Advertisement
ಪ್ರತೀ ದಿನ ಬೆಳಗ್ಗೆ ಎದ್ದು ಎರಡು ಲೋಟ ನೀರು ಗಟಗಟ ಕುಡಿದು, ಐದು ನಿಮಿಷದಲ್ಲಿ ತಿಂಡಿಯನ್ನು ತಿಂದು ಮುಗಿಸುವ ಶಾಸ್ತ್ರ ಮಾಡಿ ಆಫೀಸಿಗೆ ಹೊರಡೋದು ವಿದೇಶಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಬೆಳಗಿನ ದೃಶ್ಯ. ಇಡೀ ದಿನ ದಣಿವು ನೀಗಿಸಲು ನೀರನ್ನೋ, ತಂಪು ಪಾನೀಯಗಳನ್ನೋ ಗಂಟೆಗೊಮ್ಮೆ ಕುಡಿಯುತ್ತಲೇ ಇರುತ್ತೇವೆ. ಹಾಗೆಯೇ ಹಸಿವನ್ನು ನೀಗಿಸಲು ಏನಾದರೊಂದನ್ನು ತಿನ್ನುತ್ತಲೇ ಇರುತ್ತೇವೆ. ಕೆಲಸದ ದಿನಗಳಲ್ಲಿ ಬದುಕಲಷ್ಟೇ ತಿನ್ನುವ ಜನ ವಾರಾಂತ್ಯಗಳಲ್ಲಿ ಬದುಕಿದ್ದೇ ತಿನ್ನಲಿಕ್ಕೇನೋ ಎನ್ನುವಂತೆ ವರ್ತಿಸುತ್ತಾರೆ.
Related Articles
Advertisement
ಇನ್ನು ನರನಾಳಗಳಲ್ಲೇ ತೊಂದರೆಯಿದ್ದಾಗ ಅದನ್ನು ಸರಿಪಡಿಸೋದು ಹೇಗೆ ಎಂಬ ಪ್ರಶ್ನೆ ಬರುತ್ತದೆ. ಅದಕ್ಕೆ ಉತ್ತರ ಬಹಳ ವಿಚಿತ್ರವಾಗಿದೆ. ಇಲ್ಲಿ ಯಾವುದೇ ಶಸ್ತ್ರಚಿಕಿತ್ಸೆ ಮಾಡುವುದಿಲ್ಲ. ನಾವು ಸೇವಿಸುವ ಊಟದ ಸ್ಥಿರತೆಯನ್ನು ಬದಲಿಸುತ್ತೇವೆ. ಉದಾಹರಣೆಗೆ- ಯಾರಾದರೊಬ್ಬರು ನೀರು ಕುಡಿಯುವಾಗ ಪದೇಪದೇ ಕೆಮ್ಮುತ್ತಿದ್ದರೆ, ನೀರು ಅನ್ನನಾಳದ ಬದಲು ಶ್ವಾಸನಾಳಕ್ಕೆ ಹೋಗುತ್ತಿದೆ ಎಂದು ಅರ್ಥ. ಹಾಗಾಗಿ ನಾವು ಕುಡಿಯುವ ನೀರಿಗೆ ಒಂದು ಪುಡಿ (ಥಿಕ್ನರ್) ಯನ್ನು ಸೇರಿಸಿ, ನೀರನ್ನು ಸ್ವಲ್ಪ ಗಟ್ಟಿ ಮಾಡಿ ಕುಡಿಯಲು ಕೊಡುತ್ತೇವೆ. ಇದು ಅನ್ನನಾಳಕ್ಕೆ ಇಳಿಯುವುದು ನಿಧಾನವಾಗುವುದರಿಂದ ಕ್ರಮೇಣ ಸರಿಯಾದ ನಾಳದಲ್ಲಿ ಹೋಗಿ ಹೊಟ್ಟೆ ಸೇರುತ್ತದೆ.
ಮೊನ್ನೆ ನರ್ಸಿಂಗ್ ಹೋಮ್ ಒಂದರಲ್ಲಿ ಲೈಲಾ (ಹೆಸರು ಬದಲಿಸಿದೆ) ಎಂಬ 78 ವರ್ಷದವರೊಬ್ಬರನ್ನು ಭೇಟಿಯಾದೆ. ಅವರು ಊಟ ಮಾಡುವಾಗ, ನೀರು ಕುಡಿಯುವಾಗ ವಿಪರೀತ ಕೆಮ್ಮುತ್ತಿದ್ದರು ಎಂದು ನಾನು ಪರೀಕ್ಷೆ ಮಾಡಲು ಹೋಗಿದ್ದೆ. ಅವರಿಗೆ ಎದ್ದು ಮಾತಾಡಲಾಗದಿದ್ದರೂ ಸನ್ನೆ ಬಳಸಿ ತಮಗಿಷ್ಟವಾದ ಸಿಹಿ ತಿನಿಸುಗಳನ್ನು ತಿನ್ನಲು ಬಯಸಿದ್ದರು.
