Advertisement

Desi Swara: ಸೆಲ್ಫಿಗಳ ಹಿಂದಿನ ಮಾನಸಿಕತೆ

11:26 AM May 29, 2024 | Nagendra Trasi |

ಸಾಮಾನ್ಯ ಜನರಿರಲಿ, ಸದಾ ಕಾಲ ಕೆಮರಾದ ಮುಂದೇ ಜೀವನ ಸಾಗಿಸುವ ಪ್ರಸಿದ್ಧ ತಾರೆಯರಿಗೂ ಸೆಲ್ಫಿಗಳ ಮೇಲೆ ವ್ಯಾಮೋಹ. ಕೆಲವರಿಗೆ ಸೆಲ್ಫಿಗಳಿಲ್ಲದ ಬದುಕಿಲ್ಲ. ಮತ್ತೆ ಕೆಲವರಿಗೆ ಅವುಗಳನ್ನು ಕಂಡರಾಗದು. ಫೋನ್‌ಗಳ ಮುಂದೆ, ಕೆಮರಾದ ಮುಂದೆ ನಿಂತು ಮುಖ ತಿರುವಿ ಫೋಟೋಗಳಿಗೆ ಪೋಸ್‌ ಕೊಡುವ ಜನರ ಹಿಂದೆ ಇರುವ ಮಾನಸಿಕ ಸ್ಥಿತಿ ಏನು?

Advertisement

ಜನವರಿ 2024ರ ವರದಿಗಳ ಪ್ರಕಾರ 5.4 ಬಿಲಿಯನ್‌ ಸಾಮಾಜಿಕ ತಾಣಗಳ ಅಕೌಂಟ್‌ಗಳು ಬಳಕೆಯಲ್ಲಿವೆ. ಫೇಸ್‌ಬುಕ್‌ ಅಗ್ರಸ್ಥಾನದಲ್ಲಿದ್ದು 2.9 ಬಿಲಿಯನ್‌ ಜನರು ಅದನ್ನು ಉಪಯೋಗಿಸುತ್ತಾರೆ, ಅದರ ನಿಕಟವರ್ತಿ ವಾಟ್ಸ್‌ಆ್ಯಪ್‌ 2 ಬಿಲಿಯನ್‌ ಜನರ ಬಳಕೆಯಲ್ಲಿದೆ. ಫೇಸ್‌ಬುಕ್‌ ಮೆಸೆಂಜರ್‌ ಅನ್ನು 2.1 ಬಿಲಿಯನ್‌ ಜನರು ಉಪಯೋಗಿಸಿದರೆ, ವಿ ಚಾಟ್‌ನ್ನು 1.2 ಬಿಲಿಯನ್‌ ಜನರು ಬಳಸುತ್ತಾರೆ. ಹೀಗೆ ಈ ಪಟ್ಟಿ ಬೆಳೆಯುತ್ತಾ ಹೋಗಿದೆ. ಒಬ್ಬನೇ ವ್ಯಕ್ತಿಗೆ/ಸಂಸ್ಥೆಗೆ ಹಲವು ತಾಣಗಳ ಅಕೌಂಟ್‌ ಇರಬಹುದು.

ಇವರಲ್ಲಿ ಬಹುತೇಕ ಮಂದಿ ಸೆಲ್ಫಿಗಳ ಪ್ರೇಮಿಗಳು. ಹೀಗೆಂದ ಮೇಲೆ ಸೋಶಿಯಲ್‌ ಮೀಡಿಯಾಗಳಲ್ಲಿನ ಸೆಲ್ಫಿಗಳಿಗೆ ಕೊರತೆಯಿರಲು ಸಾಧ್ಯವೇ?

