Advertisement

ಭಾರತೀಯ ಸೈನಿಕರ ಕಣ್ಗಾವಲಿಗೆ ಕೆಮರಾ ಇಟ್ಟ ಚೀನ; ಕೆಮರಾ ಲೆಕ್ಕಿಸದೇ ಪ್ರಭುತ್ವ ಸಾಧಿಸಿದ ಸೇನೆ

04:23 PM Sep 01, 2020 | Karthik A |

ಮಣಿಪಾಲ: ಲಡಾಖ್‌ನ ವಾಸ್ತವ ಗಡಿನಿಯಂತ್ರಣ ರೇಖೆಯ ಸಮೀಪದ ಪ್ಯಾಂಗಾಂಗ್‌ ನಲ್ಲಿ ಮತ್ತೆ ಭಾರತ ಮತ್ತು ಚೀನ ಯೋಧರ ನಡುವೆ ಘರ್ಷಣೆ ಏರ್ಪಟ್ಟಿದೆ. ಆಗಸ್ಟ್‌ 29-30ರ ರಾತ್ರಿ ಪ್ಯಾಂಗಾಂಗ್‌ ಪ್ರದೇಶದಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆ ನಡೆದಿದೆ. ಈ ಮೂಲಕ ಚೀನ ಸೈನಿಕರು ಮತ್ತೆ ಭಾರತವನ್ನು ಕೆದಕಿದ್ದಾರೆ. ಸುಮಾರು ನೂರು ದಿನಗಳಿಂದ ಭಾರತ ಮತ್ತು ಚೀನ ನಡುವೆ ಸಂಘರ್ಷ ನಡೆಯುತ್ತಿದೆ.

Advertisement

ಪ್ಯಾಂಗಾಂಗ್‌ ತ್ಸೋ ಸರೋವರ ಪ್ರದೇಶದ ಫಿಂಗರ್‌ 4 ಪ್ರದೇಶದಿಂದ ಚೀನ ಹಿಂದೆ ಸರಿಯಲು ನಿರಾಕರಿಸಿದೆ. ಈ ನಿಟ್ಟಿನಲ್ಲಿ ಪೂರ್ವ ಲಡಾಖ್‌ ಪ್ರದೇಶದಲ್ಲಿ ಭಾರತ ಹೆಚ್ಚುವರಿ ಸೇನೆಯನ್ನು ನಿಯೋಜಿಸಿದೆ. ಈ ಮೂಲಕ ಚೀನದ ತಂಟೆಗೆ ಭಾರತೀಯ ಯೋಧರು ಸರಿಯಾದ ತಿರುಗೇಟು ಕೊಟ್ಟಿದ್ದಾರೆ.

ಚೀನದ ಸೈನ್ಯದ ಆಕ್ರಮಣದ ಎರಡು ದಿನಗಳ ಬಳಿಕ ಭಾರತವು ದಕ್ಷಿಣ ಪಾಂಗೊಂಗ್‌ನ ವಿವಾದಿತ ಪ್ರದೇಶವನ್ನು ಸಂಪೂರ್ಣವಾಗಿ ತನ್ನ ಹಿಡಿತಕ್ಕೆ ಪಡೆದುಕೊಂಡಿದೆ. ಇಲ್ಲಿನ ಅನೇಕ ಶಿಖರಗಳಲ್ಲಿ ಸೈನ್ಯವನ್ನು ನಿಯೋಜಿಸಲಾಗಿದೆ. ಸೇನೆಯ ಮಾಹಿತಿ ಪ್ರಕಾರ ನಮ್ಮ ಸೈನಿಕರು ಅನೇಕ ಪರ್ವತ ಶ್ರೇಣಿಗಳನ್ನು ಆಕ್ರಮಿಸಿಕೊಂಡಿದ್ದಾರೆ. ಲೈನ್‌ ಆಫ್ ಆಕ್ಚುವಲ್‌  ಕಂಟ್ರೋಲ್‌ (ಎಲ್‌ಎಸಿ)ಯಲ್ಲಿ ಭಾರತವು ಮತ್ತಷ್ಟು ಪ್ರಬಲವಾಗಿದೆ.

