸಾಗಲು ಒಂದೇ ಹೆಜ್ಜೆ ಬಾಕಿ. ಬಾಗಿಲು ತೆರೆಯುತ್ತಿದ್ದಂತೆ ನೀರಿನಂತೆ ಹರಿದರು. ಒಳಗಡೆ ನಿಂತಾಗ ಅದ್ಭುತ ಆನಂದ. ನಿರಾಳಭಾವ ಜನರ ಮುಖದಲ್ಲಿ ಸ್ಪಷ್ಟವಾಗಿ ಕಾಣುತ್ತಿತ್ತು. ಮುಂದಿನ ನಿಲ್ದಾಣ ಆಗಮಿಸುತ್ತಿದ್ದಂತೆ ಮತ್ತದೇ ಕುತೂಹಲದಿಂದ ಎದುರು ನೋಡುತ್ತಿದ್ದ ಜನಸಂದಣಿ! 

ಪ್ರತಿಯೊಂದು ಪ್ರಕಟಣೆಗಳನ್ನು ಏಕಾಗ್ರತೆಯಿಂದ ಆಲಿಸುತ್ತಿದ್ದರು. ಈ ಮಧ್ಯೆ ಮೆಟ್ರೋದಲ್ಲಿ ಕುಳಿತಾಗ ಕಾಣುವ ನಗರದ ಸೌಂದರ್ಯವನ್ನು ಸವಿದ ಪ್ರಯಾಣಿಕರು, ಮೊಬೈಲ್‌ಗ‌ಳಿಂದ ಸೆಲ್ಫಿ, ಫೋಟೋ ಕ್ಲಿಕ್ಕಿಸುವುದು ನಿರಂತರವಾಗಿತ್ತು. ಎದುರಿಗೆ ಬಂದ ಮತ್ತೂಂದು ಮೆಟ್ರೋ ರೈಲಿನತ್ತ ಕೈಬೀಸಿ ಕೇಕೆ ಹಾಕುವುದು, ಶುಭಾಶಯ ಕೋರುವುದು ಕಂಡುಬಂತು.

ಗೊಂದಲಗಳ ಗೂಡು: ಹಸಿರು ಲೈನ್‌ನಿಂದ ನೇರಳೆ ಲೈನ್‌ಗೆ ಹೋಗುವುದು ಹೇಗೆ? ಹೊರಗಡೆ ಹೋಗುವುದು ಹೇಗೆ? ಟೋಕನ್‌ ಹಾಕಿ ಮತ್ತೂಂದು ಕಾರಿಡಾರ್‌ಗೆ ಹೋಗಬೇಕಾ? ಮಾರ್ಗ ಬದಲಿಸಲು ಹೊಸದಾಗಿ ಟಿಕೆಟ್‌ ಪಡೆಯಬೇಕಾ?

– ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರೂ ಇಂತಹ ಪ್ರಶ್ನೆಗಳೊಂದಿಗೆ ಬಂದಿಳಿಯುತ್ತಿದ್ದರು. ಹೆಜ್ಜೆ-ಹೆಜ್ಜೆಗೂ ಸೂಚನಾ ಫ‌ಲಕಗಳಿದ್ದವು. ಮಾರ್ಗದರ್ಶನ ಮಾಡುವವರಿಗೂ ಕಡಿಮೆ ಇರಲಿಲ್ಲ. ಆದರೂ ನಿಗದಿತ ಸ್ಥಳ ತಲುಪುವವರೆಗೂ ಗೊಂದಲ ಮಾತ್ರ ಹಾಗೇ ಉಳಿಯುತ್ತಿತ್ತು. 

ಮಂತ್ರಿಸ್ಕ್ವೇರ್‌ನಲ್ಲಿ ನೇರವಾಗಿ ಯಲಚೇನಹಳ್ಳಿಗೆ ಟಿಕೆಟ್‌ ಕೊಡಲಿಲ್ಲ ಎಂಬ ಆರೋಪವೂ ಕೆಲ ಪ್ರಯಾಣಿಕರಿಂದ ಕೇಳಿಬಂತು. ಇದರಿಂದ ಅಲ್ಲಿ ಮಾತಿನ ಚಕಮಕಿ ಆಯಿತು. 
ಉತ್ತರ-ದಕ್ಷಿಣ ಕಾರಿಡಾರ್‌ನಲ್ಲಿ ಎರಡು ಲಿಫ್ಟ್ಗಳಿವೆ. ಲಿಫ್ಟ್-3ರಲ್ಲಿ ಹೋದರೆ ಪ್ಲಾಟ್‌ಫಾರಂ-2ಕ್ಕೆ ಹೋಗುತ್ತದೆ. ಲಿಫ್ಟ್-4ರಲ್ಲಿ ಹೋದರೆ ಪ್ಲಾಟ್‌ಫಾರಂ-1ಕ್ಕೆ ಹೋಗುತ್ತದೆ. ಇದು ಆತುರದಲ್ಲಿ ಅದಲು-ಬದಲು ಆದವರು ಗೊಂದಲಕ್ಕೆ ಸಿಲುಕಿದರು. 

