ಕತಾರ್: ಭಾರತೀಯ ಸಾಂಸ್ಕೃತಿಕ ಕೇಂದ್ರದ ಸಕ್ರಿಯ ಸಂಸ್ಥೆಗಳಲ್ಲಿ ಒಂದಾದ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಕರ್ನಾಟಕ ಸಂಘ ಕತಾರ್ ಸ್ಥಾಪನೆಯಾಗಿ 25ನೇ ವಸಂತಕ್ಕೆ ಕಾಲಿಡುತ್ತಿದೆ. ಈ ಸಂದರ್ಭದಲ್ಲಿ ಸಂಘದ 2024-25ನೇ ಸಾಲಿನ ಆಡಳಿತ ಮಂಡಳಿಯೂ ಅಸ್ತಿತ್ವಕ್ಕೆ ಬಂದಿದೆ. ಮೇ 3, ರಂದು ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಸಂಘದ ಸದಸ್ಯರ ಉಪಸ್ಥಿತಿಯಲ್ಲಿ ಕರ್ನಾಟಕ ಸಂಘ ಕತಾರ್ನ 14ನೇ ಅಧ್ಯಕ್ಷರಾಗಿ ಮೂಡಂಬೈಲು ರವಿ ಶೆಟ್ಟಿ ಅವರನ್ನು ಸಾಂಸ್ಕೃತಿಕ ಸಂಕೇತವಾದ ಮೈಸೂರು ಪೇಟ ತೊಡಿಸುವ ಮೂಲಕ ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ರವಿ ಶೆಟ್ಟಿ ಅವರು ಮೂಲತಃ ಕರ್ನಾಟಕದ ಮಂಗಳೂರಿನವರು. ಅವರು ಕತಾರ್ನಲ್ಲಿರುವ ಭಾರತೀಯ ಸಮುದಾಯದ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರು. ವಿವಿಧ ಕರ್ನಾಟಕ ಮೂಲದ ಸಂಘಗಳ ಸ್ಥಾಪಕ ಸದಸ್ಯರಾಗಿ, ಸಮಿತಿ ಸದಸ್ಯರಾಗಿ, ಸ್ಥಾಪಕ ಅಧ್ಯಕ್ಷರಾಗಿ, ಭಾರತೀಯ ರಾಯಭಾರಿ ಕೇಂದ್ರದ ಅಡಿಯಲ್ಲಿರುವ ಐಸಿಬಿಎಫ್, ಐಬಿಪಿಎನ್ ಸಂಸ್ಥೆಗಳ ಸಲಹಾ ಸಮಿತಿಯ ಸದಸ್ಯರಾಗಿದ್ದ ಇವರು ಸಮುದಾಯ ಸೇವೆ ಹಾಗೂ ನಾಯಕತ್ವದಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ರವಿ ಶೆಟ್ಟಿಯವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಬೆಳ್ಳಿ ಹಬ್ಬದ ಮೈಲಿಗಲ್ಲು ಆಚರಣೆಯ ಸಂದರ್ಭದಲ್ಲಿ ತಮ್ಮ ಮೇಲೆ ವಿಶ್ವಾಸವಿಟ್ಟು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲು ಜವಾಬ್ದಾರಿಯನ್ನು ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
2024-25ನೇ ಸಾಲಿನ ಸಮಿತಿಗೆ ಆಯ್ಕೆಯಾದ ಇತರ ಸದಸ್ಯರು: ರಮೇಶ ಕೆ.ಎಸ್. (ಉಪಾಧ್ಯಕ್ಷರು), ಕುಮಾರಸ್ವಾಮಿ (ಪ್ರಧಾನ ಕಾರ್ಯದರ್ಶಿ), ಪ್ರದೀಪ್ ಕುಮಾರ್ ದಿಲೀಪ್ (ಖಜಾಂಚಿ), ದಿನೇಶ್ ಗೌಡ (ಸಾರ್ವಜನಿಕ ಸಂಪರ್ಕ ಹಾಗೂ ಸಮಾಜ ಹಿತೈಷಿ ಕಾರ್ಯದರ್ಶಿ), ಸೌಮ್ಯ ಕೆ.ಟಿ. (ಸಾಂಸ್ಕೃತಿಕ ಕಾರ್ಯದರ್ಶಿ), ಭುವನ ಸೂರಜ್ (ಮಹಿಳಾ ಮತ್ತು ಮಕ್ಕಳ ಕಾರ್ಯದರ್ಶಿ), ಭೀಮಪ್ಪಾ ಖೋತ (ಕನ್ನಡ ಅಭಿವೃದ್ಧಿ ಕಾರ್ಯದರ್ಶಿ), ಸಫìರಾಜ್ ಜಫರ್ ತಾಂಬಿಟ್ಕರ್ (ಕ್ರೀಡಾ ಕಾರ್ಯದರ್ಶಿ), ಎಲ್.ಜಿ.ಪಾಟೀಲ್ (ಜಂಟಿ ಕಾರ್ಯದರ್ಶಿ), ಶಶಿಧರ ಎಚ್. ಬಿ. (ಪರಿಸರ ಹಾಗೂ ವ್ಯವಸ್ಥಾಪಕ ಕಾರ್ಯದರ್ಶಿ), ಶ್ರೀಧರ ಚಂದ್ರ (ಮಾಧ್ಯಮ ಹಾಗೂ ಸದಸ್ಯತ್ವ ಸಂಚಾಲಕರು), ಭಾವನ ನವೀನ್ (ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ) ಮತ್ತು ಸಲಹಾ ಸಮಿತಿಯ ಅಧ್ಯಕ್ಷರಾಗಿ ಮಹೇಶ್ ಗೌಡ (ನಿಕಟಪೂರ್ವ ಅಧ್ಯಕ್ಷರು).
