Advertisement

Desi Swara: ಬುಚ್ಚಿ ನೀಡಿದ ಭರವಸೆಯ ಬೆಳಕು

01:12 PM Apr 27, 2024 | Team Udayavani |

ಗೋಡೆಗೆ ನೇತು ಹಾಕಿದ್ದ ಗಡಿಯಾರ ಸದ್ದು ಮಾಡಿದಾಗ ತಲೆ ಎತ್ತಿ ನೋಡಿದ ಪಂಚಮಿ ಅಯ್ಯೋ, ಇಷ್ಟು ಬೇಗ ಸಂಜೆ ಆರು ಗಂಟೆ ಆಗಿ ಹೋಯ್ತಾ? ರವಿವಾರ ಮುಗಿದೇ ಹೋಯಿತೇ? ಅಯ್ಯೋ, ನಾಳೆಯಿಂದ ಮತ್ತದೇ ಜಾತ್ರೆಯಂತಹ ಊರು, ಅದೇ ಕೆಲಸ, ಅದೇ ಇಡ್ಲಿ ಸಾಂಬಾರು, ಎಂದು ಗೊಣಗುತ್ತಾ ಓದುತ್ತಿದ್ದ ಪುಸ್ತಕವನ್ನು ಮುಚ್ಚಿಟ್ಟು ಗೇಟಿನ ಕಡೆ ತನ್ನ ಕಣ್ಣು ಹಾಯಿಸಿದಳು. ಸೀತೆಯ ಕುತ್ತಿಗೆಗೆ ಕಟ್ಟಿದ್ದ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡು ಪಂಚಮಿಯ ಅಜ್ಜಿ ಬುಚ್ಚಿ ಗೇಟು ತೆರೆದುಕೊಂಡು ಬರುವುದು ಕಾಣಿಸಿತು.

Advertisement

ಏನೇ ಬುಚ್ಚಿ, ಸಿಕ್ಲಾ ಕೊನೆಗೂ? ಯಾರ ಗದ್ದೇಲಿ ಮೇಯ್ತಾ ಇದ್ದಳು ? ಎಂದು ಪಂಚಮಿ ಕೇಳಿದ್ದಕ್ಕೆ ಇನ್ನೇನು ಮಾಮೂಲಿ ಗಿರಿಜಮ್ಮನ ಗದ್ದೇಲಿ ಎಂದು ಬುಚ್ಚಿ ತನ್ನ ಬೊಚ್ಚು ಬಾಯಿಯಿಂದ ನಕ್ಕಳು. ಕೊಟ್ಟಿಗೆಯಲ್ಲಿ ಸೀತೆಯನ್ನು ಕಟ್ಟುತ್ತಿದ್ದ ಬುಚ್ಚಿಗೆ “ಬುಚ್ಚಿ ನಿಂಗೆ ಮದುವೆ ಆದಾಗ ಎಷ್ಟು ವಯಸ್ಸಾಗಿತ್ತೇ? ಎಂದು ಪಂಚಮಿ ಕೇಳಿದಳು.

ಬೇರೆ ಕೆಲಸ ಇಲ್ವಾ ನಿಂಗೆ? ಬಂದಾಗೆಲ್ಲ ಅದೇ ಕಥೆ ಕೇಳ್ತೀಯಲ್ಲಾ ಎಂದು ಹುಸಿ ಮುನಿಸಿ ತೋರಿಸಿದಳು ಬುಚ್ಚಿ. ಮತ್ತೊಂದು ಸಾರಿ ಹೇಳೇ, ನೀನೇನು ಸವೆದು ಹೋಗಲ್ಲ ಎಂದು ರೇಗಿದಳು ಪಂಚಮಿ. ಹದಿನಾರೋ, ಹದಿನೇಳ್ಳೋ ಆಗಿತ್ತು ಕಣೆ ಅಷ್ಟೇ, ಸರೀನಾ ಎಂದಳು ಬುಚ್ಚಿ.