ಇನ್ನು ಮುಂದೆ ನೀವು ಇಂಥ ಆಹಾರ ಪದಾರ್ಥಗಳನ್ನು ತಿನ್ನಲಾಗದು, ದೇಹ ತಡೆಯುತ್ತಿಲ್ಲ ಎಂಬ ಕಟು ಸತ್ಯವನ್ನು ಅವರಿಗೆ ಹೇಳಲಾರಂಭಿಸಿದ್ದೇ ತಡ, ನನ್ನ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ಕೈಗೆ ಸಿಕ್ಕಿದ್ದನ್ನೆಲ್ಲ ಹಿಡಿದು ಬಿಸಾಡಲು ಮುಂದಾದರು. ಕೋಪ, ರೋಷ, ದುಃಖ ಇಮ್ಮಡಿಸಿ ಬಂದಿತ್ತು. ಮತ್ತೆರಡು ನಿಮಿಷ ಜೋರಾಗಿ ಅತ್ತರು. ಅನಂತರ ಸಮಾಧಾನ ಮಾಡಿಕೊಂಡು, ಒಂದು ಪುಸ್ತಕ ಹಾಗೂ ಪೆನ್ನು ಬಳಸಿ ಬರೆಯಲಾರಂಭಿಸಿದರು. ಅವರು ಬರೆದು ಹೇಳಿದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ. ಅದರಲ್ಲಿ ಅವರು ಹೇಳಿದರು, ನನಗೆ ಚಿಕ್ಕ ವಯಸ್ಸಿನಲ್ಲೇ ಡಯಾಬಿಟಿಸ್ ಬಂತು. ವೈದ್ಯರು ಸಿಹಿ ತಿನ್ನಬೇಡ ಎಂದರು. ಕೆಲವು ವರ್ಷಗಳು ಬಿಟ್ಟೆ. ನಾನು ಹಾಗೂ ಗಂಡ ಇಬ್ಬರೂ ನರ್ಸಿಂಗ್ ಹೋಮ್‌ಗೆ ಬಂದು ಸೇರಿದೆವು. ಕಳೆದ ವರ್ಷ ಕ್ರಿಸ್ಮಸ್ ವೇಳೆ ಗಂಡ ಪ್ರಾಣ ಬಿಟ್ಟರು. ಇನ್ನು ನಾನೊಬ್ಬಳೇ ಉಳಿದಿರುವುದು. ನನಗೆ ಸಿಹಿ ತಿನಿಸು ಎಂದರೆ ಇಷ್ಟ. ಅದರಲ್ಲಿ ಎಷ್ಟೋ ನೆನಪುಗಳಿವೆ. ನಾನು ಚಿಕ್ಕವಳಿದ್ದಾಗಿನಿಂದ ಅದನ್ನು ತಿನ್ನುತ್ತಾ ಕಂಡ ಕನಸುಗಳು ಹಾಗೇ ಇವೆ. ಇದನ್ನು ತಿಂದರೆ ಎಲ್ಲವನ್ನು ಮರೆತು ಆ ಕಂಡ ಕನಸುಗಳಲ್ಲಿ, ನೆನಪುಗಳಲ್ಲಿ ಮುಳುಗಿ ಹೋಗುತ್ತೇನೆ. ಬದುಕು ಸುಂದರ ಆಗ. ನೀನು ಅದನ್ನೇ ನಿಲ್ಲಿಸಿಬಿಡು ಎಂದರೆ ನನಗದು ಬೇಡ. ಅಷ್ಟಕ್ಕೂ ನಾನು ಯಾರಿಗಾಗಿ ಬದುಕಬೇಕು. ಸಿಹಿ ತಿಂದರೆ ಸಾವು ಬರುವುದಾದರೆ ಬರಲಿ ಬಿಡು, ನಾನದಕ್ಕೆ ಸಿದ್ಧವಾಗಿದ್ದೇನೆ. ಬಿಟ್ಟು ಬಿಡು ನನ್ನನ್ನು. ಹೀಗೆ ಹೇಳಿ ತಮಗೆ ಬೇಕಾದ್ದನ್ನು ಆರಾಮವಾಗಿ ತಿನ್ನಲಾರಂಭಿಸಿದರು.
ಇದಾಗಿ 5- 6 ದಿನಗಳ ಅನಂತರ ಅವರನ್ನು ಭೇಟಿಯಾಗಲು ಹೋಗಿದ್ದೆ. ಅವರ ರೂಮ್‌ನ ಮಂಚವನ್ನು ಬದಲಿಸಲಾಗುತ್ತಿತ್ತು. ಮೂಲೆಯಲ್ಲಿ ಅವರದೊಂದು ಚಿತ್ರಪಟ ತೂಗಾಡುತ್ತಿತ್ತು. ಮನಸ್ಸು ಬೇಸರ ಮತ್ತು ಖುಷಿಯನ್ನು ಒಟ್ಟಿಗೆ ಅನುಭವಿಸಿತ್ತು ಆ ಹೊತ್ತು.
ಸ್ಫೂರ್ತಿ,
ತಸ್ಮೇನಿಯಾ