ಸೆಲ್ಫಿಗಳ ಸೈಕಾಲಜಿ
ಸೆಲ್ಫಿಗಳ ಹಿಂದಿರುವ ಮಾನಸಿಕ ಸ್ಥಿತಿಯನ್ನು ಮಾನಸಿಕ ತಜ್ಞರು ಮೂರು ಭಾಗಗಳಾಗಿ ನೋಡುತ್ತಾರೆ.
1. ತಮ್ಮತನವನ್ನು ವಿಜೃಂಭಿಸಿ ನೋಡಿಕೊಳ್ಳುವ ಮನುಷ್ಯನ ದೌರ್ಬಲ್ಯ ಅಥವಾ ಆಸೆ. ಇದು ಅವನ ವೈಯಕ್ತಿಕವಾಗಿ ಮಾತ್ರ ಕೇಂದ್ರೀಕೃತವಾಗಿರುವ ದೃಷ್ಟಿಕೋನವನ್ನು ಸೂಚಿಸುವಂತದ್ದು. ಸೆಲ್ಫಿಗಳನ್ನು ತೆಗೆದುಕೊಳ್ಳುವ ಜನರಿಗೆ ತಮ್ಮನ್ನು ತಾವು ಮೆರೆಸಿಕೊಳ್ಳುವ ಮಾನಸಿಕ ಅಗತ್ಯಗಳಿರುತ್ತವೆ.

2. ಥಟ್‌ ಅಂತ ದುಡುಕುವ ಸ್ವಭಾವ. ಇವರಲ್ಲಿ ಇನ್ನೊಬ್ಬರನ್ನು ಅರ್ಥಮಾಡಿಕೊಳ್ಳುವ ಸ್ವಭಾವದ ಲೋಪವಿರುವುದು. ಇವರಲ್ಲಿ ನೀತಿಯುತ ನಡೆವಳಿಕೆಗಳೂ ಕಡಿಮೆ ಇದೆ ಎನ್ನುತ್ತಾರೆ.

Advertisement

3. ತಮ್ಮ ದೇಹವನ್ನು ಅದರ ಲೈಂಗಿಕ ಮೌಲ್ಯಕ್ಕನುಸಾರವಾಗಿ ಅಳೆಯುವ ಗುಣ. ಇವರಲ್ಲಿ ತಮ್ಮ ದೇಹವನ್ನು ಆತ್ಮದ ಹೊರತಾಗಿ ಒಂದು ಸಾಧನವನ್ನಾಗಿ ನೋಡುವ ಗುಣಗಳಿರುತ್ತವೆ. ಇದೇ ಕಾರಣಕ್ಕೆ ಇತರರ ಮೌಲ್ಯವನ್ನು ಕೂಡ ಇದೇ ಆಧಾರದ ಮೆಲೆ ನೋಡುವ ಗುಣವನ್ನು ಹೊಂದಿರುತ್ತಾರೆ. ಸಮಯ ಸಿಕ್ಕಾಗಲೆಲ್ಲ ನಾನು ನಿನಗಿಂತ ಉತ್ತಮ ಎಂದು ಸಾಧಿಸಿ ತೋರಿಸುವ ಅಥವಾ ತಾನು ಮಹಾನ್‌ ಎಂದು ತನಗೆ ತಾನು ಭರವಸೆ ಕೊಟ್ಟು ಕೊಳ್ಳುವ ಪ್ರವೃತ್ತಿಯಲ್ಲಿ ತೊಡಗಿರುವಂತ ಜನ ಅನ್ನುವುದು ಇವರ ಅಂಬೋಣ.

18-40 ವರ್ಷದ ಜನರನ್ನು ಸಂಶೋಧನೆಗೆ ಒಳಪಡಿಸಿ ಅವರು ಸೆಲ್ಫಿಗಳನ್ನು ತೆಗೆದುಕೊಳ್ಳಲು ಬಳಸಿದ ಸಮಯ, ಪಟ್ಟ ಶ್ರಮ ಅದರ ಅನಂತರ ಅದನ್ನು ಎಡಿಟ್‌ ಮಾಡಲು, ಕ್ರಾಪ್‌ ಮಾಡಲು, ರಿ ಟಚ್‌ ಮಾಡಲು ಪಟ್ಟ ಪ್ರಯತ್ನ ಮತ್ತು ಅದನ್ನು ಸಾಮಾಜಿಕ ಸಮೂಹ ಮಧ್ಯಮಗಳಲ್ಲಿ ಪೋಸ್ಟ್‌ ಮಾಡಲು ಪಟ್ಟ ಪ್ರಯತ್ನದ ಆಧಾರದ ಮೇಲೆ ಅವರು ಮೇಲಿನ ಫ‌ಲಿತಾಂಶವನ್ನು ಪಡೆದಿದ್ದಾರೆ.