ಮುಂದೇನಾಯ್ತು ಹೇಳೇ ಎಂದು ಕಾಡಿಸಿದಳು ಪಂಚಮಿ. ಮುಂದೇನು? ಬದುಕು ಶುರುವಾಗುವಷ್ಟರಲ್ಲಿ ನನ್ನನ್ನು ಒಬ್ಬಂಟಿಯಾಗಿ ಬಿಟ್ಟು ಹೋದರು ಅಷ್ಟೇ ಎಂದು ತಣ್ಣಗೆ ಹೇಳಿ ಸುಮ್ಮನಾದಳು. ಪಂಚಮಿಗೆ ಛೆ!, ತಮಾಷೆ ಮಾಡಲಿಕ್ಕೆ ಹೋಗಿ, ಬುಚ್ಚಿಗೆ ಬೇಜಾರು ಮಾಡಿಬಿಟ್ಟೆನಾ? ಎಂದು ಅನಿಸಿತು. ಕೂಡಲೇ ಬುಚ್ಚಿ, ನೀನು ಕವಿತೆ ಬರೆಯಲು ಶುರು ಮಾಡಿದ್ದು ಹೇಗೆ? ಏನು ಸ್ಫೂರ್ತಿ ? ಎಂದು ಮಾತು ಬದಲಾಯಿಸಿದಳು.

ಹೃದಯಾಘಾತವಾಗಿ ನಿಮ್ಮ ಅಜ್ಜ ತೀರಿಹೋದ ಮೇಲೆ, ತಲೆಕೂದಲು ತೆಗಿಸಿ, ತಿಳಿ ಕೆಂಪು ಸೀರೆ ಉಡಿಸಿ ಇನ್ನು ಮೇಲೆ ನೀನು ಹೀಗೆ ಇರಬೇಕು ಎಂದಾಗ ಯಾಕೆ ಎಂದೇ ತಿಳಿಯಲಿಲ್ಲ. ಸ್ವಲ್ಪ ದಿನಗಳ ಅನಂತರ ಅಲ್ಲಿಂದ ವಾಪಸು ಅಪ್ಪನ ಮನೆಗೆ ಬಂದೆ. ಇಡೀ ಹಳ್ಳಿಯಲ್ಲಿ ಎಸೆಸೆಲ್ಸಿ ಓದಿದ ಮೊದಲ ಹುಡುಗಿಯಾಗಿದ್ದೆ, ಓದುವ ಹುಚ್ಚು ಬೇರೆ, ಗ್ರಂಥಾಲಯದಲ್ಲಿ ಸಿಕ್ಕ ಸಿಕ್ಕ ಪುಸ್ತಕಗಳನ್ನೆಲ್ಲ ಓದುತ್ತಿದ್ದ ಗ ನಾನೇಕೆ ಬರೆಯಬಾರದು ಎಂದು ಕವನ ಹಾಗೂ ಕಥೆಗಳನ್ನು ಬರೆಯಲಾರಂಭಿಸಿದೆ. ಅಲ್ಲಿಂದ ಈ ಬರಹದ ಪಯಣ ಶುರುವಾಯಿತು ನೋಡು, ನನ್ನ ತಮ್ಮ ಕೋದಂಡ ನನಗೆ ಓದಲು ಹುರಿದುಂಬಿಸಿ, ಕೆಂಪು ಸೀರೆಯನ್ನು ಉಡದಂತೆ, ತಲೆ ಕೂದಲನ್ನು ಮತ್ತೆ ಬಿಡುವಂತೆ ಹಠ ಹಿಡಿದು ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದ, ಅವನ ಬೆಂಬಲದಿಂದ ಕನ್ನಡದಲ್ಲಿ ಎಂಎ ಮಾಡಿ ಮುಗಿಸುವಷ್ಟರಲ್ಲಿ ಹತ್ತಾರು ಕವನ ಸಂಕಲನಗಳು ಬಿಡುಗಡೆಯಾಗಿತ್ತು.