ಬೆಳ್ಳಿ ಹಬ್ಬ ಆಚರಣೆಗೆ ಸಿದ್ಧತೆ ನಡೆಸುತ್ತಿರುವ ನೂತನ ಆಡಳಿತ ಮಂಡಳಿಯು, ಪರಿಸರ ಸಂರಕ್ಷಣೆ, ರಕ್ತದಾನ ಶಿಬಿರ, ಮಹಿಳಾ ಮತ್ತು ಮಕ್ಕಳ ಪ್ರತಿಭಾನ್ವೇಷಣೆ, ಕರ್ನಾಟಕ ರಾಜ್ಯೋತ್ಸವ, ವಿವಿಧ ಕ್ರೀಡಾ ಪಂದ್ಯಾವಳಿಗಳು, ಹಬ್ಬಗಳ ಆಚರಣೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವೈದ್ಯಕೀಯ ಶಿಬಿರ, ಕವಿಗೋಷ್ಠಿ ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ತಮ್ಮ ಕಾರ್ಯಕಾರಿ ಅವಧಿಯಲ್ಲಿ ವಿಜೃಂಭಣೆಯಿಂದ ಹಮ್ಮಿಕೊಳ್ಳಲು ತಯಾರಿ ನಡೆಸುತ್ತಿದೆ.
ನಿಕಟಪೂರ್ವ ಅಧ್ಯಕ್ಷರಾದ ಮಹೇಶ್ ಗೌಡ ಅವರು 2022-23ನೇ ಅವಧಿಯ ಸಮಿತಿಯ ಆಡಳಿತದಲ್ಲಿ ನೀಡಿದ ಬೆಂಬಲಕ್ಕಾಗಿ ಸಂಘದ ಎಲ್ಲ ಸದಸ್ಯರಿಗೆ, ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ರವಿ ಶೆಟ್ಟಿ ನೇತೃತ್ವದ ಹೊಸ ಸಮಿತಿಗೆ ತಮ್ಮ ಬೆಂಬಲವನ್ನು ಸೂಚಿಸಿದರು. ಸಲಹಾ ಸಮಿತಿಯ ಸದಸ್ಯರುಗಳಾದ ವಿ.ಎಸ್.ಮನ್ನಂಗಿ, ಅರುಣ್ ಕುಮಾರ್, ದೀಪಕ್ ಶೆಟ್ಟಿ, ಡಾ| ಸಂಜಯ ಕುದರಿ, ಭಾರತೀಯ ಸಾಂಸ್ಕೃತಿಕ ಕೇಂದ್ರದ ಉಪಾಧ್ಯಕ್ಷರಾದ ಸುಬ್ರಹ್ಮಣ್ಯ ಹೆಬ್ಟಾಗಿಲು ಮತ್ತು ಭಾರತೀಯ ಸಾಂಸ್ಕೃತಿಕ ಕೇಂದ್ರದ ಮಾಜಿ ಅಧ್ಯಕ್ಷರಾದ ಮಿಲನ್ ಅರುಣ್ ಅವರು ಮಾತನಾಡಿ ನೂತನ ಸಮಿತಿಗೆ ಶುಭ ಹಾರೈಸಿದರು.