Advertisement

ಹಫೀಜ್‌ಗೆ ತುಸು ಹಿನ್ನಡೆ

06:00 AM Apr 05, 2018 | Team Udayavani |

ಮುಂಬಯಿ ದಾಳಿಯ ರೂವಾರಿ ಹಫೀಜ್‌ ಸಯೀದ್‌ನ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಂ ಲೀಗ್‌ ಅನ್ನು ಅಮೆರಿಕ ವಿದೇಶಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಿದೆ. ಇದರ ಜತೆಗೆ ಪಾಕಿಸ್ಥಾನದಲ್ಲಿ ಮುಕ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ತೆಹ್ರೀಕ್‌-ಇ-ಆಜಾದಿ-ಇ-ಕಾಶ್ಮೀರ್‌ ಎನ್ನುವ ಇನ್ನೊಂದು ಸಂಘಟನೆಯೂ ಈ ಪಟ್ಟಿಗೆ ಸೇರ್ಪಡೆಯಾಗಿದೆ. ಇವೆರಡೂ ಹಫೀಜ್‌ನ ಲಷ್ಕರ್‌-ಎ-ತಯ್ಯಬ ಭಯೋತ್ಪಾದಕ ಸಂಘಟನೆಯ ಅಂಗ ಸಂಸ್ಥೆಗಳೆನ್ನುವುದು ಗುಟ್ಟಿನ ವಿಚಾರವೇನಲ್ಲ. ಒಂದೆಡೆ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಲೇ ಇನ್ನೊಂದೆಡೆ ದೇಶೋದ್ಧಾರಕನೆಂಬ ಸೋಗು ಹಾಕಲು ಹಫೀಜ್‌ ಇಂತಹ ಹಲವು ಸಂಘಟನೆಗಳನ್ನು ಹುಟ್ಟು ಹಾಕಿದ್ದಾನೆ. ಜಮಾತ್‌-ಉದ್‌-ದಾವಾ ಎನ್ನುವುದು ಕೂಡಾ ಹಫೀಜ್‌ನ ಈ ಮಾದರಿಯ ಇನ್ನೊಂದು ಉಗ್ರ ಸಂಘಟನೆಯಾಗಿದ್ದು ಇದನ್ನು ಕೆಲ ವರ್ಷದ ಹಿಂದೆಯೇ ಉಗ್ರ ಸಂಘಟನೆ ಎಂದು ಅಮೆರಿಕ ಘೋಷಿಸಿದೆ. 

Advertisement

ಮಿಲ್ಲಿ ಮುಸ್ಲಿಂ ಲೀಗ್‌ ಅನ್ನು ಹಫೀಜ್‌ ಕಳೆದ ವರ್ಷ ತನ್ನ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಸ್ಥಾಪಿಸಿದ್ದ. ಜಗತ್ತು ಉಗ್ರನೆಂದು ಸಾರಿ ಸಾರಿ ಹೇಳಿದರೂ ಹಫೀಜ್‌ ಪಾಕಿಸ್ಥಾನದಲ್ಲಿ ದೊಡ್ಡ ನಾಯಕ. ವಿದೇಶದಿಂದ ದೇಣಿಗೆಯಾಗಿ ಬರುವ ಮಿಲಿಯಗಟ್ಟಲೆ ಹಣದಲ್ಲಿ ಪುಡಿಗಾಸನ್ನು ಆಸ್ಪತ್ರೆ, ಮದರಸ ಎಂದೆಲ್ಲ ಖರ್ಚು ಮಾಡಿ ಪಾಕ್‌ ಜನರ ಎದುರು ಸಮಾಜ ಸೇವಕನೆಂಬ ಸೋಗು ಹಾಕಿಕೊಂಡಿದ್ದಾನೆ. ಈ ರೀತಿ ಗಳಿಸಿಕೊಂಡಿರುವ ಅಪಾರ ಜನಬೆಂಬಲವನ್ನು ಮತಗಳಾಗಿ ಪರಿವರ್ತಿಸುವ ಸಲುವಾಗಿ ಸ್ಥಾಪಿಸಿದ್ದೇ ಮಿಲ್ಲಿ ಮುಸ್ಲಿಂ ಲೀಗ್‌. ಅಧಿಕೃತ ರಾಜಕೀಯ ಪಕ್ಷವಾಗಿ ನೋಂದಣಿಯಾಗಲು ಕಾನೂನಿನ ಅಡೆತಡೆಗಳು ಎದುರಾಗಿದ್ದರೂ ಈ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ಹಫೀಜ್‌ ಭರ್ಜರಿ ತಯಾರಿ ನಡೆಸಿದ್ದಾನೆ. ಈ ಮೂಲಕ ಉಗ್ರವಾದವನ್ನು ಆ ದೇಶದ ಅಧಿಕೃತ ನಿಲುವನ್ನಾಗಿ ಮಾಡುವ ಅವನ ಪ್ರಯತ್ನಕ್ಕೆ ಅಮೆರಿಕದ ಘೋಷಣೆಯಿಂದ ಸಣ್ಣ ಹಿನ್ನಡೆಯಾಗಿರುವುದು ನಿಜ. 

