Advertisement

ಯಾರು ಬೇಕಾದರೂ ಕತೆಗಾರ,  ವಿನ್ಯಾಸಗಾರರಾಗಬಹುದು: ನಾಗರಾಜ್‌ ವಸ್ತಾರೆ

10:28 PM Jun 19, 2021 | Team Udayavani |

 ದ. ಕ್ಯಾಲಿಫೋರ್ನಿಯಾ :ಬದುಕನ್ನು ಸಮಗ್ರವಾಗಿ, ವಿವರವಾಗಿ ಗಮನಿಸಿದರೆ ಯಾರೂ ಬೇಕಾದರೂ ಕತೆಗಾರರಾಗಬಹುದು ಅಥವಾ ವಿನ್ಯಾಸಗಾರರಾಗಬಹುದು ಎಂದು ಖ್ಯಾತ ಲೇಖಕ ನಾಗರಾಜ ವಸ್ತಾರೆ ಹೇಳಿದರು.

Advertisement

ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘ ನಿಮ್ಮಲ್ಲಿಗೆ ಕನ್ನಡ ಕೂಟ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಐ ಆ್ಯಮ್‌ ದಾಟ್‌- ನನ್ನ ಪ್ರಕಟನೆಯ ಕೆಲವು ಬಗೆ ಕುರಿತು ಮಾತನಾಡಿದರು.

ಬಿಳಿ ಹಾಳೆಯ ಮೇಲೆ ಒಂದು ಚುಕ್ಕಿಯನ್ನಿಟ್ಟರೆ ಅದು ಎರಡು ಸಾಧ್ಯತೆಯನ್ನು ಪಡೆಯುತ್ತದೆ. ಒಂದೋ ಅದು ಚುಕ್ಕಿ ಪದವಾಗಿ, ವಾಕ್ಯವಾಗಿ, ಕತೆ, ಕವನವಾಗುತ್ತದೆ. ಅದೇ ಇನ್ನೊಂದು ರೀತಿಯಲ್ಲಿ ಅದು ಗೆರೆಯಾಗಿ, ವಿನ್ಯಾಸವಾಗಿ, ಗೋಡೆ, ವಾಸ್ತು ಶಿಲ್ಪದ ರಚನೆಯಾಗುತ್ತದೆ. ಚುಕ್ಕಿಯಂತೆ ಒಂದೇ ಮೂಲ ಸೆಲೆಯಿಂದ ಹುಟ್ಟಿಕೊಂಡ ಎರಡು ಯೋಚನೆಗಳು ಒಂದಕ್ಕೊಂದು ಪೂರಕವಾಗಿರುತ್ತದೆ ಎಂದು ಅವರು ಹೇಳಿದರು.

ಒಂದು ಪದ್ಯದಲ್ಲಿ ಸಣ್ಣ ವಿಷಯ ಮತ್ತು ಹೇಳದೇ ಇರುವ ದೊಡ್ಡ ವಿಚಾರಗಳನ್ನು ಒಳಗೊಂಡಿರುತ್ತದೆ. ಎಲ್ಲಿ ನಮ್ಮ ಕೈ ಹೋಗುವುದೋ ಅಲ್ಲಿ ಮನಸ್ಸು ಹೋಗುತ್ತದೆ. ಮನಸ್ಸು ಹೋದಲ್ಲಿ ಭಾವ ಹುಟ್ಟಿಕೊಳ್ಳುತ್ತದೆ. ಭಾವ ರಸವಾಗಿ ಪರಿವರ್ತಿತವಾಗುತ್ತದೆ. ಅದುವೇ ನಮ್ಮ ಭಾವನೆಯ ಮೂರ್ತ ರೂಪವಾಗಿರುತ್ತದೆ. ಬದುಕಿಗೆ ರಸ ಎನ್ನುವುದು ಅತ್ಯಮೂಲ್ಯ ಗ್ರಾಸ ಎಂದರು.

