Advertisement
“ಕನ್ನಡವು ಕನ್ನಡವ ಕನ್ನಡಿಸುತ್ತಿರಬೇಕು’ ಎಂಬ ಬೇಂದ್ರೆಯವರ ಸಾಲಿನಂತೆ ಜರ್ಮನಿಯಲ್ಲಿರುವ ಹಲವು ಕನ್ನಡ ಮನಸ್ಸುಗಳನ್ನು ಒಂದುಗೂಡಿಸಿ ವಿದುಷಿ ನಂದಿನಿ ನಾರಾಯಣ ಅವರು ಆನ್‌ಲೈನ್ ವೇದಿಕೆಯಲ್ಲಿ ಏರ್ಪಡಿಸಿದ್ದ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಎಲ್ಲರ ಕವನಗಳನ್ನು ಆಲಿಸಿ ಮೆಚ್ಚುಗೆ ಸೂಚಿಸಿದ ರಾಮಚಂದ್ರಪ್ಪ ಅವರು, ಈ ಕಾರ್ಯಕ್ರಮದ ಭಾಗವಾಗುವುದು ನಿಜವಾಗಿಯೂ ಸಂತೋಷ ತಂದಿದೆ. ಇದೊಂದು ವಿಶಿಷ್ಟವಾದ ಸಂದರ್ಭ. “ಕನ್ನಡ ಕಾವ್ಯ ಕನ್ನಡಿ’ ಶೀರ್ಷಿಕೆಯ ಕಾರ್ಯಕ್ರಮ ಕಾವ್ಯದ ಕನ್ನಡಿಯೂ ಹೌದು, ಕವಿಯ ಕನ್ನಡಿಯೂ ಹೌದು ಎಂದರು.
Related Articles
Advertisement
ಕಾವ್ಯ ವಾಚನ
ಗೋಪಾಲ ಕೃಷ್ಣ ಅಡಿಗರ ನಿನಗೆ ನೀನೇ ಗೆಳೆಯ ಕವನವನ್ನು ಚಿನ್ಮಯಿ ಚಂದ್ರಶೇಖರ್ ಅವರು ಸುಶ್ರಾವ್ಯವಾಗಿ ಹಾಡುವುದರ ಮೂಲಕ ಚಾಲನೆ ನೀಡಿದರೆ, ಮನೋಜ್ ವಸಿಷ್ಠ ಅವರು ಹಾಡಿದ ಬರಗೂರರ ರಚನೆಯ ಗೋಧೂಳಿ ಹಾಡು ಎಲ್ಲರನ್ನು ಒಂದು ಕ್ಷಣ ಹಳ್ಳಿಗೆ ಕರೆದೊಯ್ದಿತ್ತು. ಮಮತಾ ಅರಸೀಕೆರೆಯವರು ಅಧ್ಯಕ್ಷರ ಪರಿಚಯ ಮಾಡಿಕೊಟ್ಟರೆ, ನಂದಿನಿ ನಾರಾಯಣ ಅವರು ಪ್ರವೀಣ್ ಡಿ. ರಾವ್ ಅವರನ್ನು ಪರಿಚಯಿಸಿ “ನಿನ್ನ ರಾಗಗಳ ಮಾಲೆಗೆ ಜಗದ ಒಡಲೇ ತಲ್ಲೀನವಾಗಿಹುದು’ ಎಂಬ ಕವನವನ್ನು ಅವರಿಗಾಗಿ ವಾಚಿಸಿದರು.
ಜರ್ಮನಿಯಲ್ಲಿರುವ ಕನ್ನಡಿಗರಷ್ಟೇ ಅಲ್ಲದೇ ಕವನವನ್ನು ವಾಚಿಸಲು ಕರ್ನಾಟಕದ ಹಲವಾರು ಮಂದಿ ಭಾಗಿಯಾಗಿದ್ದು , ಒಬ್ಬೊಬ್ಬರ ಅಭಿವ್ಯಕ್ತಿಯೂ ವಿಭಿನ್ನವಾಗಿತ್ತು. ರಾಣಿಬೆನ್ನೂರು ಹಾವೇರಿಯಿಂದ ಚಂ.ಸು. ಪಾಟಿಲ್ ಅವರು ಪಂಚಭೂತಗಳ ಬಗ್ಗೆ ಬರೆದ ಕ್ಷಮಯಾಧರಿತ್ರಿ ಎಂಬ ಕವನ, ಮಮತಾ ಅರಸೀಕೆರೆಯವರ ದೀಪ ಮತ್ತು ಹಣತೆ ಕವನವನ್ನು ವಾಚಿಸಿದರು.