ಮೇಲಿನ ವಿಶ್ಲೇಷಣೆಯನ್ನು ವಿರೋಧಿಸುವ ಇನ್ನೊಂದು ಬಣದ ವಾದ ಹೀಗಿದೆ.
ತಮ್ಮತನವನ್ನು ಮೆರೆದುಕೊಳ್ಳುವ ಗುಣ ಮನುಷ್ಯನಲ್ಲಿರುವ ಮೂಲಭೂತ ಗುಣ. ಚೆನ್ನಾಗಿ ಕಾಣಬೇಕೆನ್ನುವ ಅಭಿಲಾಷೆ ಕೂಡ ಅಷ್ಟೇ ಹಳೆಯದು. ಹಾಗಾಗಿ ನಾರ್ಸಿಸಂ ಮನುಷ್ಯನ ಸಹಜ ಗುಣವೇ. ಅದಕ್ಕೆ ಸೆಲ್ಫಿಗಳು ಒಂದು ಬಗೆಯ ಅಭಿವ್ಯಕ್ತಿ ಮೂಲವಾಗಿವೆ. ಇದರಲ್ಲಿ ಕರಾಳತೆ ಎಲ್ಲಿಂದ ಬರುತ್ತದೆ? ಎನ್ನುವುದು ಇವರ ಪ್ರಶ್ನೆ.

ಯಾವುದನ್ನಾದರೂ ನಿಯಂತ್ರಣದಲ್ಲಿಡಬೇಕೆಂದಾಗ ಜನರು ಆ ಕೆಲಸಕ್ಕೆ ಒಂದಷ್ಟು ಕಳಂಕವನ್ನು ಹಚ್ಚುವ ಮನೋಧರ್ಮವನ್ನು ಇವರು ಟೀಕಿಸುತ್ತಾರೆ. ಅವರನ್ನು ಹಿಂಜರಿಸಲು ಹೊಸ ಪ್ರಯೋಗಗಳಿಗೆ ಇವರು ಕರೆ ಕೊಟ್ಟಿದ್ದಾರೆ.

ಸೆಲ್ಫಿ ದುರಂತಗಳು
ಸೆಲ್ಫಿಗಳನ್ನು ತೆಗೆದುಕೊಳ್ಳುವ ಭರದಲ್ಲಿ ಅನೇಕ ಅನಾಹುತಗಳನ್ನು ಮಾಡಿಕೊಂಡಿರುವ ಜನರಿದ್ದಾರೆ. ಕಾರನ್ನು ಚಲಿಸುತ್ತಾ ಸೆಲ್ಫಿಗಳನ್ನು ತೆಗೆದುಕೊಳ್ಳಲು ಹೋಗಿ ಲಾರಿಗೆ ಗುದ್ದಿಕೊಂಡು ಆ ಬೆಂಕಿಯಲ್ಲಿ ಬೆಂದು ಹೋದ ಮಹಿಳೆಯೋರ್ವಳು ದುರಂತವಾದ ಘಟನೆ 2014ರಲ್ಲಿ ನಡೆಯಿತು. 2017ರಲ್ಲಿ ಅಮೆರಿಕ ಒಂದರಲ್ಲೇ 33,000 ಜನರು ಒಂದಿಲ್ಲೊಂದು ರೀತಿಯ ಅವಘಡಗಳಿಗೆ ಒಳಪಟ್ಟರು. 2014ನ್ನು ಸೆಲ್ಫಿಗಳ ವರ್ಷವೆಂದು ಕರೆಯಲಾಗಿದೆ. ಈ ವರ್ಷದಲ್ಲಿ ಶಾರ್ಕ್‌ನಿಂದ ಸತ್ತವರಿಗಿಂತ ಹೆಚ್ಚು ಮಂದಿ ಸೆಲ್ಫಿ ದುರಂತಗಳಲ್ಲಿ ಮಡಿದರು. ಭಾರತದಲ್ಲಿ 2014ರಲ್ಲಿ ಒಟ್ಟು 19 ಜನರು ಮೃತಪಟ್ಟಿದ್ದರು.