ಇದೇ ವೇಳೆ ವಿಶ್ವಸಂಸ್ಥೆ ಬುಧವಾರ ಜಾಗತಿಕ ಉಗ್ರರ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಇದರಲ್ಲಿ ಹಫೀಜ್‌, ದಾವೂದ್‌ ಇಬ್ರಾಹಿಂ ಸೇರಿದಂತೆ ಪಾಕಿಸ್ಥಾನದವರೇ ಆಗಿರುವ 139 ಉಗ್ರರಿದ್ದಾರೆ. ಉಗ್ರ ವಿರುದ್ಧದ ಜಾಗತಿಕ ಹೋರಾಟದಲ್ಲಿ ಇವೆಲ್ಲ ಪ್ರಮುಖ ನಿರ್ಧಾರಗಳೇ ಆಗಿದ್ದರೂ ವಾಸ್ತವದಲ್ಲಿ ಇಂತಹ ಘೋಷಣೆ ಅಥವಾ ಉಗ್ರ ಪಟ್ಟಿಯಿಂದ ಏನಾದರೂ ಪ್ರಯೋಜನವಿದೆಯೇ? ಹಫೀಜ್‌ ಕಡು ಪಾತಕಿ, ಕಾಶ್ಮೀರದಲ್ಲಿ ನಡೆಯುತ್ತಿರುವ ಹಿಂಸಾಚಾರಗಳಿಗೆ ಕುಮ್ಮಕ್ಕು ನೀಡುತ್ತಿರುವುದು ಅವನೇ, ಮುಂಬಯಿ ಮೇಲಾಗಿರುವ ಭೀಕರ ಉಗ್ರ ದಾಳಿಯ ಸೂತ್ರಧಾರನೂ ಅವನೇ ಎಂಬೆಲ್ಲ ವಿಷಯಗಳು ಜಗತ್ತಿಗೆ ಗೊತ್ತಿದೆ. ಆದರೆ ಇಷ್ಟರ ತನಕ ಅವನ ಕೂದಲು ಕೊಂಕಿಸಲು ಕೂಡಾ ಸಾಧ್ಯವಾಗಿಲ್ಲ. ಇದೇ ಅಮೆರಿಕ ಹಫೀಜ್‌ನನ್ನು ಜಾಗತಿಕ ಉಗ್ರನೆಂದು ಘೋಷಿಸಿ ಅವನ ತಲೆಗೆ ಸುಮಾರು 65 ಕೋಟಿ ಬಹುಮಾನ ಇಟ್ಟು ಬಹಳ ವರ್ಷವಾಯಿತು. ಈಗಲೂ  ಪಾಕಿಸ್ಥಾನದಲ್ಲಿ ಅವನು ಮುಕ್ತವಾಗಿ ಓಡಾಡಿಕೊಂಡಿದ್ದಾನೆ. ನಿತ್ಯ ರ್ಯಾಲಿಗಳನ್ನು ನಡೆಸುತ್ತಾ ತನ್ನ ಜನಬೆಂಬಲವನ್ನು ಹೆಚ್ಚಿಸಿಕೊಳ್ಳುತ್ತಿದ್ದಾನೆ. 

