Advertisement

Desi Swara: ಓದುಗರನ್ನು ಕಾಣದ ಲೋಕಕೊಯ್ಯುವ “ನಂಬಿಕೆಯೆಂಬ ಗಾಳಿಕೊಡೆ’

01:32 PM Feb 17, 2024 | Team Udayavani |

ಬದುಕಿನ ಅನೂಹ್ಯ ಸಂಬಂಧಗಳ ಪೇಚುಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತ ಕಣ್ಣೆದುರಿಗಿದ್ದರೂ ಕಾಣದ ಲೋಕವೊಂದರ ಒಳನೋಟಗಳನ್ನು ವೀರಲೋಕ ಬುಕ್ಸ್‌ ಪ್ರಕಾಶನದ ಡಾ| ಪ್ರೇಮಲತಾ ಬಿ. ಅವರ ನಂಬಿಕೆಯೆಂಬ ಗಾಳಿಕೊಡೆ ಕಥಾಸಂಕಲನದಲ್ಲಿ ಕಾಣಬಹುದು.

Advertisement

ಹತ್ತು ಕತೆಗಳಿರುವ ಈ ಸಂಕಲನದ ಶೀರ್ಷಿಕೆಯ ನಂಬಿಕೆಯೆಂಬ ಗಾಳಿಕೊಡೆ ಅರ್ಥದಂತೆ ನಂಬಿಕೆಯೇ ಮೂಲಾಧಾರವಾಗಿ ಓದುಗರಿಗೆ ಕತೆಯಿಂದ ಕತೆಗೆ ಹೊಸ ಜಗತ್ತನ್ನು ಪರಿಚಯಿಸುತ್ತ ಸಾಗುತ್ತದೆ. ಅದರಲ್ಲೂ ಭಾಷೆಯನ್ನು ನುರಿತ ಕತೆಗಾರರಂತೆ ಬಳಸಿರುವುದು ಅವರು ಕಥಾಲೋಕವನ್ನು ಗಂಭೀರವಾಗಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಉದಾಹರಣೆಯಾಗಿದೆ. ಇಲ್ಲಿರುವ ಕತೆಗಳು ಒಂದಕ್ಕಿಂತ ಒಂದು ವಿಷಯ ಮತ್ತು ವಸ್ತುವಿನ ಆಯ್ಕೆಯಿಂದ ವಿಶೇಷತೆಯಿಂದ ಕೂಡಿವೆ. ಗ್ರಾಮ ಜಗತ್ತಿನಿಂದ ಹಿಡಿದು ಸಿರಿಯಾ ದೇಶದವರಿಗೂ ಇವರ ಕತೆಗಳ ವಿಷಯ ವಸ್ತುಗಳು ಹರಡಿವೆ.

ಮ್ಯಾಜಿಕ್‌ ಮಶ್ರೂಮ್‌ ಸಂಕಲನದ ಮೊದಲ ಕತೆಯಾದ ಮ್ಯಾಜಿಕ್‌ ಮಶ್ರೂಮ್‌ ಕತೆಯಲ್ಲಿ ನಂಬಿಕೆಗಳ ನಡುವೆ ಸಿಲುಕಾಡುವ ಮನುಷ್ಯನ ದ್ವಂದ್ವಗಳ ನಡುವಿನ ಹೊಯ್ದಾಟವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ. ಕತೆಯೊಳಗಿನ ಕತೆಯಂತೆ ಸಾಗುವ ಈ ಕತೆಯ ವಿಶೇಷತೆ ಎಂದರೆ ಕತೆಯ ಕುತೂಹಲವನ್ನು ಕೊನೆಯವರೆಗೂ ಉಳಿಸಿಕೊಂಡು ಆಪ್ತವಾದ ಮತ್ತು ಗಟ್ಟಿ ನಿರೂಪಣೆಯೊಂದಿಗೆ ಹೊಸ ಲೋಕದೊಡನೆ ಮುಖಾಮುಖೀ ಮಾಡಿಸುತ್ತದೆ.