2015ರಲ್ಲಿ 27 ಜನ ಸೆಲ್ಫಿಗಳ ಭರದಲ್ಲಿ ಜೀವ ಕಳೆದುಕೊಂಡರು. ಗಮನಿಸಬೇಕಾದ ವಿಚಾರವೆಂದರೆ ಇದರಲ್ಲಿ ಅರ್ಧಕ್ಕಿಂತ ಹೆಚ್ಚು ಮರಣ ಸಂಭವಿಸಿದ್ದು ಭಾರತದಲ್ಲಿ. ಒಂದು ಮಾಧ್ಯಮದ 2014ರಿಂದ 2016ರ ಆಗಸ್ಟ್‌ ವರೆಗಿನ ಹಲವು ವರದಿಗಳ ಪ್ರಕಾರ ಒಟ್ಟು 54 ಮಂದಿ ಮೃತ ಪಟ್ಟಿದ್ದಾರೆ.

ಸೆಲ್ಫಿ ಕಡ್ಡಿಯ ಬಳಕೆ ಮತ್ತು ಇನ್ನಷ್ಟು ಕಾಳಜಿಗಳು
ಸೆಲ್ಫಿಗಳನ್ನು ತೆಗೆದುಕೊಳ್ಳಲು ಬಳಸುವ ಸೆಲ್ಫಿ ಸ್ಟಿಕ್‌ಗಳು ಬಂದ ಮೇಲಂತೂ ಜಗತ್ತಿನ ಹಲವು ಮ್ಯೂಸಿಯಂ, ಆರ್ಟ್‌ ಗ್ಯಾಲರಿಗಳು, ಡಿಸ್ನಿಯ ಪಾರ್ಕ್‌ಗಳು, ಹಲವು ದುರ್ಗಮ ಪ್ರದೇಶಗಳ ಪ್ರವಾಸ ತಾಣಗಳಲ್ಲಿ ಇವುಗಳನ್ನು ನಿಷೇಧಿಸಲಾಗಿದೆ.

ಸೆಲ್ಫಿಗಳ ಮೋಹದಲ್ಲಿ ಹಿಂದಕ್ಕೆ ನಡೆಯುತ್ತಲೋ, ಕಡ್ಡಿಯನ್ನು ಚಾಚಿ ಹಿಡಿದು ಸುತ್ತಲಿನ ವಸ್ತುಗಳಿಗೆ ತರಬಹುದಾದ ಧಕ್ಕೆಯ ಬಗ್ಗೆ ಹಲವು ತಾಣಗಳಲ್ಲಿ ಆತಂಕಗಳಿವೆ. ಸೆಲ್ಫಿಗಳನ್ನು ನಾರ್ಸಿಸಂನ ಜತೆ ನೋಡುವ ಜನ ಇದನ್ನು ನಾರ್ಸಿಸ್ಟಿಕ್‌ ಎಂದಲೂ ಕರೆದಿದ್ದಾರೆ!

ಸೆಲ್ಫಿಗಳು ತಂದಿರುವ ಸಾಮಾಜಿಕ ಬದಲಾವಣೆಗಳು ನಾಚಿಕೆಯಿಂದ, ದುಗುಡಗಳಿಂದ, ಸಂಕೋಚಗಳಿಂದ ಭಾರವಾಗಿದ್ದ ಯುವಜನತೆ ಸೆಲ್ಫಿಗಳ ಮೂಲಕ ಖಾಲಿ ಕ್ಯಾನ್ವಾಸಿನ ತುಂಬ ತಮ್ಮ ಬದುಕಿನ ಚಿತ್ರಗಳನ್ನು ಬರೀ ಕ್ಲಿಕ್ಕಿಸಿಕೊಳ್ಳುತ್ತಿಲ್ಲ, ಬದಲಾಗಿ ಜಗತ್ತಿನ ಎಲ್ಲ ಮೂಲೆಗಳಿಗೆ ಅವನ್ನು ಸ್ವಂತ ತಾವೇ ಪೋಸ್ಟ್‌ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಅವರ ಸಂಕೋಚಗಳೆಲ್ಲ ಪಲಾಯನಗೈದವೇ? ಆಥವಾ ಅವರ ಈ ಯೌವನದ ಕಾಲದ ದುಗುಡಗಳು ಸೆಲ್ಫಿಗಳ ಮೂಲಕ ಬಿಡುಗಡೆ ಹೊಂದಿ ಪ್ರಂಪಂಚ ಪರ್ಯಟನೆಗೆ ಹೊರಟವೇ?

