ಪಣಜಿ: ಗೋವಾದ ಪಣಜಿಯಲ್ಲಿ ಐವತ್ತನೆಯ ಅಂತಾರಾಷ್ಟ್ರೀಯ ಚಿತ್ರೋತ್ಸವ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನವೆಂಬರ್ 20ರಿಂದ 28ರವರೆಗೆ ಕಡಲನಗರಿಯಲ್ಲಿ ಭಾರತವೂ ಸೇರಿದಂತೆ ಜಗತ್ತಿನ 76 ದೇಶಗಳ 250ಕ್ಕೂ ಅಧಿಕ ಸಿನಿಮಾಗಳು ಪ್ರದರ್ಶನಗೊಳ್ಳಲಿದೆ.
ನವೆಂಬರ್ 20ರಿಂದ ಆರಂಭಗೊಳ್ಳಲಿರುವ ಅಂತರಾಷ್ಟ್ರೀಯ ಚಿತ್ರೋತ್ಸವ ಯುರೋಪ್ ನ ಖ್ಯಾತ ನಿರ್ದೇಶಕ, ಸಾಕ್ಷ್ಯಚಿತ್ರಕಾರ ಗೋರಾನ್ ಪಾಸ್ಕಲ್ ಜೆವಿಕ್ ಅವರ “ಡೆಸ್ಪೈಟ್ ದ ಫಾಗ್” ಸಿನಿಮಾ ಪ್ರದರ್ಶನದ ಮೂಲಕ ಚಾಲನೆ ದೊರೆಯಲಿದೆ.
ಇಟಾಲಿಯನ್ ಸಿನಿಮಾ ಡೆಸ್ಪೈಟ್ ದ ಫಾಗ್ ಪೋಷಕರ ರಕ್ಷಣೆ ಇಲ್ಲದೆ, ಅಬ್ಬೇಪಾರಿಗಳಂತೆ ಅಲೆಯುತ್ತಿರುವ ಸಾವಿರಾರು ಅಪ್ರಾಪ್ತ ನಿರಾಶ್ರಿತರ ಕುರಿತ ಕಥಾನಕ ಇದಾಗಿದೆ. ಸಾವಿರಾರು ಮಂದಿ ಯುರೋಪ್, ಹಾಗೂ ಇಟಲಿಯ ರಸ್ತೆಗಳಲ್ಲಿ ಈ ನಿರಾಶ್ರಿತರ ದಂಡು ಅಲೆದಾಡುತ್ತಿದೆ.
ಜಿಟಿಜಿಟಿ ಮಳೆಯ ನಡುವೆ ರೆಸ್ಟೋರೆಂಟ್ ಮಾಲೀಕ ಪಾವೊಲೋ ಕಥೆಯನ್ನು ನಿರೂಪಿಸುವ ಮೂಲಕ ನಿರಾಶ್ರಿತರ ನೋವು, ಬದುಕು ಅನಾವರಣಗೊಳ್ಳುತ್ತಾ ಸಾಗುತ್ತದೆ. ಮೊಹಮ್ಮದ್ ಎಂಬ ಅಪ್ರಾಪ್ತ ಬಾಲಕನನ್ನು ಮಳೆ ಸಂಜೆಯಲ್ಲಿ ಭೇಟಿಯಾಗುತ್ತಾನೆ. ಇಟಲಿಯ ತಿರುಗಾಟದ ವೇಳೆ ರಬ್ಬರ್ ಬೋಟ್ ನಲ್ಲಿ ಆಟವಾಡುತ್ತಿದ್ದಾಗಲೇ ಪೋಷಕರನ್ನು ಕಳೆದುಕೊಂಡಿರುತ್ತಾನೆ. ಹೀಗೆ ಡೆಸ್ಪೈಟ್ ದ ಫಾಗ್ ಸಿನಿಮಾ ನಿಮ್ಮನ್ನು ಆವರಿಸಿಕೊಳ್ಳುತ್ತಾ ಸಾಗುತ್ತದೆ..ಮೊದಲ ದಿನದ ಸಿನಿಮಾ ಮಿಸ್ ಮಾಡದೇ ನೋಡಿ…
2001ರ ವೈವಿಧ್ಯತೆಯ ಅಂತಾರಾಷ್ಟ್ರೀಯ ಸಿನಿಮಾ ಗೈಡ್ ಪ್ರಕಾರ ವಿಶ್ವದ ಪ್ರಮುಖ ಐದು ನಿರ್ದೇಶಕರಲ್ಲಿ ಗೋರಾನ್ ಕೂಡಾ ಒಬ್ಬರಾಗಿದ್ದಾರೆ. ಪಾಸ್ಕಲ್ ಜೆವಿಕ್ ಈವರೆಗೆ ಸುಮಾರು 30 ಸಾಕ್ಷ್ಯ ಚಿತ್ರ, 18 ಫೀಚರ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಅಲ್ಲದೇ ಬರ್ಲಿನ್, ವೆನಿಸ್, ಟೋರಾಂಟೋ, ಸ್ಯಾನ್ ಸೆಬಾಸ್ಟಿಯನ್ ಸೇರಿದಂತೆ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಲ್ಲಿ ಪ್ರದರ್ಶನ ಕಂಡಿದೆ.