ಶಿಡ್ಲಘಟ್ಟದ ಆಶಾಕಿರಣ ಅಂಧರ ಶಾಲೆಯಿಂದ ಮೆಟ್ರೋದಲ್ಲಿ ಪ್ರಯಾಣಿಸಲು ಅಂಧ ಶಿಕ್ಷಕ ಚಿಕ್ಕರೆಡ್ಡಿಯಪ್ಪ ಬಂದಿದ್ದರು. ಸ್ಮಾರ್ಟ್‌ ಕಾರ್ಡ್‌ ಪಡೆದ ಅವರು, ಎಲ್ಲೆಡೆ ಸಂಚರಿಸಿದರು ನಂತರ ಹೊರಗೆ ಬರಲು ದುಡ್ಡು ಇರಲೇಇಲ್ಲ. ಇದರಿಂದ ಪೇಚೆಗೆ ಸಿಲುಕಿದರು. ನಂತರ ಸಿಬ್ಬಂದಿ ಮತ್ತೆ ಹಣ ಪಡೆದು, ರಿಚಾರ್ಜ್‌ ಮಾಡಿಸಿದರು. 

ಯು ಡನ್‌ ಎ ವಂಡ್‌ಫ‌ುಲ್‌ ಜಾಬ್‌ ಸರ್‌!: ಬಿಎಂಆರ್‌ಸಿ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ಸಿಂಗ್‌ ಖರೋಲಾ ಕೂಡ ಭಾನುವಾರ ಸಂಜೆ ಜನದಟ್ಟಣೆ ನಡುವೆಯೇ ಸಾಮಾನ್ಯ ವ್ಯಕ್ತಿಯಂತೆ ಮೆಟ್ರೋದಲ್ಲಿ ಸಂಚರಿಸಿದರು. ಸಂಜೆ 4.30ರ ಸುಮಾರಿಗೆ ಯಲಚೇನಹಳ್ಳಿಯಿಂದ ಮೆಜೆಸ್ಟಿಕ್‌ ಮತ್ತೆ ಮೆಜೆಸ್ಟಿಕ್‌-ಯಲಚೇನಹಳ್ಳಿ ನಡುವೆ ಮೆಟ್ರೋದಲ್ಲಿ ಪ್ರಯಾಣ ಮಾಡಿದರು. ಈ ಸಂದರ್ಭದಲ್ಲಿ ಜನರ ಅಭಿಪ್ರಾಯಗಳನ್ನು ಆಲಿಸಿದರು. ನಿಲ್ದಾಣಗಳಲ್ಲಿ ಸೌಲಭ್ಯಗಳನ್ನು ಪರಿಶೀಲಿಸಿದರು.

ನಿಲ್ದಾಣಗಳಲ್ಲಂತೂ ಜನ ಅವರನ್ನು ಮುತ್ತಿದರು. ಹೋಗುವವರು-ಬರುವವರು ಒಂದು ಕ್ಷಣ ನಿಂತು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಕೈಕುಲುಕಿ, “ಯೂ ಡನ್‌ ಎ ವಂಡರ್‌ಫ‌ುಲ್‌ ಜಾಬ್‌ ಸರ್‌’ ಎಂದು ಹೇಳಿ ಹೋಗುತ್ತಿದ್ದರು. 

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್‌ಸಿಂಗ್‌ ಖರೋಲಾ, “ಕ್ರಿಕೆಟ್‌ ಪಂದ್ಯಾವಳಿ ನಡುವೆಯೂ ಜನ ನಮ್ಮ ಮೆಟ್ರೋಗೆ ಸಾಗರ ರೂಪದಲ್ಲಿ ಹರಿದುಬರುತ್ತಿದ್ದಾರೆ. ಯಾಕೆಂದರೆ, ಇದು ಜನರ ಮೆಟ್ರೋ. ಪ್ರಯಾಣ ದರ ಏರಿಕೆ ಬಗ್ಗೆಯೂ ಜನ ತಲೆಕೆಡಿಸಿಕೊಳ್ಳದೆ, ಮೆಟ್ರೋ ಏರುತ್ತಿದ್ದಾರೆ. ಖುಷಿ ಎನಿಸುತ್ತಿದೆ’ ಎಂದು ಹೇಳಿದರು. 

