Advertisement

Desi Swara: ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ…

11:59 AM Jun 29, 2024 | Team Udayavani |

ಸೈಕಾಲಜಿ ಉಪನ್ಯಾಸಕರೊಬ್ಬರು “ಒತ್ತಡ ನಿವಾರಿಸುವುದು ಹೇಗೆ’ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳುವ ಪ್ರಯತ್ನ ಮಾಡುತ್ತಿದ್ದರು. ಕೈಯಲ್ಲಿ ಹಿಡಿದಿದ್ದ ಗಾಜಿನ ಲೋಟದಲ್ಲಿ ಇರುವ ನೀರನ್ನು ತೋರಿಸುತ್ತಾ ಅವರು ಮಾತನಾಡಲು ಪ್ರಾರಂಭಿಸಿದಾಗ ಎಲ್ಲರೂ, “ಓ ಇವರು ಮತ್ತದೇ ಪ್ರಶ್ನೆ, ಈ ಲೋಟ ಅರ್ಧ ತುಂಬಿದೆಯೋ ಅರ್ಧ ಖಾಲಿಯೋ?’ ಎಂದು ಕೇಳುತ್ತಾರೆಂದು ನಿರೀಕ್ಷಿಸಲಾರಂಭಿಸಿದರು. ಆದರೆ ಉಪನ್ಯಾಸಕರು ಕೇಳಿದ ಪ್ರಶ್ನೆ ಬೇರೆಯೇ ಆಗಿತ್ತು. ‘ಈ ಲೋಟ ಎಷ್ಟು ಭಾರವಿದೆ ಹೇಳಬಲ್ಲಿರಾ’? ವಿದ್ಯಾರ್ಥಿಗಳೆಲ್ಲ ಉತ್ತರವನ್ನು ಕೂಗಿ ಹೇಳಲು ಪ್ರಾರಂಭಿಸಿದರು. 100 ಮಿ.ಲೀ., 200 ಮಿ.ಲೀ. ಹೀಗೆ ಸಾಗಿತ್ತು ಉತ್ತರಗಳ ಸಂಖ್ಯೆ.

Advertisement

ಒಂದೆರಡು ನಿಮಿಷ ಮೌನದ ಅನಂತರ, ‘ನನ್ನ – ಪ್ರಕಾರ ನೀರಿನ ಲೋಟದ ಭಾರ ಈಗ ಅಷ್ಟು ದೊಡ್ಡ ವಿಷಯವಲ್ಲ, ಈ ಲೋಟವನ್ನು ನಾನೆಷ್ಟು ಹೊತ್ತು ಹಿಡಿದಿರುತ್ತೇನೆ ಎನ್ನುವುದರ ಮೇಲೆ ಭಾರ ನಿರ್ಧರಿತವಾಗುತ್ತದೆ. ನಾನು ಇದನ್ನು ಒಂದೆರಡು ನಿಮಿಷ ಹಿಡಿದರೆ ಇದು ಹಗುರವಾದ ಲೋಟವೇ ಸರಿ. ನಾನು ಈ ನೀರಿನ ಲೋಟವನ್ನು 1 ಗಂಟೆ ಹಿಡಿಯಬೇಕೆಂದರೆ ನನ್ನ ಕೈ ನೋಯಲು ಆರಂಭಿಸುತ್ತದೆ. ಇದೇ ಲೋಟವನ್ನು ಒಂದಿಡೀ ದಿನ ಹೀಗೆ ಹಿಡಿದಿರಬೇಕು ಎಂದಾದರೆ ಕೈಗೆ ಜೋಮು ಹಿಡಿದು, ನೋವಿನಿಂದ ಕೊನೆಗೆ ಈ ಲೋಟವನ್ನು ಹಿಡಿಯಲಾಗದೆ ಕೆಳಗೆ ಬಿಟ್ಟು ಬಿಡಬಹುದೇನೋ. ಪ್ರತೀಬಾರಿಯೂ ಲೋಟದ ಭಾರವೇನೂ ಬದಲಾಗುವುದಿಲ್ಲ. ಆದರೆ ಅದನ್ನು ಹೆಚ್ಚು ಹೊತ್ತು ಹಿಡಿದಷ್ಟೂ ಅದು ಹೆಚ್ಚು ಭಾರವಾಗುತ್ತಾ ಹೋಗುತ್ತದೆ’ ಎಂದರು.