Advertisement

ಅವಳ ಕಥೆ ಕೇಳುತ್ತಿದ್ದ ಪಂಚಮಿ ಅಲ್ಲಾ, ಬುಚ್ಚಿ ಇಷ್ಟೆಲ್ಲ ಫೇಮಸ್‌ ಆಗಿದ್ದಿ, ನಿನಗೆ ಸಿಗದ ಪ್ರಶಸ್ತಿಗಳೇ ಇಲ್ಲಾ, ಜಮ್‌ ಅಂತ ಸಿಟಿಯಲ್ಲಿ ಇರೋದು ಬಿಟ್ಟು, ಈ ಕೊಟ್ಟಿಗೇಲಿ ಇದ್ದಿಯಲ್ಲೇ, ಬಾ ನನ್ನ ಜತೆ ಎಂದು ಕಿಚಾಯಿಸುವ ಹಾಗೆ ಕೇಳಿದಳು.
ಅದಕ್ಕೆ ಬುಚ್ಚಿ ಹೌದು ನೀನು ಹೇಳಿದ್ದು ಸರಿ, ಸಿಟಿಯಲ್ಲಿನ ಜೀವನ ಜಮ್‌ ಅಂತಾನೆ ಇರೋದು, ಆದರೆ ಬರೆಯಲು ಸ್ಫೂರ್ತಿ ಕೊಟ್ಟ ಈ ಹಳ್ಳಿಯ ಪರಿಸರ ಸಿಗುವುದೇ ನಿಮ್ಮ ಸಿಟಿಯ ಧಾವಂತದ ಬದುಕಿನಲ್ಲಿ? ನಾಳೆಯ ಚಿಂತೆಯಿಲ್ಲ, ನನಗನಿಸಿದ್ದು ಮಾಡುವ ಸ್ವಾತಂತ್ರ ಇದೆ, ಜಗಮಗಿಸುವ ನಿಮ್ಮ ಸಿಟಿ ಚಂದಾನೇ, ಆದರೆ ನನ್ನ ಬದುಕಿನ ಶೈಲಿಗಲ್ಲ ಬಿಡು ಎಂದು ಬುಚ್ಚಿ ಹೇಳಿದಳು. ಅದಕ್ಕೆ ಪಂಚಮಿ ಅದು ಸರಿ ಅನ್ನು, ಕೆಲಸದಲ್ಲಿ ಬದುಕಲ್ಲಿ ಸಂತೃಪ್ತಿ ಹೇಗೆ ಸಿಗುತ್ತೆ ಬುಚ್ಚಿ? ಎಂದು ಕೇಳಿದಳು.

ಬುಚ್ಚಿ ನಿನ್ನದೇ ಉದಾಹರಣೆ ತೆಗೊ, ನೀನು ಓದಿದ್ದಕ್ಕೂ ಮಾಡುವ ಕೆಲಸಕ್ಕೂ ಸಂಬಂಧ ಇದೆಯೇ, ಊರಿಗೆ ಬರುವಾಗಿನ ನಿನ್ನ ಹುಮ್ಮಸ್ಸು ಹೋಗುವಾಗ ಸಂಕಟಕ್ಕೆ ಬದಲಾಗಿರುತ್ತದೆ, ಯಾಕೆ? ನಿನ್ನೊಳೊಗಿನ ಆ ಮನಸ್ಸನ್ನು ಪ್ರಶ್ನಿಸಿ ನೋಡು ಸಂತೃಪ್ತಿ, ಆತ್ಮವಿಶ್ವಾಸ ಹೆಚ್ಚಿಸುವ ಕೆಲಸ ಯಾವುದು? ನಿನ್ನಲಿರುವ ಕೌಶಲಗಳೇನು? ದೌರ್ಬಲ್ಯಗಳೇನು? ಎಂಬ ಪ್ರಶ್ನೆಗಳಿಗೆ ಉತ್ತರ ಕಂಡುಕೊಂಡರೆ ಸಾಗುವ ಮಾರ್ಗ ಕಾಣಿಸಲು ಶುರು ಮಾಡುತ್ತದೆ, ನಿಮಗೆ ಏನನ್ನು ಓದಬೇಕೆನ್ನುವ ಆಯ್ಕೆ, ಸ್ವಾತಂತ್ರ್ಯ ಇದೆ, ಸಂಗಾತಿಯನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯ ಇದೆ, ಆದರೆ ಆ ಸ್ವಾತಂತ್ರ್ಯದಲ್ಲಿ ಸ್ವಾವಲಂಬಿತನವಿಲ್ಲ, ಹೊರಗಿನ ಪ್ರಪಂಚದ ಆಡಂಬರದ ಸೆಳೆತ, ಹೆಚ್ಚಿಗೆ ಸಿಗುವ ಸಂಬಳದ ಮೇಲಿನ ಆಸೆಯಿಂದ ಬದುಕಲ್ಲಿ ಬರುವ ಸವಾಲನ್ನು ಎದುರಿಸಿದೇ ಶರಣಾಗತರಾಗಿ ಬಿಡುತ್ತಿದ್ದಿರೀ ಎಂದು ಹೇಳಿ ದೇವರ ದೀಪ ಹಚ್ಚಲು ಹೊರಟಳು.