ಹರೆಯದ ಜಂಜಾಟಗಳಿಗೆ ಸಾಮಾಜಿಕ ತಾಣಗಳು ಒಂದು ರೀತಿಯಲ್ಲಿ ಸಹಾಯಕಾರಿಯಾಗಿವೆ, ಯುವಜನತೆ, ಸಂಕೋಚಗಳನ್ನು ಕಳೆದು ತಮ್ಮನ್ನು ತಾವೇ ವ್ಯಕ್ತಪಡಿಸಿಕೊಳ್ಳುತ್ತಿದ್ದಾರೆ. ಅವರ ಮಾನಸಿಕ ಸ್ಥಿತಿಯ ಅರಿವು ಮೊದಲಿಗಿಂತಲೂ ಹೆಚ್ಚು ಅಭಿವ್ಯಕ್ತವಾಗಿರುವ ಕಾಲ ಘಟ್ಟವಿದು. ಮಾನಸಿಕವಾಗಿ ಹೇಳಬೇಕೆಂದರೆ, ಕಾಲ ಬದಲಾಗಿದ್ದರೂ ಸ್ಥಿತಿ ಬದಲಾಗಿಲ್ಲ. ಯುವಜನರು ಸೆಲ್ಫಿಗಳಿಲ್ಲದೆ ಬದುಕಿಲ್ಲವೆಂಬ ಪರಿಸ್ಥಿತಿಯನ್ನು ತಲುಪಿದ್ದಾರೆ. ಅವಳ ಬಳಿ 5,000 ಸೆಲ್ಫಿಗಳಿವೆ, ನನ್ನ ಬಳಿ 500ರೂ. ಇಲ್ಲ ಎನ್ನುವ ಸ್ಪರ್ಧೆ ಅಲ್ಲಿಯೂ ಬೆಳೆಯುತ್ತಿದೆ.

ಸಾಮಾಜಿಕ ತಾಣಗಳ ಪೈಪೋಟಿ ವೈಯಕ್ತಿಕ ಬದುಕಿಗೂ ಹರಡಿದೆ. ಸಾರ್ಥಕತೆ, ದುಗುಡಗಳು, ಪೈಪೋಟಿ, ಹೆಚ್ಚು ಜನರಿಂದ ಅಂಗೀಕೃತಗೊಳ್ಳುವ ತವಕ, ಇನ್ನೊಬ್ಬರ ಮೇಲಿನ ಈರ್ಷ್ಯೆ, ಸ್ಪರ್ಧೆಗಳು ಹೊಸ ಆಯಾಮವನ್ನು ಪಡೆದುಕೊಂಡಿವೆ. ಚಿಂತಿಸಬೇಕಾದ ಮೂರನೆಯ ವಿಷಯವೆಂದರೆ, ಈ ಮಾಧ್ಯಮಗಳಲ್ಲಿ ಜನರು ವ್ಯಯಿಸುತ್ತಿರುವ ಕಾಲ.

ಅಲ್ಪ ಸ್ವಲ್ಪವಾದರೆ ಅಡ್ಡಿಯಿಲ್ಲ, ಆದರೆ ವಿದ್ಯಾರ್ಥಿಯಾಗಿ ಕಲಿಯುವ ಸಮಯದಲ್ಲಿ ಹೆಚ್ಚೆಚ್ಚು ಸಮಯವನ್ನು ವೃಥಾ ಕಳೆದಲ್ಲಿ ಅವರ ಗುರಿಗಳೇ ಅವರಿಗೆ ಮಸುಕಾಗಿ ಬಿಡುವುದು ಅಪಾಯಕಾರಿಯಾಗಬಲ್ಲದು. ಸೆಲ್ಫಿಗಳು ಒಂದೆಡೆ ತರುವ ಆತ್ಮತೃಪ್ತಿ ಮಿತಿಮೀರಿದ ಆಕಾಂಕ್ಷೆಗಳಿಂದ ಮಸುಕಾದಲ್ಲಿ ಆತೃಪ್ತಿಯಾಗಿ ಮಾರ್ಪಡಬಲ್ಲದು. ಮರಣಗಳು, ಅಪಘಾತಗಳ ಸಂಖ್ಯೆಯನ್ನು ಗಮನಿಸಿದರೆ ಸೆಲ್ಫಿಗಳನ್ನು ತೆಗೆದುಕೊಳ್ಳುವ ಜನರು ಹುಂಬರೆಂದು ನಂಬುವ ಇತರರ ದೃಷ್ಟಿಕೋನಕ್ಕೆ ಮೊನಚು ದೊರೆಯುತ್ತದೆ.