ಬೆಂಗಳೂರಿನ ಶ್ರುತಿ ಬಿ.ಆರ್. ಅವರ ಎಲ್ಲರೂ ಇದ್ದು ಒಂಟಿಯಾಗುವ ಅಂತರ ಎಂಬ ಕವನ, ಗದಗದಿಂದ ಆರ್.ಕೆ. ಬಾಗವನ್ ಅವರ ಅಪ್ಪನ ಇಲ್ಲದಿರುವಿಕೆ ನೋವನ್ನು ವ್ಯಕ್ತಪಡಿಸುವ ಅಪ್ಪ ನೀ ಇಂದು ಇರಬೇಕಿತ್ತು ಎಂಬ ಅನುಭವದ ಕವನ, ಜರ್ಮನಿಯ ಫ್ರಾಂಕ್‌ಫರ್ಟ್ ನಿಂದ ಶೋಭಾ ಚೌಹಾನ್ ಅವರ ನನ್ನ ಕವನ ಭಾವ ಕವನವಾಗುವ ಸಾಧ್ಯತೆಗಳ ಬಗೆಗೆ ತಿಳಿಸಿದರೆ, ಶ್ರೀಲಕ್ಷ್ಮೀ ಬಾಲಸುಬ್ರಹ್ಮಣ್ಯಂ ಅವರ ಜೀವನವೇ ನಾಟಕವೋ ನಾಟಕವೇ ಜೀವನವೋ ಎಂಬ ಕವನ ನಾಟಕದೊಂದಿಗೆ ಜೀವನವನ್ನು ಹೋಲಿಸುತ್ತಾ ಸಾಗುತ್ತದೆ.
ಹ್ಯಾಂಬರ್ಗ್‌ನ ಹತ್ತಿ ಬೆಳಗಲ್ ನಾಗರಾಜ ಅವರ ಅನುಭಾವಿ ಪಯಣಿಗ ಕವನ ಡಿ.ವಿ.ಜಿ. ಯವರ ಹಳೆ ಬೇರು ಹೊಸ ಜಿಗುರು ಕೂಡಿರಲು ಮರ ಸೊಬಗು ಎಂಬ ಸಾಲನ್ನು ನೆನಪಿಸಿದರೆ, ಕಮಲಾಕ್ಷ ಎಚ್.ಎ. ಅವರ ಅಲ್ಪಮಾನರಾಗುವುದು ಬೇಡ ಎಂಬ ಕವನ ಕುವೆಂಪು ಅವರ ವಿಶ್ವಮಾನವ ಸಂದೇಶವನ್ನು ನೆನಪಿಸಿತು. ನೇತ್ರಾ ಸ್ಟುಡ್‌ಗಾರ್ಟ್ ಅವರ ನಾಡಿಗೆ ನಾಡಿಯೇ ಸಾಟಿ ಎಂಬ ಕವನ ಕನ್ನಡ ನಾಡಿನ ಮತ್ತು ಕನ್ನುಡಿಯ ಮೇಲಿನ ಪ್ರೀತಿ ವ್ಯಕ್ತಪಡಿಸಿದರೆ, ಬರ್ಲಿನ್‌ನ ನವ್ಯಾದರ್ಶನ್ ಅವರು ಹೂವು ಅರಳುವವು ಸೂರ್ಯನ ಕಡೆಗೆ ಎಂಬ ಹಾಡನ್ನು ಹಾಡಿ ಅನಂತರ ವಾಚಿಸಿದ ಅಜ್ಜಿಮನೆ ಕವನ ಅಜ್ಜಿಯ ಮೇಲಿನ ಪ್ರೀತಿ ಹಾಗೂ ಹೆಮ್ಮೆ ಗೌರವವನ್ನು ಪ್ರತಿನಿಧಿಸಿತು.