ಶಶಿ ಎಂಬುವನು ತನ್ನ ಗೆಳೆಯರ ಜತೆ ಸೇರಿ ಊರಲ್ಲಿ ಹಬ್ಬಿರುವ ಒಂದು ಕುತೂಹಲಕಾರಿ ಸುದ್ದಿಯನ್ನು ಬೆನ್ನು ಹತ್ತಿ ಹೊಸ ಹೊಸ ಅನುಭವಗಳಿಗೆ ತೆರೆದುಕೊಳ್ಳುತ್ತಾನೆ. ಇಡೀ ಊರಿಗೆ ಊರೇ ಆಗಂತುಕನ ಆಗಮನದಿಂದ ಭಯಭೀತರಾಗಿರುತ್ತಾರೆ. ಊರಲ್ಲಿ ಸಾವುನೋವುಗಳು ಹೆಚ್ಚಾಗುತ್ತವೆ. ಶಶಿ ಇದರ ಹಿನ್ನೆಲೆಯನ್ನು ಅರಿಯಲು ದುಸ್ಸಾಹಸ ಮಾಡಿ ಕೊನೆಗೆ ತಾನೂ ಸಹ ಅದರ ತಾಳಕ್ಕೆ ಸಿಲುಕಿ ಒದ್ದಾಡುವುದನ್ನು ಕತೆಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದ್ದಾರೆ. ಪತ್ತೆದಾರಿ ಅಂಶ ಇರುವುದು ಕತೆಯಲ್ಲಿ ಎದ್ದು ಕಾಣುತ್ತದೆ.

ಎಂಕಣ್ಣ, ಶಶಿ, ರಾಜ, ಸೀನ, ಗೋಪಿ, ಅವನ ಹೆಂಡತಿ ಹೀಗೆ ಪಾತ್ರ ಪರಿಚಯ ಕತೆ ಬೆಳೆದಂತೆ ಹಠಾತ್ತನೆ ಆಗಿ ಎದುರು ಬಂದು ನಿಲ್ಲುತ್ತವೆ. ಇದು ಕತೆಗಾರರ ಪ್ರಯೋಗ ಎನ್ನಬಹುದಾದರೂ ಸಾಮಾನ್ಯ ಓದುಗರಿಗೆ ಒಂದಷ್ಟು ತೊಡಕಾಗಬಹುದು.

Advertisement

ನಂಬಿಕೆಯೆಂಬ ಗಾಳಿಕೊಡೆ ಪಾರ್ಟಿ ಮಾಡಿ ಬರುವಾಗ ತನ್ನ ಮೇಲೆ ಅತ್ಯಾಚಾರವಾಯಿತು ಎಂದು ಹೆಣ್ಣುಮಗಳು ತನ್ನ ಗಂಡನೆದುರು ನಡೆದ ವಿಷಯವನ್ನೆಲ್ಲ ಹಂಚಿಕೊಳ್ಳುತ್ತಾಳೆ. ಆ ಅನಾಮಿಕ ಆರೋಪಿಯ ಬಗ್ಗೆ ನಿರಂತರ ತನಿಖೆ ನಡೆಯುತ್ತದೆ. ಪೋಲಿಸ್‌ ಇಲಾಖೆ ಎಲ್ಲ ಕಡೆಗೂ ಪ್ರಯತ್ನಿಸಿದರೂ ಸುಳಿವು ಸಿಗುವುದಿಲ್ಲ. ಕೊನೆಗೆ ಹಳ್ಳಿಯವನೊಬ್ಬ ತಾನು ಮೂರು ವರ್ಷದ ಹಿಂದೆ ಡ್ರೈವರ್‌ ಆಗಿ ಕೆಲಸ ಮಾಡುವಾಗ ಆದ ಘಟನೆಯನ್ನು ಮೆಲುಕು ಹಾಕುವುದರೊಂದಿಗೆ ಕತೆಗೆ ಇನ್ನೊಂದು ಆಯಾಮ ಸಿಗುತ್ತದೆ. ಕತೆ ಕೊನೆಯವರೆಗೂ ಕುತೂಹಲದಿಂದ ಓದಿಸಿಕೊಳ್ಳುತ್ತದೆ.