ಪಾಕಿಸ್ಥಾನಕ್ಕಾಗಲಿ, ಅಮೆರಿಕಕ್ಕಾ ಗಲಿ ಅವನ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲು ಸಾಧ್ಯವಾಗಿಲ್ಲ. ಅವನಿಗೆ ಸಿಗುವ ವಿದೇಶದ ಹಣಕಾಸು ನೆರವಿನಲ್ಲಿ ಕೊಂಚ ಹೆಚ್ಚು ಕಡಿಮೆಯಾಗಿರಬಹುದು. ಆದರೆ ಈ ರೀತಿಯ ಹಣಕಾಸಿನ ನೆರವು ಅವನಿಗೆ ಎಲ್ಲೆಡೆಯಿಂದ ಬರುತ್ತದೆ. ಇಂತಹ ನಿಷೇಧಗಳಿಂದ ಹಫೀಜ್‌ ಆಗಲಿ, ದಾವೂದ್‌ ಆಗಲಿ ಯಾರ ಮೇಲೂ ಕಿಂಚಿತ್‌ ಪರಿಣಾಮವೂ ಆಗುವುದಿಲ್ಲ. 

ಹಫೀಜ್‌ ಈಗ ಪಾಕಿಸ್ಥಾನದ ಸರಕಾರಕ್ಕಿಂತಲೂ ಮೇಲಿದ್ದಾನೆ. ಅರ್ಥಾತ್‌ ಸರಕಾರಕ್ಕೆ ಅವನ ವಿರುದ್ಧ ಕಠಿನ ಕ್ರಮ ಕೈಗೊಳ್ಳುವ ಸಾಮರ್ಥ್ಯ ಇಲ್ಲದಂತಾಗಿದೆ. ಒಂದು ವೇಳೆ ಕಠಿನ ಕ್ರಮಕ್ಕೆ ಮುಂದಾದರೆ ವ್ಯತಿರಿಕ್ತ ಪರಿಣಾಮವಾಗಬಹುದು. ಪಾಕ್‌ ಸೇನೆ ಅವನನ್ನು ಸರ್ವ ರೀತಿಯಲ್ಲೂ ಪೋಷಿಸುತ್ತಿದೆ. ಸೇನೆಯ ಪಾಲಿಗೆ ಅವನು “ಒಳ್ಳೆಯ ಉಗ್ರ’. ಇದಕ್ಕೆ ಕಾರಣ ಅವನ ಮೈಯ ಕಣಕಣದಲ್ಲಿ ತುಂಬಿಕೊಂಡಿರುವ ಭಾರತ ಬಗೆಗಿನ  ದ್ವೇಷ. ಹೀಗೆ ಸೇನೆಯ ಪರೋಕ್ಷ ಬೆಂಬಲದಿಂದ ಮೆರೆಯುತ್ತಿರುವ ಹಫೀಜ್‌ ಅಮೆರಿಕದ ಘೋಷಣೆಯಿಂದ ಚಿಂತಿಸುವ ಅಗತ್ಯವಿಲ್ಲ. ಲಾದನ್‌ನನ್ನು ಹೊತ್ತೂಯ್ದಂತೆ ಹಫೀಜ್‌ನನ್ನು ಹೊತ್ತೂಯ್ಯಲು ಸೇನೆ ಯಾವ ರೀತಿ ಯಲ್ಲೂ ಅವಕಾಶ ಕೊಡುವುದಿಲ್ಲ. 

Advertisement

ಈ ಭರವಸೆ ಇರುವುದರಿಂದಲೇ ಅವನು ರಾಜಕೀಯ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿರುವುದು. ಈ ಮೂಲಕ ಪಾಕಿಸ್ಥಾನವನ್ನು ಉಗ್ರರಿಂದ ಉಗ್ರರಿಗಾಗಿ ಉಗ್ರರು ಆಳುತ್ತಿರುವ ದೇಶ ಮಾಡಲು ಹೊರಟಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next