Advertisement

ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಛಲ ಇತ್ತು: ನಾಗಭೂಷಣ ರಾವ್‌

11:23 AM Aug 15, 2022 | Team Udayavani |

ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷ್‌ ಆಡಳಿತ ಇತ್ತು. ಅದು ಬೇರೆಯವರ ಆಡಳಿತ ಅನಿಸಿದರೂ ಅಲ್ಲಿ ನ್ಯಾಯ-ನಿಷ್ಠೆ ಇತ್ತು. ಇಂದು ನಮ್ಮವರದ್ದೇ ಆಡಳಿತ ಇದೆ. ಆದರೂ ಬೇಸರ, ದುಃಖ ಅನಿಸುತ್ತಿದೆ. -ಇದು ಅಮೃತ ಮಹೋತ್ಸವದ ವೇಳೆ ಅದೇ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಹುಲಿಕಲ್‌ ನಾಗಭೂಷಣ ರಾವ್‌ ಅವರ ಬೇಸರದ ನುಡಿಗಳು.

Advertisement

ಅನ್ಯರ ಆಡಳಿತದಲ್ಲಿ ಕಂದಾಯ, ತೆರಿಗೆ, ಲೆಕ್ಕಾಚಾರ ಸೇರಿದಂತೆ ಸರ್ಕಾರಿ ಕೆಲಸದಲ್ಲಿ ಪ್ರಾಮಾಣಿಕತೆ ಇತ್ತು. ಮರ್ಯಾದೆಗೆ ಅಂಜಿ ಹೆಚ್ಚಿನವರು ನಿಷ್ಠೆಯಿಂದ ಇರುತ್ತಿದ್ದರು. ಆ ಸಮಾಜವನ್ನು ಕಂಡ ನನಗೆ ಇಂದಿನ ಆಡಳಿತದ ಬಗ್ಗೆ ದುಃಖವಾಗುತ್ತದೆ. ಇಲ್ಲಿ ಒಬ್ಬರದ್ದು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಸಂಪೂರ್ಣ ಸಮಾಜ ಒಂದಕ್ಕೊಂದು ಕೊಂಡಿಯಂತೆ ಬದಲಾಗಿದೆ. ರಾಜರು ಪ್ರಜೆಗಳನ್ನು ತಮ್ಮ ಮಕ್ಕಳಂತೆ ಕಾಣುತ್ತಿದ್ದರು. ಈಗ ಎಲ್ಲೆಡೆ ರಾಜಕೀಯವೇ ತುಂಬಿತುಳುಕುತ್ತಿದೆ.

ಮುಂಬೈನಲ್ಲಿ ಗಾಂಧೀಜಿ ಕ್ವಿಟ್‌ ಇಂಡಿಯಾ ಚಳವಳಿಗೆ ಕರೆಕೊಟ್ಟಿದ್ದರು. ಅದು ಕಾಳ್ಗಿಚ್ಚಿನಂತೆ ಹಬ್ಬಿತ್ತು. ಅದು ನಾನು ಓದುತ್ತಿದ್ದ ತೀರ್ಥಹಳ್ಳಿಯ ಶಾಲೆಯ ಮಕ್ಕಳನ್ನೂ ತಟ್ಟಿ ಎಬ್ಬಿಸಿತ್ತು. ಹಿಂದೆ ಮುಂದೆ ನೋಡದೆ, ಶಾಲೆಗೆ ಗುಡ್‌ಬೈ ಹೇಳಿ, ಚಳವಳಿಗೆ ಸೇರಿಕೊಂಡೆವು. ಹೀಗೆ ಸೇರಿಕೊಂಡಿದ್ದರಿಂದ ಜೈಲಿಗೆ ಹಾಕಿದರು. ಆ ಜೈಲಿನಲ್ಲೂ ಒಂದು ರೀತಿ ಸುಖ, ಹೆಮ್ಮೆ ಇತ್ತು. ಆ ದಿನಗಳಲ್ಲಿ ಶಾಂತವೇರಿ ಗೋಪಾಲಗೌಡ, ಕಡಿದಾಳು ಮಂಜಪ್ಪ ಇನ್ನಿತರರು ನನ್ನ ಸಹಪಾಠಿಗಳಾಗಿದ್ದರು.