ಬುಚ್ಚಿಯ ಮಾತುಗಳು ಪಂಚಮಿಗೆ ಕನ್ನಡಿ ಮುಖಕ್ಕೆ ಹಿಡಿದಂತೆ ಅನಿಸಿತ್ತು. ಬುಚ್ಚಿಯ ಮಾತುಗಳನ್ನು ನೆನೆಯುತ್ತಾ ತಾನೆಲ್ಲಿ ಎಡವಿದೆ ಎಂದು ಯೋಚಿಸುತ್ತ ಹಾಗೆ ಕುಳಿತು ಬಿಟ್ಟಳು. ಮನೆಯ ಹೊರಗಡೆ ಬೆಳಕು ಕಳೆದು ಕತ್ತಲೆ ಆವರಿಸತೊಡಗಿತ್ತು, ಆದರೆ ಪಂಚಮಿಯ ಮನಸ್ಸಲ್ಲಿ ಹೊಸ ಭರವಸೆಯ ಬೆಳಕು ಮೂಡ ತೊಡಗಿತ್ತು. ಏನನ್ನೋ ನಿರ್ಧರಿಸಿದಂತೆ ಬಿಳಿ ಹಾಳೆಯ ಮೇಲೆ ಬರೆಯುತ್ತ ಕುಳಿತಳು. ಮನೆಯ ಲೈಟ್‌ ಆನ್‌ಆಯಿತು. ಪಂಚಮಿ ಓದಿ ಕೆಳಗಿಟ್ಟಿದ್ದ ಪುಸ್ತಕದ ಮೇಲಿದ್ದ ಭಾಗ್ಯ ಜಯಪ್ರಕಾಶ್‌ ಎಂಬ ಹೆಸರು ಆ ಬೆಳಕಿನಲ್ಲಿ ಹೊಳೆಯತೊಡಗಿತ್ತು. ಪಂಚಮಿಯು ಅದನ್ನು ನೋಡಿ ನನ್ನ ಬುಚ್ಚಿ ಎಂದು ಮನದಲ್ಲಿ ಹೇಳಿಕೊಂಡು ಕೆಲಸಕ್ಕೆ ರಾಜೀನಾಮೆ ಕೊಡಲು ಬರೆದಿದ್ದ ಪತ್ರವನ್ನು ಕೈಗೆತ್ತಿಕೊಂಡು ಎದ್ದು ಹೊರಟಳು…..ದೇವರ ಮುಂದೆ ಕೂತಿದ್ದ ಬುಚ್ಚಿಯ ಮುಖದಲ್ಲಿ ಸಣ್ಣಗೆ ಮಂದಹಾಸ ಮೂಡಿತು.

*ಶ್ರೀನಾಥ್‌ ಹರದೂರು ಚಿದಂಬರ, ನೆದರ್‌ಲ್ಯಾಂಡ್ಸ್‌

Advertisement

Udayavani is now on Telegram. Click here to join our channel and stay updated with the latest news.

Next