ಸೆಲ್ಫಿಗಳ ಮಿತಿ
ಸಾಮಾಜಿಕ ತಾಣಗಳಿರುವುದು ಜನರನ್ನು ಒಂದುಗೂಡಿಸಲು. ಸೆಲ್ಫಿಗಳು ಈ ಸಾಮಾಜಿಕ ತಾಣಗಳಿಗೆ ದೃಶ್ಯ ಮಾಧ್ಯಮವನ್ನು (ವಿಷುಯಲ್‌ ಮೋಡ್‌) ಕಲ್ಪಿಸುತ್ತವೆ. ನೋಡಿ ಇದು ನಾನು…ಎಂದು ಡಣಾ ಡಾಳಾಗಿ ಹೇಳುವ ಸೆಲ್ಫಿಗಳು ಒಂದರ್ಥಕ್ಕೆ ನಿಜವಾದ ನೈಜ ಚಿತ್ರಣವೇ ಆಗಬೇಕಂತಲೂ ಇಲ್ಲ.”ಪರ್ಫೆಕ್ಟ್’ ಅನ್ನುವ ಗುಣ ಮಟ್ಟಕ್ಕಿಂತ ಕಡಿಮೆಯ ಚಿತ್ರಗಳನ್ನು ಹಲವರು ಪೋಸ್ಟ್‌ ಮಾಡುವುದೇ ಇಲ್ಲ. ಮತ್ತೆ ಕೆಲವರು ಮೇಕಪ್‌ ಮಾಡಿಕೊಳ್ಳುವುದೇ ಸೆಲ್ಫಿಗಳಿಗಾಗಿ.

ಅದಾದ ಅನಂತರ ಆ ಚಿತ್ರಗಳನ್ನು ಎಡಿಟ್‌ ಮಾಡಿ, ಕ್ರಾಪ್‌ ಮಾಡಿ, ಟಚ್‌ ಕೊಟ್ಟು ಇವನ್ನು ಪೋಸ್ಟ್‌ ಮಾಡಿ ಅವುಗಳ ಬಗೆಗಿನ ಪ್ರತಿಕ್ರಿಯೆಗಳನ್ನು ಕಾತುರದಿಂದ ನಿರೀಕ್ಷಿಸುತ್ತಾರೆ. ಈಗೆಲ್ಲ ಫೋಟೋ ಫಿನಿಷ್‌ ಮೇಕಪ್‌ಗ್ಳು ಬರುತ್ತಿರುವುದೇ ಈ ಕಾರಣಕ್ಕೆ. ತಮ್ಮ ಮನಸ್ಸಿನ ವಿಚಿತ್ರ ದಾಹದ ಉಡುಪುಗಳನ್ನು ಖರೀದಿಸಿ, ಉಟ್ಟು, ಸೆಲ್ಫಿಗಳನ್ನು ತೆಗೆದುಕೊಂಡು ಪೋಸ್ಟ್‌ ಮಾಡಿದರೂ, ಸಮಾಜದಲ್ಲಿ ಅವುಗಳನ್ನು ತೊಟ್ಟು ಬದುಕುವ ಬದುಕನ್ನು ಅವರು ಬದುಕದೇ ಇರಬಹುದು. ಅವರ ತಾರಾ ಬದುಕಿನ ಕಲ್ಪನೆಗಳು, ಆಸೆಗಳು ಇವುಗಳ ಮೂಲಕ ಹೊರಹೊಮ್ಮಬಹುದು. ತಮ್ಮ ಘನತೆಯನ್ನು ಏರಿಸಿಕೊಳ್ಳಲಂತಲೇ ಸೆಲ್ಫಿಗಳನ್ನು ಪೋಸ್ಟ್‌ ಮಾಡುವವರು ಬಹಳಷ್ಟು. ಇದೀಗ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಬಳಸಿ ಹಲವಾರು ಅವತಾರಗಳನ್ನು ಜನರು ಎತ್ತುತ್ತಿದ್ದಾರೆ, ತಾವು ಯಾರು ಎನ್ನುವುದನ್ನು ಸಾಬೀತುಪಡಿಸಲೆಂದೇ ಇರುವ ಸೆಲ್ಫಿಗಳನ್ನು ಇನ್ನೊಬ್ಬರ ಸಹಾಯವಿಲ್ಲದೆ ತೆಗೆದುಕೊಳ್ಳುವ ಕಾರಣ ಒಮ್ಮೊಮ್ಮೆ ಜನರ ಗುರುತಿನ ಜತೆಗೆ ಅವರ ಒಳಗಿನ ವ್ಯಕ್ತಿಯ ಗುರುತನ್ನು ಕೂಡ ಸೆಲ್ಫಿಗಳು ಒದಗಿಸಿಬಿಡುತ್ತವೆ.