ಮ್ಯಾನ್ಹೆ çಮ್‌ನ ವಿದ್ಯಾಯೋಗೀಶ ಅವರ ಬಾಲ್ಯದ ಮೆಲುಕು ಕವನ ಪ್ರತಿಯೊಬ್ಬರಿಗೂ ಮತ್ತೂಮ್ಮೆ ಮಗುವಾಗಬೇಕೆನಿಸುವಂತೆ ಮಾಡಿತು. ಜತೆಗೆ ಉಲ್ಬ್ನ ಪೂರ್ಣಿಮಾ ಡಿ.ವಿ. ಅವರ ಮಾಯಾ ಪತಂಗ, ಧೀರಜ್ ಪಿ.ವಿ. ಗುಪ್ತ ಅವರ ನಿನ್ನ ಕವಿತೆ, ನೀ ಎಲ್ಲಿ ಅವಿತೆ ಕವನಗಳು ಕವಿಮನದ ಶಕ್ತಿ ಮತ್ತು ಸ್ಫೂರ್ತಿಗೆ ಕನ್ನಡಿ ಹಿಡಿದವು. ಕೆರ್ಪನ್‌ನ ಸಂತೋಷ್ ಶ್ರೀಧರ್ ಅವರು ಕವಿ ಸಿದ್ಧಲಿಂಗಯ್ಯನವರ ಗ್ರಾಮದೇವತೆ ಕವನ ವಾಚಿಸಿದರೆ, ಫ್ರಾಂಕ್‌ಫರ್ಟ್ ನ ದರ್ಶನ್ ಪ್ರಭುದೇವ್ ಅವರು ಮೂಡ್ನಾಕೂಡು ಚಿನ್ನಸ್ವಾಮಿಯವರ ನಾನೊಂದು ಮರವಾಗಿದ್ದರೆ ಎಂಬ ಕವನವನ್ನು ವಾಚಿಸಿದರೆ, ನಂದಿನಿ ನಾರಾಯಣ ಅವರು ನಾ ಏನೆಂದು ಹೆಸರಿಡಲಿ ನಿನಗೆ ಎಂಬ ಕವನವಾಚನ ಮಾಡುವುದರ ಮೂಲಕ ಕವನ ವಾಚನಗಳು ಮುಕ್ತಾಯವಾಯಿತು.
ಕರ್ನಾಟಕ ಮತ್ತು ಜರ್ಮನಿಯ ಕನ್ನಡಿಗರ ಕವಿಮನದ ಅಭಿವ್ಯಕ್ತಿಗೆ ರಂಗ ಮಂಥನ ಎಂಬ ವೇದಿಕೆ ನಿರ್ಮಿಸಿ ಪ್ರಸ್ತುತ ಜರ್ಮನಿಯ ಎಷ್‌ಬಾರ್ನ್ನಲ್ಲಿ ನೆಲೆಸಿರುವ ವಿದುಷಿ ನಂದಿನಿ ನಾರಾಯಣ್ ಅವರ ನೇತೃತ್ವ ಮಾರ್ಗದರ್ಶನದೊಂದಿಗೆ ಕಾರ್ಯಕ್ರಮ ಅಚ್ಚುಕಟ್ಟಾಗಿ ಮೂಡಿಬಂತು. ಕಾರ್ಯಕ್ರಮದ ನಿರ್ವಹಣೆಗೆ ಕಮಲಾಕ್ಷ ಎಚ್.ಎ. ಅವರು ಸಹಕರಿಸಿದರೆ ಸಂತೋಷ ಶ್ರೀಧರ್ ಅವರು ತಾಂತ್ರಿಕ ವಿಷಯಗಳನ್ನು ನೋಡಿಕೊಳ್ಳುವುದರ ಮೂಲಕ ಸಹಕರಿಸಿದರು.
ವರದಿ- ಶೋಭಾ ಚೌಹಾನ್, ಫ್ರಾಂಕ್‌ಫರ್ಟ್