ಕಷ್ಟಕರವೆಂದು ಪರಿಗಣಿಸಲಾಗಿರುವ ಸ್ಪ್ಯಾಂಗೂರ್‌ ಗ್ಯಾಪ್‌ ನಲ್ಲಿಯೂ ನಾವು ಬಲಿಷ್ಟರಾಗಿದ್ದೇವೆ ಎಂದು ಸೇನಾ ಮೂಲಗಳು ತಿಳಿಸಿವೆ. ಲಡಾಖ್‌ ಗಡಿಯಲ್ಲಿನ ಕೆಲವು ಶಿಖರಗಳನ್ನು ಚೀನ ತನ್ನದೆಂದು ಪ್ರತಿಪಾದಿಸುತ್ತಾ ಬಂದಿದೆ. ಪಾಂಗೊಂಗ್‌ ಸೋ ಸರೋವರದ ಸಂಪೂರ್ಣ ದಕ್ಷಿಣ ಭಾಗ ಮತ್ತು ಸ್ಪ್ಯಾಂಗೂರ್‌ ಗ್ಯಾಪ್‌ ಅನ್ನು ಆಕ್ರಮಿಸಿಕೊಳ್ಳಲು ಚೀನ ಬಯಸಿತ್ತು.

ಕ್ಯಾಮರಾ ಅಳವಡಿಸಿ, ನಿರ್ಧಾರ ಬದಲಿಸಿದ ಚೀನ
ಚೀನವು ಕ್ಯಾಮೆರಾಗಳು ಮತ್ತು ಕಣ್ಗಾವಲು ಸಾಧನಗಳನ್ನು ಪರ್ವತಗಳ ಮೇಲೆ ಸ್ಥಾಪಿಸಿದೆ ಎಂದು ಮಿಲಿಟರಿ ಹೇಳಿದೆ. ಈ ಮೂಲಕ ಅವರು ಭಾರತೀಯ ಸೈನಿಕರ ಚಲನವಲನಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಚೀನ ತನ್ನ ಹಿತ ಕಾಪಾಡಲು ಇಷ್ಟೆಲ್ಲ ತಂತ್ರಜ್ಞಾನಗಳನ್ನು ಅವಲಂಭಿಸಿದ್ದರೂ, ಭಾರತೀಯ ಸೈನಿಕರನ್ನು ಕಟ್ಟಿಹಾಕುವಲ್ಲಿ ಅವರು ವಿಫ‌ಲರಾಗಿದ್ದಾರೆ. ಭಾರತೀಯ ಸೈನಿಕರು ಪರ್ವತ ಪ್ರದೇಶಗಳಲ್ಲಿ ಹರಡಿಕೊಂಡಿದ್ದಾರೆ. ಭಾರತೀಯ ಸೇನೆ ಈ ಪ್ರದೇಶಗಳನ್ನು ವಶಪಡಸಿಕೊಂಡ ಬಳಿಕ ಚೀನ ತಾನು ಅಳವಡಿಸಿದ ಕೆಮರಾ ಮತ್ತು ಕಣ್ಗಾವಲು ಉಪಕರಣಗಳನ್ನು ತೆಗೆದುಹಾಕಿದೆ ಎಂದು ವಿಶ್ವಾಸನೀಯ ಮೂಲಗಳು ಖಚಿತಪಡಿಸಿದೆ.

Advertisement

ಚೀನದ ಆಕ್ರಮಣಗಳು ಮತ್ತು ಉದ್ವಿಗ್ನತೆಯ ಮಧ್ಯೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್‌ಎಸ್‌ಎ) ಅಜಿತ್‌ ದೋವಲ್‌ ಮಂಗಳವಾರ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಈ ಮಧ್ಯೆ ಲಡಾಖ್‌ ಗಡಿಯಲ್ಲಿ ಉದ್ವಿಗ್ನತೆಯ ಮಧ್ಯೆ ಭಾರತ-ಚೀನ ಸೇನಾಧಿಕಾರಿಗಳು ಸತತ ಎರಡನೇ ದಿನ ಭೇಟಿಯಾಗುತ್ತಿದ್ದಾರೆ. ಸುದ್ದಿ ಸಂಸ್ಥೆಯ ಪ್ರಕಾರ ಎರಡೂ ದೇಶಗಳ ಬ್ರಿಗೇಡ್‌ ಕಮಾಂಡರ್‌ ಮಟ್ಟದ ಅಧಿಕಾರಿಗಳು ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಚುಶುಲ್‌ ಸೆಕ್ಟರ್‌ನ ನಿಯಂತ್ರಣ ರೇಖೆಯಿಂದ 20 ಕಿ.ಮೀ ದೂರದಲ್ಲಿರುವ ಮೊಲ್ಡೊದಲ್ಲಿ ಸಭೆ ನಡೆಯುತ್ತಿದೆ.