ಇಂದಿನಿಂದ ಬೆಳಿಗ್ಗೆ 5.30ರಿಂದ ಸೇವೆ: ಸೋಮವಾರ ಬೆಳಗಿನ ಜಾವ 5.30ರಿಂದಲೇ ಮೆಟ್ರೋ ಸೇವೆ ಆರಂಭವಾಗಲಿದೆ.  ಯಪ್ಪನಹಳ್ಳಿ, ಮೈಸೂರು ರಸ್ತೆ, ನಾಗಸಂದ್ರ, ಯಲಚೇನಹಳ್ಳಿಯಿಂದ ಏಕಕಾಲದಲ್ಲಿ ಬೆಳಿಗ್ಗೆ 5.30ಕ್ಕೆ ಮೆಟ್ರೋ ರೈಲುಗಳು ಹೊರಡಲಿವೆ. ರಾತ್ರಿ 11ರವರೆಗೂ ಸೇವೆ ಇರಲಿದೆ. 

ನನ್ನ ಮನೆ ಇರುವುದು ಜೆ.ಪಿ. ನಗರದಲ್ಲಿ. ಕೆಲಸ ಮಾಡುತ್ತಿರುವುದು ಜಾಲಹಳ್ಳಿಯ ಆಕ್ಸಿಸ್‌ ಬ್ಯಾಂಕಿನಲ್ಲಿ. ನಿತ್ಯ ಬೆಳಿಗ್ಗೆ 7ಕ್ಕೇ ಮನೆಯಿಂದ ಹೊರಡಬೇಕಿತ್ತು. ರಾತ್ರಿ ಮನೆ ತಲುಪಲು 10.30 ಆಗುತ್ತಿತ್ತು. ಈಗ ಮೆಟ್ರೋದಿಂದ ಆರಾಮಾಗಿ 8.30ಕ್ಕೆ ಹೊರಟು, ರಾತ್ರಿ 8.30ಕ್ಕೆ ಮನೆಗೆ ಬರುತ್ತೇನೆ.
– ಶ್ರೀನಿಧಿ, ಜೆ.ಪಿ. ನಗರ ನಿವಾಸಿ.

ಬಿಟಿಎಂನಿಂದ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಇಸ್ಕಾನ್‌ಗೆ ಹೋಗಲು ಒಂದೂವರೆಯಿಂದ ಎರಡು ತಾಸು ಹಿಡಿಯುತ್ತಿತ್ತು. ಇದಕ್ಕಾಗಿ ದೇವರ ದರ್ಶನಕ್ಕೆ ಹೋಗಲೂ ಹಿಂದೇಟು ಹಾಕುವಂತಾಗಿತ್ತು. ಈಗ ಆ ಸಮಸ್ಯೆ ಇಲ್ಲ. ಕೇವಲ 25-30 ನಿಮಿಷದಲ್ಲಿ ಆರ್‌.ವಿ. ರಸ್ತೆಯಿಂದ ಮಹಾಲಕ್ಷ್ಮೀ ಲೇಔಟ್‌ಗೆ ಬರಬಹುದು.
– ದಿವಾಕರ್‌, ಬಿಟಿಎಂ ಲೇಔಟ್‌ ನಿವಾಸಿ.

ಎಲ್ಲಾ ಓಕೆ. ಆದರೆ, ಉದ್ಘಾಟನೆ ದಿನವೇ ಪ್ರಯಾಣ ದರ ಹೆಚ್ಚಳ ಮಾಡಿದ್ದು ಸರಿ ಅಲ್ಲ. ಈ ಹಿಂದಿನ ದರವೇ ಇದ್ದರೆ ಚೆನ್ನಾಗಿತ್ತು. ಎಷ್ಟಿದ್ದರೂ ಓಡಾಡುತ್ತಾರೆ ಎಂದು ಮಾಡಿದ್ದು ಜನರ ಅನಿವಾರ್ಯತೆಯನ್ನು ದುರುಪಯೋಗಪಡಿಸಿಕೊಂಡಂತೆ ಅನಿಸುತ್ತಿದೆ.
– ಮೋಹನ್‌, ಪೀಣ್ಯ ನಿವಾಸಿ. 

ಮೆಟ್ರೋ ಒಂದೇ ತಾಸಿನಲ್ಲಿ 15,400: “ನಮ್ಮ ಮೆಟ್ರೋ’ ಹಸಿರು ಮಾರ್ಗದಲ್ಲಿ ಒಂದೇ ತಾಸಿನಲ್ಲಿ 15,400 ಜನ ಪ್ರಯಾಣಿಸಿದರು. ಈ ಮಾರ್ಗದಲ್ಲಿ ಸಂಜೆ 4ರಿಂದ 5ರ ನಡುವೆ ಒಟ್ಟು 11 ರೈಲುಗಳು ಸಂಚರಿಸಿದವು. ಇದರಲ್ಲಿ 15,400 ಜನ ಪ್ರಯಾಣಿಸಿದ್ದಾರೆ. ಒಂದು ಮೆಟ್ರೋ ರೈಲು 975 ಪ್ರಯಾಣಿಕರನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಈ ಒಂದು ತಾಸಿನಲ್ಲಿ ಸರಾಸರಿ 750ರಿಂದ 800 ಜನ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್‌ಸಿ ಅಧಿಕಾರಿಗಳು ತಿಳಿಸಿದರು. 