ವಿದ್ಯಾರ್ಥಿಗಳೆಲ್ಲಾ ಹೌದು ಎನ್ನುತ್ತಾ ತಲೆಯಾಡಿಸಲು ಆರಂಭಿಸಿದಾಗ, ‘ನಮ್ಮ ಒತ್ತಡಗಳು, ಯೋಚನೆಗಳು ಕೂಡ ಒಂದು ಲೋಟ ನೀರಿನಂತೆ. ಅವುಗಳ ಬಗ್ಗೆ ಕೆಲಹೊತ್ತು ಮಾತ್ರ ಯೋಚಿಸಿದಾಗ ಏನೂ ಆಗುವುದಿಲ್ಲ. ಹೆಚ್ಚು ಹೊತ್ತು ಯೋಚಿಸಿದರೆ ನೋವು ಪ್ರಾರಂಭವಾಗುತ್ತದೆ. ದಿನವೆಲ್ಲ ಒತ್ತಡದಲ್ಲಿದ್ದರೆ ನಮ್ಮ ಮೆದುಳು ಕೂಡ ಅತಿಯಾದ ನೋವಿನಿಂದ, ಒದ್ದಾಡುತ್ತಾ ಕೊನೆಗೆ ಅದರ ಮೇಲೂ ಗಮನವೇ ಇಲ್ಲದಂತಾಗುತ್ತದೆ. ಅವತ್ತು ಬಂದ ನಮ್ಮ ಮನಸ್ಸಿನಿಂದ ದೂರ ಮಾಡುವವರೆಗೂ ನಾವು ಮತ್ತೇನನ್ನೂ ಮಾಡಲಾಗುವುದಿಲ್ಲ’ ಎಂದು ಉಪನ್ಯಾಸಕರು ತಿಳಿಸಿದರು.

ಈ ಸಂಗತಿ ಚಿಕ್ಕದಾದರೂ ಅದು ನೀಡುವ ಸಂದೇಶ ಎಷ್ಟು ದೊಡ್ಡದಲ್ಲವೇ? ನಮ್ಮ ದೈನಂದಿನ ಜೀವನದಲ್ಲಿ ಅನೇಕ ರೀತಿಯ ಒತ್ತಡ, ಖಿನ್ನತೆ, ಯೋಚನೆಗಳು ನಮ್ಮನ್ನು ಕಾಡುತ್ತವೆ. ಅವುಗಳನ್ನು ನಾವು ಎಷ್ಟು ಹಚ್ಚಿಕೊಳ್ಳುತ್ತೇವೋ ಅಷ್ಟೇ ಅವುಗಳು ನಮ್ಮನ್ನು ಆವರಿಸಿಕೊಳ್ಳುತ್ತಾ ಹೋಗುತ್ತವೆ. ಅದೆಂಥ ಒತ್ತಡವೇ ಇರಲಿ, ಅದನ್ನು ಪಕ್ಕಕ್ಕಿಟ್ಟು ಆ ದಿನದ ಮಟ್ಟಿಗೆ ಏನು ಆಗಬೇಕು, ಅದರ ಕಡೆಗೆ ನಮ್ಮ ಗಮನವನ್ನು ಹರಿಸಿದಾಗ, ಆ ಒತ್ತಡಕ್ಕೂ ಕೂಡ ವಿರಾಮ ಸಿಕ್ಕಂತಾಗಿ ಮನಸ್ಸಿಗೆ ಒಂದಿಷ್ಟು ಉಸಿರಾಡಲು ಅವಕಾಶವಾಗುತ್ತದೆ. ಹಗುರಾದ ಮನಸ್ಸಿನಿಂದ ಯೋಚಿಸಿದಾಗ ಮಾತ್ರ ನಮಗೆ ಏನಾದರೂ ಪರಿಹಾರ ಸಿಗಲು ಸಾಧ್ಯ. ಆದ್ದರಿಂದಲೇ ಜೀವನದಲ್ಲಿ ಆದಷ್ಟು ಸಮಾಧಾನದಿಂದಿರಿ. ಸಮಸ್ಯೆಗೆ ಸಮಯವೇ ಪರಿಹಾರ ನೀಡುತ್ತಾ ಹೋಗುತ್ತದೆ. ಅದನ್ನು ಅತಿಯಾಗಿ ಯೋಚಿಸುವುದರಿಂದ ಯಾವ ಒಳಿತೂ ಆಗುವುದಿಲ್ಲ, ಆರೋಗ್ಯವೂ ಹಾಳು. ಅದೇನೇ ಆಗಲಿ ಒತ್ತಡಗಳು ಜೀವನದಲ್ಲಿ ಇದ್ದೇ ಇರುತ್ತವೆ. ಆದರೆ ಅವುಗಳನ್ನು ಅದೆಷ್ಟು ಹಚ್ಚಿಕೊಳ್ಳಬೇಕು, ಎಷ್ಟು ಮರೆತು ಮುನ್ನಡೆಯಬೇಕು ಎಂಬ ನಿರ್ಧಾರ ಮಾಡುವ ಜಾಣೆ ನಮ್ಮಲ್ಲಿರಬೇಕು.

Advertisement

Udayavani is now on Telegram. Click here to join our channel and stay updated with the latest news.

Next