ನಾವು ಆಗಿನ್ನೂ ವಿದ್ಯಾರ್ಥಿಗಳು. ಆದರೂ, ಬ್ರಿಟಿಷರಿಗೆ ಸಾಧ್ಯವಾದಷ್ಟು ತೊಂದರೆ ಕೊಡಬೇಕು ಎನ್ನುವ ಹುಚ್ಚು ಇತ್ತು. ಅದಕ್ಕಾಗಿ ಆಗ ಅವರ ಸಂಪರ್ಕ ಸಾಧನವಾಗಿದ್ದ ಟೆಲಿಗ್ರಾಂ, ವಿದ್ಯುತ್‌ ವೈಯರ್‌ಗಳನ್ನು ಕಡಿತಗೊಳಿಸುತ್ತಿದ್ದೆವು. ನಮ್ಮ ಕಾಟ ತಡೆಯಲಾಗದೆ ಬ್ರಿಟಿಷರು ನಮ್ಮೆಲ್ಲರನ್ನು ಜೈಲಿಗೆ ಅಟ್ಟುತ್ತಿದ್ದರು. ಜೈಲಿನಲ್ಲಿದ್ದಾಗ ಹೋರಾಟಗಾರ ದೊರೆಸ್ವಾಮಿ ಅವರೊಂದಿಗೆ ಇದ್ದೆ. ಸ್ವಾತಂತ್ರ್ಯ ಬಂದ ದಿನವಂತೂ ಎಂದೂ ಮರೆಯಲು ಸಾಧ್ಯವಿಲ್ಲ. ಅದು ಬರೀ ಮಾತುಗಳಲ್ಲಿ ಹೇಳಲಾಗದ ಅನುಭವ. ಊರಿಗೆ ಊರೇ ಹಬ್ಬದ ವಾತಾವಣದಲ್ಲಿ ಮುಳುಗಿತ್ತು. ಆನಂದದಲ್ಲಿ ಮಿಂದೆದ್ದಿತ್ತು. ಅದಕ್ಕೆ ನಾವು ಸಾಕ್ಷಿಯಾಗಿದ್ದೆವು ಎನ್ನುವುದೇ ನಮ್ಮ ಭಾಗ್ಯ ಎಂದರು.

ವಿದೇಶಿ ಕೋಟು ಕಂಡರೆ ಗಲಾಟೆ ಆಗ್ತಿತ್ತು…
ಅದು ನನ್ನ ಹೈಸ್ಕೂಲು ದಿನಗಳು. ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಅರಿವು ನನಗೆ ಸ್ಪಷ್ಟವಾಗಿ ಇರಲಿಲ್ಲ. ಆದರೆ, ಹೋರಾಟ, ಜೈಲು, ಜೈಲು ಚಳವಳಿಯಂತಹ ಮಾತುಗಳು ಮಾತ್ರ ಆಗಾಗ್ಗೆ ಕಿವಿಗೆ ಬಂದು ಬಡಿಯುತ್ತಿದ್ದವು. ಒಂದು ದಿನ ಸಹಪಾಠಿಗಳು ಶಾಲೆಯಿಂದ ಬರುವಾಗ ಯಾವುದೋ ಚಳವಳಿ ಗುಂಪಿನಲ್ಲಿ ಸೇರಿಕೊಳ್ಳಲು ಹೋದರು. ಅವರೊಂದಿಗೆ ನಾನೂ ಸೇರಿಕೊಂಡೆ. ನಂತರ ಶಾಲೆ ಅಪರೂಪವಾಯ್ತು. ಹೋರಾಟ ನಿರಂತರ ಕಾಯಕವಾಯಿತು.
-ಸ್ವಾತಂತ್ರ್ಯ ಹೋರಾಟಕ್ಕೆ ತಾವು ಸೇರಿಕೊಂಡ ದಿನಗಳನ್ನು ಹಲಸೂರಿನ ನಾರಾಯಣಪ್ಪ ವಿವರಿಸಿದ್ದು ಹೀಗೆ.

Advertisement

ನಗರ, ಹೊರ ವಲಯಗಳಲ್ಲಿ ಆಗ ನಡೆಯುತ್ತಿದ್ದ ಚಳವಳಿಗಳು, ಜೈಲುವಾಸಗಳ ಬಗ್ಗೆ ಅಸ್ಪಷ್ಟವಾಗಿಯೇ ಚಿತ್ರಣಗಳನ್ನು ಬಿಚ್ಚಿಟ್ಟರು. “ಗೋವಾದಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದೆ. ಆ ಚಳವಳಿಯಲ್ಲಿ ಸ್ನೇಹಿತರೊಂದಿಗೆ ಹೋಗಿದ್ದೆವು. ವಿದೇಶಿ ಕೋಟು ಕಂಡರೆ, ಅವರೊಂದಿಗೆ ಗಲಾಟೆಗಳು ನಡೆಯುತ್ತಿದ್ದವು’ ಎಂದು ನೆನಪಿಸಿಕೊಂಡರು. “ಸ್ವಾತಂತ್ರ್ಯ ಬರುವಷ್ಟರಲ್ಲಿ ನನಗೆ 20 ವರ್ಷ ಆಗಿದ್ದವು. ಅಷ್ಟೊತ್ತಿಗೆ ಹೋರಾಟದ ಸ್ಪಷ್ಟ ಉದ್ದೇಶ ತಿಳಿದಿತ್ತು. ಅಷ್ಟೊತ್ತಿಗೆ ಮದುವೆಯೂ ಆಗಿತ್ತು. ಮತ್ತೆ ಮನೆ ಜವಾಬ್ದಾರಿ ಹೊಣೆ ತೊಡಗಿಕೊಂಡಿದ್ದೆ. ಹೋರಾಟದ ಅವಧಿಯಲ್ಲಿ ಯಾವುದೇ ನಾಯಕರನ್ನು ಭೇಟಿಯಾದ ನೆನಪು ನನಗಿಲ್ಲ. ಆದರೆ, ಅವರ ಕರೆಗಳಿಗೆ ಓಗೊಟ್ಟು ಪಾಲ್ಗೊಂಡಿದ್ದು ಮಾತ್ರ ಸ್ಪಷ್ಟವಾಗಿ ನೆನಪಿದೆ’ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next