ಆಗಸ್ಟ್‌ 29-30ರ ರಾತ್ರಿ ಸುಮಾರು 500 ಚೀನೀ ಸೈನಿಕರು ಬೆಟ್ಟವನ್ನು ಆಕ್ರಮಿಸಿಕೊಳ್ಳಲು ಪ್ರಯತ್ನಿಸಿದ್ದರು. ತನ್ನ ಪ್ರದೇಶದ ಬ್ಲ್ಯಾಕ್‌ ಟಾಪ್‌ ಹೆಸರಿನ ಪರ್ವತಕ್ಕೆ ಸರಿ ಸಮಾನಾಗಿರುವ ಭಾರತದ ಭೂಮಿಯನ್ನು ವಶಪಡಿಸಿಕೊಳ್ಳುವುದು ಚೀನದ ಉದ್ದೇಶವಾಗಿದೆ. ಚೀನದ ಈ ಆಕ್ರಮಣ ಸಾಧ್ಯವಾದರೆ ಚುಶುಲ್‌ನ ದೊಡ್ಡ ಪ್ರದೇಶದ ಮೇಲೆ ಬಲವಾದ ಹಿಡಿತ ಸಾಧಿಸಬಹುದು ಎಂಬುದು ಅದರ ದೂರಾಲೋಚನೆಯಾಗಿದೆ.

ಭಾರತೀಯ ಯೊಧರು 3 ಶಿಖರಗಳನ್ನು ರಕ್ಷಿಸುತ್ತಿದ್ದು, ಆ ಶಿಖರಗಳ ಕೆಳಗೆ ಅಂದರೆ ತಗ್ಗು ಪ್ರದೇಶಗಳಲ್ಲಿ ಚೀನದ ಸೈನಿಕರು ನಿಂತಿದ್ದಾರೆ.
ಕೈಲಾಶ್‌-ಮಾನಸರೋವರದ ಉದ್ದಕ್ಕೂ ಚೀನ ತನ್ನ ಕ್ಷಿಪಣಿಗಳನ್ನು ನಿಯೋಜಿಸಿದೆ ಎಂದು ಕೆಲವು ಸುದ್ದಿ ಸಂಸ್ಥೆ ವರದಿ ಮಾಡಿದೆ. ಚೀನದ ಸೇನೆಯು ಲಡಾಖ್‌ ಪಕ್ಕದ ಹೋಟನ್‌ ವಾಯುನೆಲೆಯಲ್ಲಿ ಜೆ -20 ಯುದ್ಧ ವಿಮಾನಗಳನ್ನು ನಿಯೋಜಿಸಿದೆ. ಕೈಲಾಶ್‌-ಮಾನಸರೋವರದ ದಡದಲ್ಲಿ ಕ್ಷಿಪಣಿಗಳನ್ನೂ ನಿಯೋಜಿಸಿದೆ ಎಂದು ತಿಳಿದು ಬಂದಿದೆ.

ಸೈನ್ಯ ಮತ್ತು ರಾಜತಾಂತ್ರಿಕ ಮಟ್ಟದಲ್ಲಿ ಹಲವಾರು ಸುತ್ತಿನ ಮಾತುಕತೆಗಳ ಹೊರತಾಗಿಯೂ ಚೀನ ಪೂರ್ವ ಲಡಾಕ್‌ನ ಫಿಂಗರ್‌ ಏರಿಯಾ, ಡೆಪ್ಸಾಂಗ್‌ ಮತ್ತು ಗೊಗ್ರಾ ಪ್ರದೇಶಗಳಿಂದ ಹಿಂದೆ ಸರಿಯುತ್ತಿಲ್ಲ. ಚೀನದ ಸೈನಿಕರು ಫಿಂಗರ್‌ ಪ್ರದೇಶದಲ್ಲಿ 3 ತಿಂಗಳಿನಿಂದ ಭೀಕರ ಚಳಿಯಲ್ಲಿ ಹೆಪ್ಪುಗಟ್ಟುತ್ತಿದ್ದಾರೆ. ಇಲ್ಲಿನ ಹವಾಮಾನ ಅವರಿಗೆ ಕಂಟಕವಾಗುತ್ತಿದ್ದರೂ ತನ್ನ ಹಳೆಯ ಚೇಷ್ಠೆಯನ್ನು ಮುಂದುವರಿಸಿದ್ದಾರೆ. ಈಗ ಅವರು ಬಂಕರ್‌ಗಳು ಮತ್ತು ತಾತ್ಕಾಲಿಕ ಆಶ್ರಯತಾಣಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.

ಜೂನ್‌ 15ರಂದು ಗಾಲ್ವಾನ್‌ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದರು. ಅಲ್ಲದೇ ಪ್ರತೀಕಾರವಾಗಿ ಭಾರತೀಯ ಸೇನೆ ಸುಮಾರು 50 ಮಂದಿ ಚೀನ ಯೋಧರನ್ನು ಹತ್ಯೆಗೈದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next