ಪ್ರತೀ ಲೈಕ್‌ಗಳಿಗೆ ಇನ್ನೊಂದು ಲೈಕ್‌ನ್ನು ಬೇಡುವ ಮಾನಸಿಕ ಸ್ಥಿತಿಯ ಚಕ್ಕರಿನಲ್ಲೂ ಯುವಜನತೆಯನ್ನು ಇದು ಸಿಕ್ಕಿಸುತ್ತಾ ನಡೆದಿದೆ. ಇದೊಂದು ಅಭಿವ್ಯಕ್ತಿ ಮಾಧ್ಯಮ ಹೇಗೋ ಹಾಗೆಯೇ ಸೆಲ್ಫಿಗಳ ಹುಚ್ಚನ್ನು ಹದ್ದು ಬಸ್ತಿನಲ್ಲಿಟ್ಟುಕೊಳ್ಳುವುದು ಕೂಡ ಅತೀಮುಖ್ಯ. ಇಲ್ಲದಿದ್ದಲ್ಲಿ ಜೀವನದ ಹಲವು ದುರಂತಗಳಿಗೆ, ಹಲವರ ನಿಂದನೆಗಳಿಗೆ, ಡಿಸ್ಲೈಕಿಗೆ ಕೂಡ ಜನರನ್ನು ಇವು ಸಿಕ್ಕಿಸಬಲ್ಲವು.

ಸೆಲ್ಫಿಗಳ ಹಿಂದಿರುವ ಮನೋಧರ್ಮ ಆತ್ಮತೃಪ್ತಿ ಎಂದರೆ ಸುಳ್ಳಾಗಲಾರದು. ದೈನಂದಿನ ಬದುಕಿನ ಎಲ್ಲ ಆಗು ಹೋಗುಗಳನ್ನು ಕ್ಲಿಕ್ಕಿಸಿ ಸಾಮಾಜಿಕ ತಾಣಗಳಿಗೆ ಲಗತ್ತಿಸಿ ನಾಲ್ಕು ಜನರು ಹೆಬ್ಬೆರಳೆತ್ತಿದರೆ ಮೂಡುವ ಧನ್ಯತಾ ಭಾವ. ಎಲ್ಲಕ್ಕಿಂತ ಹೆಚ್ಚಾಗಿ ಮನೆಯವರನ್ನು ಹೊರತುಪಡಿಸಿ, ಬೇರೆಯವರು ಭೇಷ್‌ ಎಂದಾರೆಯೇ ಎಂಬ ಕುತೂಹಲದ ತಣಿಕೆ. ಜನರಿಂದ ಸಿಗುವ ಅಂಗೀಕಾರದ ತೃಪ್ತಿ. ಹಲವರ ಗಮನವನ್ನು ಸೆಳೆದ ಸಾರ್ಥಕತೆ. ಆದರೆ ಇದನ್ನು ನಿಯಮಗಳ ಮೂಲಕ ಹದ್ದು ಬಸ್ತಿನಲ್ಲಿಡಬೇಕಾದ ಅಗತ್ಯ ಬಿದ್ದಿರುವ ಕಾಲಕ್ಕೆ ಇವುಗಳ ಅತೀಬಳಕೆ ದುರಂತಗಳಿಗೆ ಎಡೆಮಾಡಿಕೊಟ್ಟಿರುವುದು ಕೂಡ ನಿಜ. ಇದನ್ನು ಸೆಲ್ಫಿ ಪ್ರೇಮಿಗಳು ಅರಿತು ನಡೆದಲ್ಲಿ ಎಲ್ಲರಿಗೂ ಒಳಿತು.

ಡಾ| ಪ್ರೇಮಲತಾ ಬಿ., ಲಿಂಕನ್‌

Advertisement

Udayavani is now on Telegram. Click here to join our channel and stay updated with the latest news.

Next