ವ್ಯಥೆಯೊಂದು ಭ್ರಮೆಯಾಗಿ ಅಮ್ಮ ಎನ್ನುವುದು ಯಾವಾಗಲೂ, ಎಲ್ಲರಿಗೂ ಭಾವನಾತ್ಮಕ ನಂಟು. ಸಣ್ಣಪುಟ್ಟ ವೈರುಧ್ಯಗಳ ನಡುವೆ ಸದಾ ಮೀಟುವ ಭಾವ ತಂತು. ತಾಯಿ ಮತ್ತು ಮಗಳ ನಡುವಿನ ತೊಳಲಾಟ ಈ ಕತೆಯಲ್ಲಿ ಪರಿಣಾಮಕಾರಿಯಾಗಿ ಅಭಿವ್ಯಕ್ತಗೊಂಡಿದೆ. ಅಮ್ಮ ಯಾವಾಗಲೂ ತನ್ನ ನೋವು ನಲಿವುಗಳನ್ನು ಬಚ್ಚಿಟ್ಟುಕೊಂಡು ತನ್ನ ಮಗನ ಪರವೇ ಇರುವವಳು, ಅದರಲ್ಲೂ ಹೆಣ್ಣುಮಕ್ಕಳ ಮೇಲೆ ಎಷ್ಟೇ ಪ್ರೀತಿ ಇದ್ದರೂ ತನ್ನ ಮಗನನ್ನು ಬಿಟ್ಟುಕೊಡಲಾರದವಳು. ಈ ಭಾವನಾತ್ಮಕ ವಿಷಯಗಳನ್ನು ಇರಿಸಿಕೊಂಡಿರುವ ಕತೆ ಓದುಗರನ್ನು ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತದೆ. ಸರಳ ನಿರೂಪಣೆ ಇರುವ ಈ ಕತೆ ತಾಯಿ ಮಗಳ ನಡುವಿನ ಆಂತರಿಕ ತುಮಲಗಳಿಗೆ ಮುಖಾಮುಖಿಯಾಗಿಸುತ್ತದೆ.

“ಸಂಬಂಧಗಳು’ ಕತೆಯಲ್ಲಿ ಪ್ರೀತಿಸಿ ಮದುವೆಯಾದ ಜೋಡಿಯೊಂದು ಬೇರ್ಪಟ್ಟು ಕೊನೆಗೆ ಸಾವಿನ ಸಂದರ್ಭಕ್ಕೆ ಬರುವ ಇದು ಸಂಬಂಧಗಳ ಬಗ್ಗೆ ಇರುವ ಕತೆ. ಸಂಕಲನದ ಇತರ ಕತೆಗಳಾದ ತೆರವು, ನಿರ್ವಾತ, ಗೊಡ್ಡು, ವರ್ತುಲ, ದ್ರೋಹ, ಹಿಂದಿಡದ ಹೆಜ್ಜೆ, ಹೊಸ ಲೋಕವನ್ನು ಪರಿಚಯಿಸುತ್ತವೆ. ಪ್ರೇಮಲತಾ ಬಿ. ಅವರ ಐದು ಬೆರಳುಗಳು ಎನ್ನುವ ಕಥಾಸಂಕಲನಕ್ಕೆ ಡಾ| ಎಚ್‌. ಗಿರಿಜಮ್ಮ ಪ್ರಶಸ್ತಿ ಬಂದಿದೆ.

*ಅನಿಲ್‌ ಗುನ್ನಾಪೂರ

Advertisement

Udayavani is now on Telegram. Click here to join our channel and stay updated with the latest news.

Next