ಮೆಟ್ರೋದಲ್ಲಿ ಉತ್ತರ ಕರ್ನಾಟಕ ತಂಡ  
ಬೆಂಗಳೂರು:
“ನಾವೆಲ್ಲಾ ಮದ್ವೆಗೆ ಬಂದಿದ್ವಿ ಸರ್‌. ನಿನ್ನೆ ರಾಷ್ಟ್ರಪತಿಗಳು ಉದ್ಘಾಟನೆ ಮಾಡಿದ್ನ ಟಿವಿಯಲ್ಲಿ ನೋಡಿದ್ವಿ. ಇವತ್ತು ಹ್ಯಾಂಗೂ ಬೆಂಗಳೂರಿಗೇ ಬಂದೇವಿ. ಮೆಟ್ರೋನ ಕಣ್ತುಂಬ ನೋಡ್ಕೊಂಡು ಹೋಗೋಣ ಅಂತಾ ಬಂದ್ವಿ…’ ರಾಜಾಜಿನಗರದ 1ನೇ ಬ್ಲಾಕ್‌ನಲ್ಲಿ ಸಂಬಂಧಿಕರ ಮದುವೆಗೆ ಬಂದಿದ್ದ ಹುಬ್ಬಳ್ಳಿಯ ಇಂಗಳಹಳ್ಳಿಯ ವೀರಣ್ಣ ಶಿರಗುಪ್ಪ ಅವರ ಮಾತುಗಳಿವು. 

ಇಂಗಳಹಳ್ಳಿಯಿಂದ 40 ಜನರ ತಂಡ ಭಾನುವಾರ ಮದುವೆಗೆ ಬಂದಿತ್ತು. ಮದುವೆ ಮುಗಿಸಿಕೊಂಡು ನೇರವಾಗಿ ಮಹಾಲಕ್ಷ್ಮೀ ಲೇಔಟ್‌ ನಿಲ್ದಾಣದಿಂದ ಮೆಟ್ರೋ ಏರಿದ ಆ ತಂಡ, ಮೆಜೆಸ್ಟಿಕ್‌ಗೆ ಬಂದಿಳಿಯಿತು. ಈ ಸಂದರ್ಭದಲ್ಲಿ ಆ ತಂಡದಲ್ಲಿದ್ದ ವೀರಣ್ಣ ಉದಯವಾಣಿಯೊಂದಿಗೆ ಮಾತಿಗಿಳಿದರು. 

ಬರೀ ಟಿವಿ, ಪೇಪರ್‌ಗಳಲ್ಲಿ ಮೆಟ್ರೋ ಬಗ್ಗೆ ನೋಡುತ್ತಿದ್ದೆವು. ಈಗ ಉದ್ಘಾಟನೆ ಮರುದಿನವೇ ನಾವು ಬೆಂಗಳೂರಿನಲ್ಲಿದ್ದೇವೆ. ಸಂಬಂಧಿಕರು, ಊರಿನವರೆಲ್ಲಾ ಬಂದಿದ್ದೇವೆ. ಈ ಅವಕಾಶ ಮತ್ತೆ ಸಿಗುವುದಿಲ್ಲ ಎಂದು ಎಲ್ಲರನ್ನೂ ಕರೆದುಕೊಂಡು ಮೆಟ್ರೋ ಪ್ರಯಾಣ ಹೇಗಿರುತ್ತದೆ ಎಂದು ನೋಡಲು ಬಂದಿದ್ದೇವೆ ಎಂದರು. 

ಇದೊಂದು ಅದ್ಭುತ ಅನುಭವ. ಆದರೆ, ತುಂಬಾ ಜನದಟ್ಟಣೆ ಹೆಚ್ಚು. ಇನ್ನಷ್ಟು ಬೋಗಿಗಳನ್ನು ಜೋಡಿಸಬೇಕು ಅನಿಸುತ್ತದೆ. ಇದಕ್ಕಿಂತ ಮುನ್ನ ಅನೇಕ ಸಲ ಬೆಂಗಳೂರಿಗೆ ಬಂದಿದ್ದೆವು. ಆಗೆಲ್ಲಾ ಬಸ್‌ಗಳಲ್ಲಿ ಓಡಾಡುತ್ತಿದ್ದೆ. ಈಗ ಮೆಟ್ರೋ ಬಂದಿದ್ದರಿಂದ ಇನ್ನು ಮುಂದೆ ಇದರಲ್ಲೇ ಓಡಾಡುತ್ತೇನೆ ಎಂದೂ ಅವರು ಹೇಳಿದರು. 

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next