ಪ್ರಕಟನೆ ಎಂದರೆ ಕಾಣುವುದು ಮತ್ತು ಕಾಣಿಸುವುದು. ವಿನ್ಯಾಸಕಾರರು ಗೆರೆಯ ರೂಪ ಕೊಡುತ್ತಾರೆ, ಲೇಖಕರು ಅಕ್ಷರದ ರೂಪ ಕೊಡುತ್ತಾರೆ. ವಿನ್ಯಾಸ ಎಂದರೆ ವಿಶಿಷ್ಟವಾಗಿ ಇಡುವುದು ಎಂದರ್ಥ. ಮಧುರೈ ದೇವಸ್ಥಾನದ ಪ್ರತಿಯೊಂದು ಶಿಲ್ಪದಲ್ಲೂ ಒಂದೊಂದು ಕತೆಯಿದೆ. ನೋಡುವ ಕಣ್ಣು ಹೇಗಿದೆ ಎನ್ನುವುದನ್ನು ಆಧರಿಸಿ ಕತೆ ಬೆಳೆಯುತ್ತ ಹೋಗುತ್ತದೆ ಎಂದು ತಿಳಿಸಿದರು.

Advertisement

ದೇವರು ಇರುವುದು ವಿವರಗಳಲ್ಲಿ. ಬದುಕನ್ನು ಗ್ರಹಿಸುವುದೇ ವಿವರಗಳಲ್ಲಿ. ಪ್ರಪಂಚವನ್ನು ನಾವು ಗ್ರಹಿಸುವುದೇ ಮೂರ್ತ ವಿವರಗಳಿಂದ. ಒಬ್ಬ ಕತೆಗಾರ, ಆರ್ಕಿಟೆಕ್ಟ್ ಇದನ್ನು ಮಾಡುತ್ತಾನೆ. ವಿವರಗಳು ಇಲ್ಲದೆ ಯಾವುದೇ ಸಾಹಿತ್ಯ ಕೃತಿಯಾಗಲಿ, ಸೌಪದ್ಯ ಕೃತಿಯಾಗಲಿ ನಡೆಯುವುದಿಲ್ಲ. ಕಾಲ ಬದಲಾಗುತ್ತದೆ, ಅದಕ್ಕೆ ತಕ್ಕಂತೆ ಋತು, ಬಣ್ಣ ಬದಲಾಗುತ್ತದೆ. ಮನುಷ್ಯರನ್ನು ಅದನ್ನು ತನ್ನೊಳಗೆ ಸೇರಿಸಿಕೊಳ್ಳಬೇಕು.ವಸ್ತುವನ್ನು ಪೂರ್ತಿಯಾಗಿ ನೋಡ ಬೇಕು ಅದರೊಂದಿಗೆ ಸೂಕ್ಷ್ಮತೆ ಯನ್ನು ಅರಿತಿರಬೇಕು. ಸ್ವರ್ಗದ ಕಲ್ಪನೆಯು ನಮ್ಮ ನೆಲದ ಮೇಲಿನ ವಸ್ತು ವಿಷಯ ಕಲ್ಪನೆಯನ್ನು ಹೊಂದಿದೆ. ಭೂಮಿಯೂ ಕೂಡ ಆಕಾಶಕಾಯ ಎಂದು ನಂಬಿದರೆ ಬದುಕು ಇನ್ನೊಂದು ಅರ್ಥವನ್ನು ಪಡೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಶ್ರೀಧರ್‌ ರಾಜಣ್ಣ, ರಾಜೇಶ್ವರಿ ರಾವ್‌, ಶ್ರೀನಿವಾಸ್‌ ಭಟ್‌ ಮತ್ತಿತರರು ಸಂವಾದದಲ್ಲಿ ಪಾಲ್ಗೊಂಡಿದ್ದರು. ಸಂಘದ ಉಪಾಧ್ಯಕ್ಷ ಉಮೇಶ್‌ ಸತ್ಯನಾರಾಯಣ ಅವರು ಅತಿಥಿಗಳನ್ನು ಪರಿಚಯಿಸಿದರು. ರೂಪಾ ಸುಭಾಶ್‌ ಕಾರ್ಯ ಕ್ರಮ ನಿರೂಪಿಸಿದರು, ಶಶಿ ಬಸವರಾಜ್‌ ವಂದಿಸಿ ದರು.

Advertisement

Udayavani is now on Telegram. Click here to join our channel and stay updated with the latest news.

Next